ಹೊಸ ‘ಪ್ಲಾನ್’ನಿಂದ ತುಮಕೂರು ಪಾಲಿಕೆ ಬೊಕ್ಕಸ ಸೇರಿತು ಕೋಟ್ಯಂತರ ರೂ. ತೆರಿಗೆ

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಮೇ 16- ತುಮಕೂರು ಮಹಾನಗರ ಪಾಲಿಕೆಯ ಆರ್ಥಿಕ ಚೇತರಿಕೆಗೆ ಹೊಸದೊಂದು ಯೋಜನೆ ಜಾರಿಗೊಳಿಸಲಾಗಿದೆ. ರಾಜ್ಯದಲ್ಲೆ ಪ್ರಥಮವಾಗಿ ತೆರಿಗೆ ವಸೂಲಿಗೆ ಹ್ಯಾಂಡ್ ಹೆಲ್ಡ ಡಿವೈಸ್ ಬಳಸುತ್ತಿದ್ದು, ಇನ್ನು ಮುಂದೆ ಮನೆ ಬಾಗಿಲಿಗೆ ಅಧಿಕಾರಿಗಳು ಬಂದು ತೆರಿಗೆ ವಸೂಲಿ ಮಾಡುವ ಮೂಲಕ ಪಾಲಿಕೆಗೆ ಹೊರೆಯಾಗಿದ್ದ ಕೋಟ್ಯಾಂತರ ರೂಪಾಯಿ ತೆರಿಗೆ ಹಣ ಪಾವತಿಯಾಗಲಿದೆ.

ಕಳೆದ ಕೆಲವು ವರ್ಷಗಳಿಂದ ಪಾಲಿಕೆಯಲ್ಲಾಗುತ್ತಿದ್ದ ತೆರಿಗೆ ಸೋರಿಕೆಯನ್ನು ತಡೆಗಟ್ಟಲು ಹಾಗೂ ತೆರಿಗೆ ಸಂಗ್ರಹಣೆಯನ್ನು ಚುರುಕುಗೊಳಿಸಲು ಇದೊಂದು ಹೊಸ ಯೋಜನೆಯನ್ನು ಪ್ರಾರಂಭಿಸಲಾಗಿದೆ.

ಪಾಲಿಕೆ ಆಯುಕ್ತ ಭೂ ಬಾಲನ್ ಕೋಲ್ಕತ್ತಾ ಮೇಡ್ ಆಂಡ್ರೈಡ್ ಹ್ಯಾಂಡ್ ಹೆಲ್ಡ ಡಿವೈಸ್ ಪರಿಚಯಿಸಿ ತೆರಿಗೆ ದುರ್ಬಳಕೆ ಗೆ ಬ್ರೇಕ್ ಹಾಕಿದ್ದು, ಜಿಪಿಎಸ್ ಅಳವಡಿಸಿ ತೆರಿಗೆಗಳ್ಳರ ವಿರುದ್ದ ಬ್ರಹ್ಮಾಸ್ತ್ರ ಬಿಟ್ಟಿದ್ದಾರೆ.

ತೆರಿಗೆ ಪಾವತಿ ಸಾಫ್ಟ್‍ವೇರ್ ಒಳಗೊಂಡ ಒಟ್ಟು 40 ಆಂಡ್ರೈಡ್ ಉಪಕರಣಗಳನ್ನು ಪಾಲಿಕೆ ಈಗಾಗಲೇ ಆಯಾ ವಾರ್ಡ್ ಗಳ ಸಂಬಂಧಪಟ್ಟ 15 ತಂಡಗಳಿಗೆ ವಿತರಿಸಲಾಗಿದೆ.  ಈ ವಿನೂತನ ವ್ಯವಸ್ಥೆಯಲ್ಲಿ ಅಧಿಕಾರಿಗಳು 15 ತಂಡಗಳಾಗಿ ಪ್ರತಿ ವಾರ್ಡ್ ನಲ್ಲೂ ಸಂಚರಿಸಿ ಮನೆ ಬಾಗಿಲಿಗೆ ತೆರಳಿ ತೆರಿಗೆ ವಸೂಲಿ ಮಾಡುತ್ತಿದ್ದಾರೆ.

ಈ ಮೂಲಕ ನೀರಿನ ತೆರಿಗೆ ಸೇರಿದಂತೆ ಎಲ್ಲಾ ತೆರಿಗೆಗಳ ಪಾವತಿ ವಿಳಂಬ ಆಗುವುದು ತಪ್ಪಿಸಿ, ಆರ್ಥಿಕ ಚೇತರಿಕೆ ಕಂಡುಕೊಂಡಿದೆ ಎಂದು ಈ ಸಂಜೆ ಪತ್ರಿಕೆಯೊಂದಿಗೆ ಪಾಲಿಕೆ ಆಯುಕ್ತ ಭೂಬಾಲನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅನಧಿಕೃತ ನೀರು ಸಂಪರ್ಕ ಕಡಿತಕ್ಕೆ ಆದೇಶ ಪಾಲಿಕೆ ವ್ಯಾಪ್ತಿಯಲ್ಲಿ ಅನಧೀಕೃತ ನೀರಿನ ಸಂಪರ್ಕಗಳು ಹೆಚ್ಚಾಗಿದ್ದು, ಅದಕ್ಕೂ ಕೂಡ ದಂಡ ವಿಧಿಸಿ ನೀರಿನ ಸಂಪರ್ಕ ಕಡಿತಗೊಳಿಸಲು ಆಯುಕ್ತ ಭೂಬಾಲನ್ ಆದೇಶಿಸಿದ್ದಾರೆ.

ಈ ಮೊದಲು ಪಾಲಿಕೆ ಕಚೇರಿಗೆ ಆಗಮಿಸಿ ಗಂಟೆಗಟ್ಟಲೇ ಕ್ಯೂನಲ್ಲಿ ನಿಂತು ತೆರಿಗೆ ಕಟ್ಟಲು ಸಾರ್ವಜನಿಕರು ಹೈರಾಣಗುತ್ತಿದ್ದರು..ಇದರಿಂದಾಗಿ ತೆರಿಗೆ ಹಣ ಸಂಗ್ರಹವಾಗದೇ ಕೋಟ್ಯಂತರ ರೂಪಾಯಿಗಳು ಹಾಗೆ ಬಾಕಿ ಉಳಿದುಕೊಂಡಿತ್ತು.

ಇದೀಗ ಹೊಸ ಯೋಜನೆಯಿಂದಾಗಿ ಮನೆ ಬಾಗಿಲಿಗೆ ಬಂದ ಅಧಿಕಾರಿಗಳಿಗೆ ನಗದು, ಡಿಡಿ, ಚೆಕ್, ಕಾರ್ಡ್ ಸ್ವೈಪಿಂಗ್ ಎಲ್ಲಾ ಮೂಲಕವೂ ತೆರಿಗೆ ಕಟ್ಟಲು ಸಾರ್ವಜನಿಕರಿಗೆ ಅನುವು ಮಾಡಿಕೊಡಲಾಗಿದೆ.

ರಾಜ್ಯದಲ್ಲಿ ತುಮಕೂರಲ್ಲಾ ಮೊದಲ ಬಾರಿಗೆ ಈ ವಿನೂತನ ಯೋಜನೆ ಜಾರಿಗೆ ತಂದ ಆಯುಕ್ತ ಭೂಬಾಲನ್ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ