ತೆರಿಗೆ ಬಾಕಿ ಉಳಿಸಿಕೊಂಡ ಛತ್ರ-ಗಾರ್ಮೆಂಟ್ಸ್ ಗಳಿಗೆ ಬೀಗ ಮುದ್ರೆ..!
ಬೆಂಗಳೂರು, ಅ.23- ತೆರಿಗೆಗಳ್ಳರ ಬೆನ್ನು ಹತ್ತಿರುವ ಬಿಬಿಎಂಪಿ ಅಧಿಕಾರಿಗಳು ಯಲಹಂಕ ವಲಯದಲ್ಲಿಂದು ಅಂದಾಜು ಒಂದು ಕೋಟಿ ತೆರಿಗೆ ಬಾಕಿ ಉಳಿಸಿಕೊಂಡಿದ್ದ ಎರಡು ಕಲ್ಯಾಣಮಂಟಪಗಳು, ಒಂದು ಗಾರ್ಮೆಂಟ್ಸ್ಗೆ ಬೀಗ ಜಡಿದಿದ್ದಾರೆ.
ಯಲಹಂಕ ವಲಯದ ಜಂಟಿ ಆಯುಕ್ತ ಡಾ.ಅಶೋಕ್ ಮಾರ್ಗದರ್ಶನದಲ್ಲಿ ಬ್ಯಾಟರಾಯನಪುರ ಉಪವಿಭಾಗದ ಸಹಾಯಕ ಕಂದಾಯಾಧಿಕಾರಿ ಗುರುಪ್ರಸನ್ನ ಅವರ ನೇತೃತ್ವದಲ್ಲಿ ಪಾಲಿಕೆ ಅಧಿಕಾರಿಗಳು ಥಣಿಸಂದ್ರ ಮುಖ್ಯರಸ್ತೆಯಲ್ಲಿರುವ ಆನಂದಮೂರ್ತಿ ಮಾಲೀಕತ್ವದ ರಾಯಲ್ ಗ್ರ್ಯಾಂಡ್ ಕಲ್ಯಾಣ ಮಂಟಪದ ಮೇಲೆ ದಾಳಿ ನಡೆಸಿದರು.
ಕಳೆದ ಏಳೆಂಟು ವರ್ಷಗಳಿಂದ ಆನಂದಮೂರ್ತಿ ಸುಮಾರು 30 ಲಕ್ಷ ರೂ. ಆಸ್ತಿ ತೆರಿಗೆ ಪಾವತಿಸಿರಲಿಲ್ಲ. ಕೆ.ಪದ್ಮನಾಭಯ್ಯ ಮತ್ತು ಪ್ರಕಾಶ್ ಎಂಬುವರ ಮಾಲೀಕತ್ವದ ಮಂಜುನಾಥ ಪ್ಯಾಲೇಸ್ ಕಲ್ಯಾಣಮಂಟಪದ ಮೇಲೆ ದಾಳಿ ಮಾಡಲಾಯಿತು. ಇವರು ಕೂಡ 20ಲಕ್ಷ ತೆರಿಗೆ ಬಾಕಿ ಉಳಿಸಿದ್ದರು. ಥಣಿಸಂದ್ರದ ಅಗ್ರಹಾರದಲ್ಲಿರುವ ಗಾರ್ಮೆಂಟ್ಸ್ ಮಾಲೀಕ ಎಂ.ವಿ.ಶ್ರೀಧರ್ ಎಂಬುವರು ಸುಮಾರು 6 ಲಕ್ಷ ತೆರಿಗೆ ಬಾಕಿ ಉಳಿಸಿದ್ದರು. ಇವರಿಗೆ ಹಲವು ಬಾರಿ ನೋಟೀಸ್ ಜಾರಿ ಮಾಡಿದ್ದರೂ ಕೂಡ ಸೂಕ್ತವಾಗಿ ಪ್ರತಿಕ್ರಿಯಿಸಿರಲಿಲ್ಲ. ಅಲ್ಲದೆ ತೆರಿಗೆ ಕಟ್ಟಿರಲಿಲ್ಲ.
ಈ ಮೂವರು ತೆರಿಗೆಗಳ್ಳರ ವಿರುದ್ಧ ಈಗಾಗಲೇ ಜಪ್ತಿ ವಾರೆಂಟ್ ಕೊಡಲಾಗಿದೆ. ಯಲಹಂಕ ಜಂಟಿ ವಲಯ ಅಶೋಕ್ ಮಾರ್ಗದರ್ಶನದಂತೆ ಈ ಮೂರೂ ಆಸ್ತಿಗಳಿಗೆ ಬೀಗ ಹಾಕಿದ್ದೇವೆ ಎಂದು ಸಹಾಯಕ ಕಂದಾಯ ಅಧಿಕಾರಿ ಗುರುಪ್ರಸನ್ನ ಈ ಸಂಜೆಗೆ ತಿಳಿಸಿದರು.
ಒಟ್ಟು ಈ ಮೂರು ಆಸ್ತಿಗಳಿಂದ 60 ಲಕ್ಷ ತೆರಿಗೆ, ಬಡ್ಡಿ ಸೇರಿ ಒಂದು ಕೋಟಿ ಬಾಕಿ ಇದೆ. ಕಂದಾಯ ವಸೂಲಾತಿ ಕಾರ್ಯಕ್ರಮದಡಿ ನಾವು ಇವುಗಳಿಗೆ ಬೀಗ ಜಡಿದಿದ್ದೇವೆ. ಸದ್ಯದಲ್ಲೇ ಯಾರ್ಯಾರು ಹೆಚ್ಚು ತೆರಿಗೆ ಬಾಕಿ ಉಳಿಸಿದ್ದಾರೋ ಅಂಥವರ ಪಟ್ಟಿ ಮಾಡಿ ಪ್ರತಿ ವಾರ ದಾಳಿ ನಡೆಸಿ ತೆರಿಗೆ ಬಾಕಿ ಇರುವ ಆಸ್ತಿಗಳಿಗೆ ಬೀಗ ಜಡಿಯುತ್ತೇವೆ ಎಂದು ಗುರುಪ್ರಸನ್ನ ಹೇಳಿದರು.