‘ನದಿ ಜೋಡಣೆಗೆ ಚಾಲನೆ ನೀಡಿದರೆ ನೀರಿನ ಸಮಸ್ಯೆ ನಿವಾರಣೆಯಾಗಲಿದೆ’

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು,ಜೂ.25- ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಮಹತ್ವಾಕಾಂಕ್ಷಿ ಯೋಜನೆಯಾದ ನದಿ ಜೋಡಣೆಗೆ ಕೇಂದ್ರ ಸರ್ಕಾರ ಚಾಲನೆ ಕೊಟ್ಟರೆ ದೇಶದ ನೀರಿನ ಸಮಸ್ಯೆ ಬಗೆಹರಿಯಲಿದೆ. ರೈತರ ಸಂಕಷ್ಟಗಳು ನಿವಾರಣೆಯಾಗಲಿದೆ ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಹೇಳಿದರು.

ಖಾಸಗಿ ಹೋಟೆಲ್‍ನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಆಗುತ್ತಿರುವ ಅತಿವೃಷ್ಟಿ ಹಾಗೂ ಅನಾವೃಷ್ಟಿ ತಡೆಯಲು ಹಾಗೂ ದೇಶದ ಸರ್ವಾಂಗೀಣ ಅಭಿವೃದ್ದಿ ದೃಷ್ಟಿಯಿಂದ ಪಶ್ಚಿಮ ಘಟದ ಅಘನಾಶಿನಿ ನದಿ ಕೊಳದಿಂದ ಬೆಂಗಳೂರು ಮತ್ತು ಮಧ್ಯಭಾಗದಲ್ಲಿ ಬರುವ ಪಟ್ಟಣಗಳು, ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆಯನ್ನು ರೂಪಿಸಿದ್ದು, 10ರಿಂದ 12 ಸಾವಿರ ಕೋಟಿ ವೆಚ್ಚವಾಗಲಿದೆ.

ಇಂದು ಅಥವಾ ನಾಳೆ ಮುಖ್ಯಮಂತ್ರಿ ಕುಮಾರಸ್ವಾಮಿ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ಗಮನಕ್ಕೆ ತರುತ್ತೇನೆ ಎಂದು ಹೇಳಿದರು.  ಅವಶ್ಯಬಿದ್ದಲ್ಲಿ ಕೇಂದ್ರ ಸರ್ಕಾರದ ಗಮನಕ್ಕೂ ತರುತ್ತೇನೆ ಎಂದು ಹೇಳಿದ ಅವರು, ಭಾರತ ದೇಶ ಕೃಷಿ ಪ್ರಧಾನವಾದುದು.

ದೇಶದೆಲ್ಲೆಡೆ ಜಲಸಂಪನ್ಮೂಲ ಕೊರತೆ ಇರುವುದರಿಂದ ನದಿ ನೋಡಣೆ ಮಾಡಿದರೆ ಸಮುದ್ರದ ಪಾಲಾಗುತ್ತಿರುವ ನೀರನ್ನು ಕೃಷಿಗೆ ಬಳಸಬಹುದು. ಕೂಡಲೇ ಈ ಯೋಜನೆಗೆ ಚಾಲನೆ ನೀಡಬೇಕೆಂದು ಅವರು ಆಗ್ರಹಿಸಿದರು.

ಉತ್ತರ ಕನ್ನಡ ಜಿಲ್ಲೆಯಲ್ಲಿ ಹರಿಯುವ ಅಘನಾಶಿನಿ ನದಿಯಿಂದ 50ರಿಂದ 60 ಟಿಎಂಸಿ ನೀರನ್ನು ತುಮಕೂರು ಹಾಗೂ ಚಿತ್ರದುರ್ಗಕ್ಕೆ ತರಬೇಕು, ಪರಿಸರಕ್ಕೆ ಧಕ್ಕೆಯಾಗದಂತೆ ಈ ಯೋಜನೆ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

Facebook Comments