ಹೊನ್ನಾದೇವಿ ಭವಿಷ್ಯ : ಶಿರಾದಲ್ಲಿ ಟಿ.ಬಿ.ಜಯಚಂದ್ರ ಗೆಲುವು ಖಚಿತ..!?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.9- ಚುನಾವಣೋತ್ತರ ಸಮೀಕ್ಷೆಯಲ್ಲಿ ಕಾಂಗ್ರೆಸ್ ಸೋಲಲಿದೆ ಎಂಬ ವರದಿಯ ನಡುವೆಯೂ, ಶಿರಾದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ಗೆಲ್ಲಲಿದ್ದಾರೆ ಎಂದು ಹೆಬ್ಬೂರು ಹೊನ್ನಾದೇವಿ ಬಲಗಡೆ ಹೂ ನೀಡಿರುವುದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ವಿಶ್ವಾಸವನ್ನು ಹೆಚ್ಚಿಸಿದೆ.

ಕಳೆದ ಲೋಸಕಭೆ ಚುನಾವಣೆ ವೇಳೆ ಮಂಡ್ಯದಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಸುಮಲತಾ ಅವರು ಗೆಲ್ಲುತ್ತಾರೋ ಇಲ್ಲವೋ ಎಂಬ ಗೊಂದಲದಲ್ಲಿದ್ದಾಗ ಅಭಿಮಾನಿಗಳು ಇಲ್ಲಿಗೆ ಬಂದು ಪೂಜೆ ಮಾಡಿಸಿ ಹೂ ಕೇಳಿದ್ದರು. ಆಗ ಬಲಗಡೆ ಹೂ ನೀಡಿತ್ತು. ಅದರಂತೆ ಫಲಿತಾಂಶದಲ್ಲಿ ಸುಮಲತಾ ಜಯಗಳಿಸಿದ್ದರು.

ಈಗ ಶಿರಾ ಮತ್ತು ರಾಜರಾಜೇಶ್ವರಿನಗರದ ಕ್ಷೇತ್ರಗಳಿಗೆ ನಡೆದಿರುವ ಉಪಚುನಾವಣೆ ಫಲಿತಾಂಶದ ಬಗ್ಗೆ ವ್ಯಾಪಕ ಕುತೂಹಲ ಇದೆ. ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಗೆ ಈ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ.  ಸಿ ವೋಟರ್ಸ್ ಹಾಗೂ ಇತರ ಸಂಸ್ಥೆಗಳು ನಡೆಸಿರುವ ಚುನಾವಣೋತ್ತರ ಸಮೀಕ್ಷೆಗಳು ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಹೇಳಿವೆ.

ಆದರೆ, ತುಮಕೂರು ತಾಲ್ಲೂಕು ಹೆಬ್ಬೂರಿನಲ್ಲಿರುವ ಅತಿಥಿಮಠದ ಶ್ರೀ ಹೊನ್ನಾದೇವಿ ದೇವರು ಕಾಂಗ್ರೆಸ್ ಕಾರ್ಯಕರ್ತರಿಗೆ ಬಲಗಡೆ ಹೂ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ಪೂಜೆ ಮಾಡಿಸಿ ಶಿರಾದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ಗೆಲ್ಲುವುದಾದರೆ ಬಲಗಡೆ ಹೂ ಕೊಡು ತಾಯಿ ಎಂದು ಬೇಡಿಕೊಂಡಿದ್ದರು. ದೇವಿ ಬಲಗಡೆ ಹೂ ನೀಡಿರುವ ವಿಡಿಯೋ ಈಗ ವ್ಯಾಪಕ ವೈರಲ್ ಆಗಿದೆ. ನಾಳೆ ಮತ ಎಣಿಕೆ ನಡೆಯಲಿದ್ದು ಎಲ್ಲಾ ಕುತೂಹಲಗಳಿಗೆ ಉತ್ತರ ಸಿಗಲಿದೆ.

Facebook Comments