ಬಿಜೆಪಿಯೊಂದಿಗೆ ಟಿಡಿಪಿ ವಿಲೀನ..?

ಈ ಸುದ್ದಿಯನ್ನು ಶೇರ್ ಮಾಡಿ

ಹೈದರಾಬಾದ್,ಏ.1- ಆಂಧ್ರ ಪ್ರದೇಶದ ಮಹತ್ವದ ಬೆಳವಣಿಗೆಯಲ್ಲಿ ತೆಲುಗು ದೇಶಂ ಪಕ್ಷ ಬಿಜೆಪಿಯೊಂದಿಗೆ ವಿಲೀನವಾಗುವ ಮಾತುಗಳು ಕೇಳಿ ಬರುತ್ತಿವೆ. ಇತ್ತೀಚೆಗಷ್ಟೇ ಟಿಡಿಪಿಯ ರಾಜ್ಯಸಭೆಯ ಮಾಜಿ ಸದಸ್ಯರು, ಮುಖಂಡರು, ಮಾಜಿ ಸಚಿವರು ಬಿಜೆಪಿಗೆ ಸೇರುತ್ತಿರುವ ಸಂದರ್ಭದಲ್ಲಿ ಚಂದ್ರಬಾಬು ನಾಯ್ಡು ಕೂಡ ಬಿಜೆಪಿ ಸೇರುತ್ತಾರೆ ಎಂಬ ಮಾತುಗಳು ಅಖಂಡ ಆಂಧ್ರದಾದ್ಯಂತ ಕೇಳಿ ಬರುತ್ತಿವೆ.

ಎನ್‍ಡಿಎನಲ್ಲಿ ಗುರುತಿಸಿಕೊಂಡಿದ್ದ ಟಿಡಿಪಿ ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಎನ್‍ಡಿಎ ಸಖ್ಯ ತೊರೆದು ಏಕಾಂಗಿಯಾಗಿ ಸ್ಪರ್ಧಿಸಿ ಮುಖಭಂಗ ಅನುಭವಿಸಿತ್ತು. ಇದಲ್ಲದೆ ಈಗ ಆಂಧ್ರದಲ್ಲಿ ಮುಖ್ಯಮಂತ್ರಿ ಜಗನ್‍ಮೋಹನ್‍ರೆಡ್ಡಿ ನೇತೃತ್ವದ ವೈಎಸ್‍ಆರ್ ಕಾಂಗ್ರೆಸ್ ಜನಪ್ರಿಯತೆ ಇಮ್ಮಡಿಯಾಗಿದ್ದು, ಅನ್ಯ ಪಕ್ಷಗಳು ಅಲ್ಲಿ ನೆಲೆಯೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಇದರ ನಡುವೆ ಪ್ರಾದೇಶಿಕ ಪಕ್ಷವಾಗಿರುವ ಟಿಡಿಪಿ, ಈಗ ರಾಷ್ಟ್ರೀಯ ಪಕ್ಷವೊಂದರ ಆಶ್ರಯ ಪಡೆಯುವ ನಿಟ್ಟಿನಲ್ಲಿ ಇಡೀ ಪಕ್ಷವನ್ನೇ ವಿಲೀನಗೊಳಿಸುವ ಪ್ರಕ್ರಿಯೆಗೆ ಕೈ ಹಾಕುತ್ತಿದೆ ಎಂದೂ ಹೇಳಲಾಗುತ್ತಿದೆ.

ಬಿಜೆಪಿಯೊಂದಿಗೆ ಈಗಾಗಲೇ ಮೊದಲ ಹಂತದ ಮಾತುಕತೆ ಕೂಡ ನಡೆದಿದೆ. ಸದ್ಯದಲ್ಲೇ ವಿಲೀನ ಪ್ರಕ್ರಿಯೆಗಳು ಶುರುವಾಗಲಿವೆ ಎಂದು ಟಿಡಿಪಿಯ ಮುಖಂಡರೊಬ್ಬರು ತಿಳಿಸಿದ್ದಾರೆ.
ಪಕ್ಷದ ಅಸ್ತಿತ್ವ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಚಂದ್ರಬಾಬು ನಾಯ್ಡು ಕೂಡ ಈ ನಿರ್ಧಾರ ಕೈಗೊಳ್ಳುವ ಸಾಧ್ಯತೆಯೂ ದಟ್ಟವಾಗಿಕೇಳಿ ಬಂದಿದೆ.

Facebook Comments