ಮತ್ತೇರಿದ ಅಪ್ರಾಪ್ತರಿಂದ ಟೀ ಅಂಗಡಿಯವನಿಗೆ ಗುಂಡೇಟು

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಅ.18- ರಾತ್ರಿಯೆಲ್ಲಾ ಮೋಜು-ಮಸ್ತಿ ಮಾಡಿದ ಅಪ್ರಾಪ್ತ ಬಾಲಕರ ತಂಡ ಮುಂಜಾನೆ ಟೀ ಅಂಗಡಿಯವನಿಗೆ ಗುಂಡಿಟ್ಟು ಹತ್ಯೆ ಮಾಡಲು ಯತ್ನಿಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

ಸಫ್ದರ್‍ಜಂಗ್ ಪ್ರಾಂತ್ಯದಲ್ಲಿ ಘಟನೆ ನಡೆದಿದ್ದು, ಗುಂಡೇಟು ತಿಂದ 26 ವರ್ಷದ ರಾಮಕೃಷ್ಣ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಅವರ ಆರೋಗ್ಯ ಸ್ಥಿರವಾಗಿದೆ. ಘಟನೆಗೆ ಸಂಬಂಧ ಪಟ್ಟಂತೆ ಮೂವರು ಬಾಲಕರನ್ನು ಬಂಧಿಸಲಾಗಿದ್ದು, ಮತ್ತೊಬ್ಬ ಪರಾರಿಯಾಗಿದ್ದಾನೆ.

ಮುಂಜಾನೆ 4 ಗಂಟೆ ಸುಮಾರಿನಲ್ಲಿ ರಾಮಕೃಷ್ಣ ತನ್ನ ಟೀ ಅಂಗಡಿ ಆರಂಭಿಸುವ ಸನ್ನಾಹದಲ್ಲಿದ್ದಾಗ, ಅಲ್ಲಿಗೆ ಬಂದ ಮೂವರು ಬಾಲಕರು ಉಪಹಾರ ಕೇಳಿದ್ದಾರೆ. ಅಂಗಡಿಯನ್ನು ಈಗಷ್ಟೆ ತೆರೆಯುತ್ತಿದ್ದೇನೆ. ತಿಂಡಿ ಮಾಡಲು ಸಮಯ ಬೇಕಾಗುತ್ತದೆ ಎಂದು ರಾಮಕೃಷ್ಣ ಹೇಳಿದ್ದಾರೆ.

ಅದಕ್ಕೆ ಸಮ್ಮತಿ ಸೂಚಿಸಿದ ಬಾಲಕರು ಸ್ವಲ್ಪ ದೂರದಲ್ಲಿ ನಿಂತು ಧೂಮಪಾನ ಮಾಡುತ್ತಿದ್ದರು. ಮುಂಜಾನೆಯ ನಿಸರ್ಗ ಕರೆಯನ್ನು ತೀರಿಸಿಕೊಳ್ಳಲು ರಾಮಕೃಷ್ಣ ಪಕ್ಕಕ್ಕೆ ಹೋಗಿದ್ದರು. ಆ ವೇಳೆ ಬಾಲಕರು ಅಸಭ್ಯವಾಗಿ ಮಾತನಡಿದ್ದರು ಎನ್ನಲಾಗಿದೆ. ಇದು ವಾದ ವಿವಾದಕ್ಕೆ ಕಾರಣವಾಗಿದೆ.

ಬಾಲಕರು ತಮ್ಮ ಸ್ನೇಹಿತನೊಬ್ಬನಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ಆತ ಅಲ್ಲಿಗೆ ಬಂದವನೇ ಟೀ ಅಂಗಡಿಯವನಿಗೆ ಗುಂಡು ಹಾರಿಸಿದ್ದಾನೆ.

ರಾಮಕೃಷ್ಣನ ಕಾಲಿಗೆ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣ ದಾಖಲಿಸಲಾಗಿದ್ದು, ತಲೆ ಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಯನ್ನು ಶೀಘ್ರ ಬಂಧಿಸುವುದಾಗಿ ಡಿಸಿಪಿ ಗೌರವ್ ಶರ್ಮಾ ತಿಳಿಸಿದ್ದಾರೆ.

Facebook Comments