ನಂ.1 ಸ್ಥಾನ ಉಳಿಸಿಕೊಳ್ಳಲು ಕೊಹ್ಲಿ ಹುಡುಗರ ಹೋರಾಟ

ಈ ಸುದ್ದಿಯನ್ನು ಶೇರ್ ಮಾಡಿ

ಅಹಮದಾಬಾದ್, ಮಾ.3- ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಸೋತ ನಂತರ ಫಿನಿಕ್ಸ್ ಪಕ್ಷಿಯಂತೆ ಎದ್ದು ಬಂದು ಗೆಲುವಿನ ಓಟ ಆರಂಭಿಸಿರುವ ವಿರಾಟ್ ಕೊಹ್ಲಿ ಹುಡುಗರು ನಾಳೆಯಿಂದ ಇಲ್ಲಿ ಆರಂಭವಾಗುತ್ತಿರುವ ಅಂತಿಮ ಟೆಸ್ಟ್‍ನಲ್ಲಿ ಗೆಲ್ಲುವ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್‍ನಲ್ಲಿ ಟಾಪ್ 1 ಸ್ಥಾನವನ್ನು ಉಳಿಸಿಕೊಳ್ಳಲು ಹೋರಾಟ ನಡೆಸಲಿದ್ದಾರೆ.

ವಿಶ್ವದ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣ ಎಂದೇ ಬಿಂಬಿಸಿಕೊಂಡಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಹಗಲು ರಾತ್ರಿ ಪಂದ್ಯವನ್ನು 2ನೆ ದಿನದಲ್ಲಿ ಗೆದ್ದು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿರುವ ವಿರಾಟ್ ಪಡೆಯು ನಾಳೆಯಿಂದ ಆರಂಭಗೊಳ್ಳುವ ಅಂತಿಮ ಟೆಸ್ಟ್‍ನಲ್ಲಿ ಸ್ಪಿನ್ ಬೌಲಿಂಗ್‍ನತ್ತಲೇ ಗಮನ ಹರಿಸಿದ್ದಾರೆ.

ಈ ಹಿಂದೆ ನಡೆದ ಪಂದ್ಯದ ಎರಡನೇ ಇನ್ನಿಂಗ್ಸ್‍ನಲ್ಲಿ ಸ್ಪಿನ್ನರ್‍ಗಳಾದ ರವಿಚಂದ್ರನ್ ಅಶ್ವಿನ್ (4 ವಿಕೆಟ್), ಅಕ್ಷರ್‍ಪಟೇಲ್ (5 ವಿಕೆಟ್), ವಾಷಿಂಗ್ಟನ್ ಸುಂದರ್ (1 ವಿಕೆಟ್) ಪಡೆದು ಇಂಗ್ಲೆಂಡ್‍ನ ಬ್ಯಾಟಿಂಗ್ ಬಲವನ್ನು ಮುರಿದಿದ್ದರು.

ಈಗ ನಾಳೆಯಿಂದ ನಡೆಯುವ ಪಂದ್ಯದಿಂದ ವೇಗಿ ಜಸ್‍ಪ್ರೀತ್ ಬೂಮ್ರಾ ಹೊರಗುಳಿದಿರುವುದರಿಂದ ಅವರ ಸ್ಥಾನದಲ್ಲಿ ವೇಗಿ ಉಮೇಶ್‍ಯಾದವ್‍ರ ಬದಲು ಕುಲ್‍ದೀಪ್ ಯಾದವ್‍ಗೆ ಸ್ಥಾನ ಕಲ್ಪಿಸಿ ಬೌಲಿಂಗ್ ಬಲವನ್ನು ಬಲಿಷ್ಠಗೊಳಿಸುವತ್ತ ವಿರಾಟ್ ಕೊಹ್ಲಿ ಚಿಂತಿಸಿದ್ದಾರೆ.

ಮತ್ತೊಂದೆಡೆ ಅಂತಿಮ ಪಂದ್ಯವನ್ನು ಗೆದ್ದು ಸರಣಿಯನ್ನು 2-2 ರಿಂದ ಸಮಬಲಗೊಳಿಸಲು ಇಂಗ್ಲೆಂಡ್ ನಾಯಕ ಜೋ ರೂಟ್ ಅವರು ತಮ್ಮದೇ ಆದ ಲೆಕ್ಕಾಚಾರ ಹಾಕಿಕೊಂಡಿದ್ದಾರೆ.

Facebook Comments

Sri Raghav

Admin