ಬೆಂಗಳೂರು ತಂತ್ರಜ್ಞಾನ ಶೃಂಗಸಭೆ-2020 ಸಜ್ಜು, ಪ್ರಧಾನಿ ಮೋದಿ ಉದ್ಘಾಟನೆ
ಬೆಂಗಳೂರು, ನ.4- ರಾಜ್ಯ ಸರ್ಕಾರವು ಎಲೆಕ್ಟ್ರಾನಿಕ್ಸ್, ಐಟಿ-ಬಿಟಿ ಹಾಗೂ ವಿಜ್ಞಾನ -ತಂತ್ರಜ್ಞಾನ ಇಲಾಖೆಯು ಆಯೋಜಿಸುತ್ತ ಬಂದಿರುವ ರಾಜ್ಯದ ಹೆಮ್ಮೆಯ ಸಮಾವೇಶವಾದ 23ನೆ ಆವೃತ್ತಿಯ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯು (ಬಿಟಿಎಸ್) ನ.19ರಿಂದ 21ರ ವರೆಗೆ ನಡೆಯಲಿದೆ.ಜಾಗತಿಕ ಪಿಡುಗಿನ ಸವಾಲುಗಳ ಮಧ್ಯೆ ಇದೇ ಮೊದಲ ಬಾರಿಗೆ ಶೃಂಗಸಭೆಯು ವರ್ಚುವಲ್ ಸ್ವರೂಪದಲ್ಲಿ ನಡೆಯಲಿದ್ದು, ಇದಕ್ಕೆ ಪೂರಕವಾಗಿ ಶೃಂಗಸಭೆಯ ಮುಖ್ಯ ಆಶಯವು ಭವಿಷ್ಯ ಈಗಲೇ ಎಂದು ನಿರ್ಧರಿಸಲಾಗಿದೆ.
ಇದು ಭವಿಷ್ಯದ ಪ್ರಗತಿಯನ್ನು ತ್ವರಿತಗೊಳಿಸುವ ಮತ್ತು ನಾವೀನ್ಯತೆಗಳು ಮತ್ತು ಅತ್ಯಾಧುನಿಕ ತಂತ್ರಜ್ಞಾನದ ನೆರವಿನಿಂದ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವ ಅಗತ್ಯವನ್ನು ಪ್ರತಿಪಾದಿಸುತ್ತದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ಶೃಂಗಸಭೆಯನ್ನು ಉದ್ಘಾಟಿಸಿ ಮಾತನಾಡಲಿದ್ದಾರೆ ಎಂದು ಐಟಿ-ಬಿಟಿ ಇಲಾಖೆ ಹೊಂದಿರುವ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ್ ತಿಳಿಸಿದರು.
ಕರ್ನಾಟಕ ಬೆಂಗಳೂರು ಐಟಿ ಬಿಜ್ ಮತ್ತು ಬೆಂಗಳೂರು ಇಂಡಿಯಾ ಬಯೊ ಹೆಸರಿನ ಶೃಂಗಸಭೆಯ ಎರಡು ಹೆಮ್ಮೆಯ ಕಾರ್ಯಕ್ರಮಗಳನ್ನು ಸತತ ನಾಲ್ಕನೆ ಬಾರಿಗೆ, ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯ ಒಂದೇ ಚಾವಣಿಯಡಿ ತರಲಾಗಿದೆ.
ಈ ಮೂಲಕ ವಿಜ್ಞಾನ ಮತ್ತು ತಂತ್ರಜ್ಞಾನದ ವಿಭಿನ್ನ ಪ್ರವಾಹಗಳನ್ನು ಒಂದೇ ವೇದಿಕೆಯಡಿ ವ್ಯವಸ್ಥೆ ಮಾಡಲಾಗಿದೆ. ಶೃಂಗಸಭೆಯಲ್ಲಿ, 80 ಜಾಗತಿಕ ಪ್ರತಿಭಾನ್ವಿತರು ಸೇರಿದಂತೆ 250ಕ್ಕೂ ಹೆಚ್ಚು ವಿಷಯ ಪರಿಣಿತರು ವಿವಿಧ ವಿಷಯಗಳ ಬಗ್ಗೆ ಮಾತನಾಡಲಿದ್ದಾರೆ. ನಾಲ್ಕು ಪ್ರಮುಖ ಸಂಗತಿಗಳಾದ ಜ್ಞಾನದ ಕೇಂದ್ರ, ಆವಿಷ್ಕಾರ, ಎಲ್ಲರಿಗೂ ಆರೋಗ್ಯ (ಒನ್ ಹೆಲ್ತ್)ಮತ್ತು ವಿವಿಧ ದೇಶಗಳಿಗೆ ಸಂಬಂಧಿಸಿದ ಪ್ರತ್ಯೇಕ ಅಧಿವೇಶನಗಳು ನಡೆಯಲಿವೆ ಎಂದರು.
ವಿಶ್ವದಾದ್ಯಂತ ಕಂಡು ಬರುತ್ತಿರುವ ಕೃತಕ ಬುದ್ಧಿಮತ್ತೆ (ಎಐ), ಇಂಟರ್ನೆಟ್ ಆಫ್ ಥಿಂಗ್ಸ್ (ಐಒಟಿ), ವರ್ಚುವಲ್ ರಿಯಾಲಿಟಿ, ಬ್ಲಾಕ್ಚೇನ್ನಂತಹ ಹೊಸ ಸವಾಲಿನ ತಂತ್ರಜ್ಞಾನ ಮತ್ತು ಆವಿಷ್ಕಾರಗಳಿಗೆ ತಂತ್ರಜ್ಞರು ಒತ್ತು ನೀಡಿ ವಿಷಯ ಮಂಡನೆ ಮಾಡಲಿದ್ದಾರೆ.
ಶೃಂಗಸಭೆಯಲ್ಲಿ ಹೆಚ್ಚು ಗಮನ ಸೆಳೆಯುವ ಕ್ಷೇತ್ರಗಳ ಪೈಕಿ – ವೈಮಾಂತರಿಕ್ಷ, ರಕ್ಷಣಾ ತಂತ್ರನಾವೀನ್ಯತೆ ಮತ್ತು ಪ್ರಗತಿಗೆ ಒತ್ತು ನೀಡಲು ಬೆಂಗಳೂರು ತಂತ್ರಜ್ಞಾನ ಶೃಂಗಸಭೆ-2020 ಸಜ್ಜು ನ, ಆರೋಗ್ಯ ರಕ್ಷಣೆ, ಉದ್ಯೋಗದ ಭವಿಷ್ಯ, ಸಾರ್ವಜನಿಕ ಒಳಿತಿಗಾಗಿ ನವೋದ್ಯಮ, ಎಲೆಕ್ಟ್ರಾನಿಕ್ಸ್ ಮತ್ತು ಸೆಮಿ ಕಂಡಕ್ಟರ್, ಡಿಜಿಟಲ್ ಆರೋಗ್ಯದ ಇಮೇಜಿಂಗ್ ಮತ್ತು ಕೋವಿಡ್-19 ಪಿಡುಗು ನಿಯಂತ್ರಣದ ಸಿದ್ಧತೆ ಮುಂತಾದವು ಪ್ರಮುಖವಾಗಿವೆ ಎಂದರು.
ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ಇ. ವಿ. ರಮಣ ರೆಡ್ಡಿ, ಬಯೊಕಾನ್ ಲಿಮಿಟೆಡ್ನ ಕಾರ್ಯನಿರ್ವಾಹಕ ಅಧ್ಯಕ್ಷೆ ಡಾ. ಕಿರಣ್ ಮಜುಂದಾರ್ ಷಾ, ಆ್ಯಕ್ಸೆಲ್ ಪಾರ್ಟನರ್ಸ್ನ ಪಾರ್ಟನರ್ ಮತ್ತು ನವೋದ್ಯಮಗಳ ಕರ್ನಾಟಕ ಮುನ್ನೋಟ ತಂಡದ ಅಧ್ಯಕ್ಷ ಪ್ರಶಾಂತ್ ಪ್ರಕಾಶ್ ಉಪಸ್ಥಿತರಿದ್ದರು.