ಸಂಸತ್‍ನಲ್ಲಿ ಮತ್ತಷ್ಟು ಮಹತ್ವದ ಮಸೂದೆಗಳ ಮಂಡನೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ನ.30- ಸಂಸತ್‍ನ ಚಳಿಗಾಲದ ಅಧಿವೇಶನದಲ್ಲಿ ಗದ್ದಲ, ಕೋಲಾಹಲದ ನಡುವೆಯೂ ಹಲವಾರು ಪ್ರಮುಖ ಮಸೂದೆಗಳನ್ನು ಮಂಡಿಸಲಾಗಿದೆ. ಲೋಕಸಭೆಯಲ್ಲಿ ಕಾನೂನು ಸಚಿವ ಕಿರಣ್ ರಿಜು ಅವರು ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ನ್ಯಾಯಾೀಶರ(ವೇತನ ಮತ್ತು ಸೇವಾ ಷರತ್ತುಗಳು)ತಿದ್ದುಪಡಿ ಮಸೂದೆ 2021ನ್ನು ಮಂಡಿಸಿದ್ದಾರೆ.

ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಅವರು ಸಂತಾನೋತ್ಪತ್ತಿ ಪೂರಕ ತಂತ್ರಜ್ಞಾನ 2020ನ್ನು ಲೋಕಸಭೆಯಲ್ಲಿ ಮಂಡಿಸಿದ್ದಾರೆ. ಸಂತಾನೋತ್ಪತ್ತಿ ಸಹಾಯಕ ಕ್ಲಿನಿಕ್‍ಗಳು, ತಂತ್ರಜ್ಞಾನ ಬ್ಯಾಂಕ್‍ಗಳು, ಕಾನೂನು ದುರುಪಯೋಗ, ಸುರಕ್ಷತೆ, ನೈತಿಕತೆ ಅಭ್ಯಾಸ ಸೇರಿದಂತೆ ಹಲವಾರು ವಿಷಯಗಳನ್ನು ಮಸೂದೆ ಒಳಗೊಂಡಿದೆ.

ರಾಜ್ಯಸಭೆಯಲ್ಲಿ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಅಣೆಕಟ್ಟೆಗಳ ನಿಗಾವಣೆ, ಪರಿಶೀಲನೆ, ಕಾರ್ಯಾಚರಣೆ ಮತ್ತು ನಿರ್ವಹಣೆ ಕುರಿತಂಥ ಕಾನೂನುಗಳನ್ನು ಒಳಗೊಂಡಿರುವ ಮಸೂದೆಯನ್ನು ಮಂಡಿಸಿದ್ದಾರೆ. ವಿಕೋಪ ಸಂದರ್ಭಗಳಲ್ಲಿ ಡ್ಯಾಮ್‍ಗಳ ನಿರ್ವಹಣೆಗೆ ಸಂಬಂಧಪಟ್ಟಂತೆ ಈ ಮಸೂದೆ ಮಹತ್ವದ ಪಾತ್ರ ವಹಿಸಲಿದೆ.

ನಿನ್ನೆ ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಕೃಷಿ ಕಾನೂನುಗಳ ತಿದ್ದುಪಡಿ ಮಸೂದೆಯನ್ನು ಹಿಂಪಡೆಯುವ ಪ್ರಸ್ತಾವನೆಯನ್ನು ಮಂಡಿಸಿ ಅಂಗೀಕಾರ ಪಡೆದುಕೊಳ್ಳಲಾಗಿದೆ. ಕೃಷಿ ಮಸೂದೆಗಳ ಕುರಿತಂತೆ ಚರ್ಚೆಗೆ ಅವಕಾಶ ನೀಡಬೇಕು ಎಂದು ಪ್ರತಿಪಕ್ಷಗಳು ಪಟ್ಟು ಹಿಡಿದು ನಿನ್ನೆ ಗಲಾಟೆ ಮಾಡಿದ್ದವು. ಯಾವುದಕ್ಕೂ ಅವಕಾಶವಿಲ್ಲದಂತೆ ಕೇಂದ್ರ ಸರ್ಕಾರ ಧ್ವನಿಮತದ ಅಂಗೀಕಾರದ ಮೂಲಕ ಮಸೂದೆಗಳನ್ನು ಹಿಂಪಡೆದುಕೊಂಡಿದೆ.

ನಂತರ ಮತ್ತಷ್ಟು ಪ್ರಮುಖ ಮಸೂದೆಗಳನ್ನು ಮಂಡನೆ ಮಾಡುತ್ತಿದ್ದು, ಗದ್ದಲ, ಗೊಂದಲಗಳ ನಡುವೆ ಅಂಗೀಕಾರ ಪಡೆದುಕೊಳ್ಳುತ್ತಿರುವುದು ಆಕ್ಷೇಪಕ್ಕೆ ಕಾರಣವಾಗಿದೆ. ಕಾನೂನು ರೂಪಿಸುವ ಸಂಸತ್‍ನಲ್ಲಿ ಚರ್ಚೆ ಇಲ್ಲದೆ ಮಸೂದೆ ಅಂಗೀಕಾರಗೊಳ್ಳುವುದು ಪ್ರಜಾಪ್ರಭುತ್ವಕ್ಕೆ ಮಾರಕ ಎಂಬ ಆಕ್ಷೇಪಗಳು ಕೇಳಿಬಂದಿವೆ.

Facebook Comments