ಎನ್‍ಕೌಂಟರ್ ಆದ ಆರೋಪಿಗಳ ಮೃತದೇಹಗಳನ್ನು ಡಿ.9ರವರೆಗೆ ರಕ್ಷಿಸಿಡಲು ಕೋರ್ಟ್ ಆದೇಶ

ಈ ಸುದ್ದಿಯನ್ನು ಶೇರ್ ಮಾಡಿ

ಹೈದರಾಬಾದ್, ಡಿ.7- ಪಶು ವೈದ್ಯೆ ಮೇಲಿನ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ಪೊಲೀಸ್ ಎನ್‍ಕೌಂಟರ್‍ನಲ್ಲಿ ಹತರಾದ ಆರೋಪಿಗಳ ಮೃತದೇಹಗಳ ಮರಣೋತ್ತರ ಪರೀಕ್ಷೆ ಅಂತ್ಯಗೊಂಡಿದ್ದು, ಡಿ.9ರವರೆಗೂ ಮೃತದೇಹಗಳನ್ನು ಸಂರಕ್ಷಿಸುವಂತೆ ಸರ್ಕಾರಕ್ಕೆ ತೆಲಂಗಾಣ ಹೈಕೋರ್ಟ್ ಆದೇಶಿಸಿದೆ.

ಎನ್‍ಕೌಂಟರ್ ಕಾನೂನು ಬಾಹಿರ ಹತ್ಯೆಎಂದು ಹೇಳಲಾಗುತ್ತಿದ್ದು, ಪ್ರಕರಣ ಸಂಬಂಧ ನ್ಯಾಯಾಂಗ ಮಧ್ಯಪ್ರವೇಶಿಸುವ ಅಗತ್ಯವಿದೆ ಎಂದು ಹೈಕೋರ್ಟ್ ತಿಳಿಸಿದೆ. ಪೆನ್‍ಡ್ರೈವ್ ಮೂಲಕ ಮರಣೋತ್ತರ ಪರೀಕ್ಷೆಯ ವಿಡಿಯೋವನ್ನು ಜಿಲ್ಲಾ ಪ್ರಧಾನ ನ್ಯಾಯಾಧೀಶರಿಗೆ ಸಲ್ಲಿಸುವಂತೆ ಸೂಚಿಸಿದೆ.

ಡಿ.9ರ ರಾತ್ರಿ 8 ಗಂಟೆವರೆಗೂ ಎನ್‍ಕೌಂಟರ್‍ನಲ್ಲಿ ಹತ್ಯೆಯಾಗಿರುವ ಆರೋಪಿಗಳು, ಸಂತ್ರಸ್ತರು ಹಾಗೂ ಶಂಕಿತರ ಮೃತದೇಹಗಳನ್ನು ಸಂರಕ್ಷಿಸಿ ಎಂದು ಸರ್ಕಾರಕ್ಕೆ ನ್ಯಾಯಪೀಠ ಆದೇಶಿಸಿದೆ. ಮಹಬೂಬ್ ನಗರದ ಜಿಲ್ಲಾಯಲ್ಲಿರುವ ರಾಜ್ಯ ಅನುದಾನಿತ ಆಸ್ಪತ್ರೆಯಲ್ಲಿ ಎಲ್ಲಾ ನಾಲ್ವರು ಆರೋಪಿಗಳ ಮೃತದೇಹಗಳ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗಿದೆ. ಮರಣೋತ್ತರ ಪರೀಕ್ಷೆ ಅಂತ್ಯಗೊಂಡಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ನ.29ರಂದು ಕಾಮುಕರು ಪ್ರಿಯಾಂಕಾ ರೆಡ್ಡಿ ಮೇಲೆ ಅಟ್ಟಹಾಸ ಮೆರೆದಿದ್ದರು. ಪ್ರಿಯಾಂಕಾ ರೆಡ್ಡಿ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ನಡೆಸಿದ್ದ ನಾಲ್ವರು ಕಾಮುಕರು, ನಂತರ ಆಕೆಯನ್ನು ಹತ್ಯೆ ಮಾಡಿ, ಬೆಂಕಿ ಹಚ್ಚಿ ಸುಟ್ಟು ಹಾಕಿದ್ದರು. ಪ್ರಕರಣ ದೇಶದಾದ್ಯಂತ ಭಾರೀ ಸದ್ದು ಮಾಡಿತ್ತು.

ನಿನ್ನೆ ಬೆಳಗಿನ ಜಾವ ತನಿಖೆ ಹಿನ್ನೆಲೆಯಲ್ಲಿ ಘಟನಾ ಸ್ಥಳಕ್ಕೆ ಪೊಲೀಸರು ಆರೋಪಿಗಳನ್ನು ಕರೆದುಕೊಂಡು ಹೋಗಿದ್ದು, ಈ ವೇಳೆ ಆರೋಪಿಗಳು ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಅಲ್ಲದೆ ಪೊಲೀಸರ ಬಳಿಯಿದ್ದ ಪಿಸ್ತೂಲನ್ನು ಕಸಿದುಕೊಂಡು ಪರಾರಿಯಾಗಲು ಯತ್ನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆತ್ಮರಕ್ಷಣೆಗಾಗಿ ಪೊಲೀಸರು ಕಾಮುಕರ ಮೇಲೆ ಎನ್‍ಕೌಂಟರ್ ನಡೆಸಿ ಹತ್ಯೆ ಮಾಡಿದ್ದಾರೆ.

Facebook Comments