ಟೆಲಿಕಾಂ ವಲಯಕ್ಕೆ ಕೇಂದ್ರ ಸರ್ಕಾರದಿಂದ ಬಿಗ್ ರಿಲೀಫ್

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ನ.22- ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ದೂರಸಂಪರ್ಕ ವಲಯಕ್ಕೆ ನೆರವಾಗಲು ಕೇಂದ್ರ ಸರ್ಕಾರ ಬಹುದೊಡ್ಡ ಉಪಕ್ರಮಕ್ಕೆ ಮುಂದಾಗಿದೆ.  ಟೆಲಿಕಾಂ ಕ್ಷೇತ್ರ ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕಿದ್ದ 42 ಸಾವಿರ ಕೋಟಿ ರೂ.ಗಳ ಬಾಕಿ ಮೊತ್ತ ಪಾವತಿ ಅವಧಿಯನ್ನು ಎರಡು ವರ್ಷಗಳಿಗೆ ಮುಂದೂಡಲಾಗಿದೆ. ಇದರಿಂದ ಈ ವಲಯ ನಿರಾಳತೆಯ ನಿಟ್ಟುಸಿರುಬಿಟ್ಟಿದೆ.

ದೂರಸಂಪರ್ಕ ಸೇವಾ ಸಂಸ್ಥೆಗಳಾದ ಭಾರ್ತಿ ಏರ್‍ಟೆಲ್, ರಿಲಾಯ ಜಿಯೋ, ವೊಡಾಪೋನ್ ಐಡಿಯಾ ಸೇರಿದಂತೆ ಅನೇಕ ಸಂಸ್ಥೆಗಳು ಸರ್ಕಾರಕ್ಕೆ ಸಲ್ಲಿಸಬೇಕಾಗಿರುವ ತರಂಗಗುಚ್ಚ (ಸ್ಪೆಕ್ಟ್ರಂ) ಬಾಕಿ ಮೊತ್ತ ಪಾವತಿಗೆ ಎರಡು ವರ್ಷಗಳ ಕಾಲಾವಕಾಶ ನೀಡಿದೆ.

ಸೆಲ್ಯುಲಾರ್ ಆಪರೇಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಸಿಒಎಐ) ಡಿಜಿ ರಾಜನ್ ಮ್ಯಾಥ್ಯೂಸ್, ಮೊಬೈಲ್ ಕರೆ ಮತ್ತು ಡೇಟಾ ದರಗಳಲ್ಲಿ ಪ್ರಸ್ತಾವಿತ ಸುಂಕ ಹೆಚ್ಚಳದ ಒತ್ತಡ ಕಡಿಮೆ ಮಾಡಲು ಇದು ಭಾಗಶಃ ಸಹಾಯವಾಗಲಿದೆ ಎಂದಿದ್ದಾರೆ.

ಟೆಲಿಕಾಂ ಸಂಸ್ಥೆಗಳು ತರಂಗಗುಚ್ಚ ಬಾಕಿ ಮೊತ್ತ 42 ಸಾವಿರ ಕೋಟಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕಿದೆ. ಇದಕ್ಕಾಗಿ ಕೇಂದ್ರವು ಎರಡು ವರ್ಷಗಳ ಕಾಲಾವಕಾಶ ಒದಗಿಸಿದೆ. ಆದರೆ, ಅ.24ರಂದು ಸುಪ್ರೀಂಕೋರ್ಟ್ ನೀಡಿದ್ದ ತಿರ್ಪಿನನ್ವಯ ಉದ್ಭವಿಸಿರುವ 1.47 ಲಕ್ಷ ಕೋಟಿ ರೂ. ಹೊಂದಾಣಿಕೆ ಮಾಡಲಾಗದ ಒಟ್ಟು ಆದಾಯದಲ್ಲಿ ಯಾವ ರಿಯಾಯಿತಿ ಇಲ್ಲ. ಈ ವಿಚಾರದಲ್ಲಿ ರಿಯಾಯಿತಿ ನೀಡಲು ಸುಪ್ರೀಂಕೋರ್ಟ್‍ಗೆ ಮಾತ್ರವೇ ಅವಕಾಶವಿದೆ.

ದೂರಸಂಪರ್ಕ ಕಂಪೆನಿಗಳು ಈಗಾಗಲೇ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭಿಸಿವೆ. ಒಂದು ವೇಳೆ ಕೋರ್ಟ್‍ಗೆ ಸಮಸ್ಯೆಯ ಮನವರಿಕೆಯಾದರೆ ನೆರವು ದೊರೆಯುವ ಸಂಭವವಿದೆ.

Facebook Comments