ಖ್ಯಾತ ತೆಲುಗು ನಟ ರಾಜಶೇಖರ್ ಆರೋಗ್ಯ ಸ್ಥಿತಿ ಗಂಭೀರ..!

ಈ ಸುದ್ದಿಯನ್ನು ಶೇರ್ ಮಾಡಿ

ಹೈದ್ರಾಬಾದ್, ಅ. 22- ರಿಯಲ್‍ಸ್ಟಾರ್ ಉಪೇಂದ್ರ ನಿರ್ದೇಶಿಸಿದ್ದ ತೆಲುಗು ಚಿತ್ರ ಓಂಕಾರ ಚಿತ್ರದ ನಾಯಕ ರಾಜಶೇಖರ್ ಅವರು ಕೊರೊನಾದಿಂದ ಬಳಲುತ್ತಿದ್ದು ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.1985ರಲ್ಲಿ ವಂದೇಮಾತರಂ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ರಾಜಶೇಖರ್ ನಂತರ ಪ್ರತಿಘಟನಾ, ಸ್ಟೇಷನ್‍ಮಾಸ್ಟರ್, ಕಾಶ್ಮೋರ, ಆರಾಧನಾ, ಬಲರಾಮಕೃಷ್ಣುಲು ಸೇರಿದಂತೆ 75ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

ನಟ ರಾಜಶೇಖರ್‍ಗೆ 1996ರವರೆಗೂ ಡೈಲಾಗ್‍ಕಿಂಗ್ ಸಾಯಿಕುಮಾರ್ ಡಬ್ಬಿಂಗ್ ಮಾಡುತ್ತಿದ್ದರು, ಸಾಯಿಕುಮಾರ್ ಅವರ ಸಹೋದರ ಡಬ್ಬಿಂಗ್ ಮಾಡಿದ್ದ ವಿಲನ್ ಚಿತ್ರದ ಅಭಿನಯಕ್ಕಾಗಿ ರಾಜಶೇಖರ್‍ಗೆ ನಂದಿ ಅವಾರ್ಡ್ ಸಿಕ್ಕಿತ್ತು.ನಟ ರಾಜಶೇಖರ್, ಪತ್ನಿ ಜೀವಿತಾ, ಮಕ್ಕಳಾದ ಶಿವಾನಿ ಹಾಗೂ ಶಿವಾತ್ಮಿಕಗೆ ಅಕ್ಟೋಬರ್ 17 ರಂದು ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದರಿಂದ ಅವರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಈ ನಡುವೆ ಆಸ್ಪತ್ರೆಯ ವೈದ್ಯರು ನಟ ರಾಜಶೇಖರ್ ಅವರ ಸ್ಥಿತಿ ಗಂಭೀರವಾಗಿದ್ದು ಅವರು ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲವಾದ್ದರಿಂದ ವೆಂಟಿಲೇಟರ್ ನಲ್ಲಿ ಇರಿಸಲಾಗಿದೆ ಎಂದು ತಿಳಿಸಿದ್ದಾರೆ.

ರಾಜಶೇಖರ್ ಪುತ್ರಿ ಜೀವಿತಾ ಸುದ್ದಿಗಾರರೊಂದಿಗೆ ಮಾತನಾಡಿ, ಅಪ್ಪ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ ಅವರು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿ ಎಂದು ಅಭಿಮಾನಿಗಳಲ್ಲಿ ಟ್ವಿಟ್ಟರ್ ಮೂಲಕ ಮನವಿ ಮಾಡಿದ್ದಾರೆ.

ಆದರೆ ಮತ್ತೊಬ್ಬ ಪುತ್ರಿ ಶಿವಾತ್ಮಕ ಮತ್ತೊಂದು ಟ್ವಿಟ್ ಮಾಡಿ ಅಪ್ಪನ ಆರೋಗ್ಯ ಸುಧಾರಿಸಿದೆ, ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ, ಅವರ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿ ಹಬ್ಬಬೇಡಿ ಎಂದು ಮನವಿ ಮಾಡಿದ್ದಾರೆ.

ರಾಜಶೇಖರ್ ಅವರು ನಟಿಸಿರುವ ವಂದನಾ ಕಿ ವಂದನಾ ಚಿತ್ರವು ಬಿಡುಗಡೆಯಾಗಬೇಕಾಗಿದ್ದು ಅವರ ಹಿರಿಯ ಪುತ್ರಿ ಶಿವಾನಿ ಈ ಸಿನಿಮಾದ ನಾಯಕಿಯಾಗಿದ್ದರೆ ಚಿತ್ರಲೋಕಕ್ಕೆ ಪರಿಚಯವಾಗುತ್ತಿದ್ದಾರೆ.

Facebook Comments

Sri Raghav

Admin