ದೇವಾಲಯ ತೆರೆದರೂ ಭಕ್ತರೇ ಬರುತ್ತಿಲ್ಲ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.13- ಸದಾ ಭಕ್ತರಿಂದ ಗಿಜಿಗುಡುತ್ತಿದ್ದ ದೇವಾಲಯಗಳು ಬಣಗುಡುತ್ತಿವೆ. ಲಾಕ್‍ಡೌನ್ ತೆರವುಗೊಳಿಸಿ ಆರು ದಿನ ಕಳೆದರೂ ಅಷ್ಟಾಗಿ ಭಕ್ತರು ದೇವಾಲಯಗಳತ್ತ ಧಾವಿಸುತ್ತಿಲ್ಲ. ಕೊರೊನಾ ಸೋಂಕು ವ್ಯಾಪಿಸುವ ಹಿನ್ನೆಲೆಯಲ್ಲಿ ದೇಶಾದ್ಯಂತ ಎಲ್ಲ ಮಂದಿರ, ಮಸೀದಿ, ಚರ್ಚ್‍ಗಳನ್ನು ಎರಡೂವರೆ ತಿಂಗಳವರೆಗೂ ಮುಚ್ಚಲಾಗಿತ್ತು.

ಇದೇ ಜೂ.8 ರಿಂದ ದೇವಾಲಯಗಳನ್ನು ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತಾದರೂ ನಿರೀಕ್ಷೆಯಂತೆ ಭಕ್ತರು ದೇವಸ್ಥಾನಗಳಿಗೆ, ಮಂದಿರ, ಮಸೀದಿಗಳಿಗೆ ತೆರಳುತ್ತಿಲ್ಲ. ಕಾರಣ ಜನರಲ್ಲಿ ಕೊರೊನಾ ಸೋಂಕಿನ ಭೀತಿ ಹೋಗಿಲ್ಲ. ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಸೋಂಕು ಹೆಚ್ಚಾಗುತ್ತಿದೆ.

ಸೋಂಕು ಮತ್ತು ಸಾವಿನ ಗ್ರಾಫ್ ಏರುತ್ತಲೇ ಇದೆ. ಸೋಂಕಿನಿಂದ ಆಸ್ಪತ್ರೆಗೆ ಸೇರುವವರು ಮತ್ತು ಸಾವನ್ನಪ್ಪುವವರ ಸಂಖ್ಯೆ ಏರುತ್ತಲೇ ಇರುವುದರಿಂದ ಭಗವಂತನ ಸನ್ನಿಧಿಗೆ ತೆರಳುವವರು ಆತಂಕಕ್ಕೆ ಒಳಗಾಗುತ್ತಿದ್ದಾರೆ.

ಪ್ರತಿಷ್ಠಿತ ದೇವಾಲಯಗಳು, ಧಾರ್ಮಿಕ ಕೇಂದ್ರಗಳಿಗೆ ತೆರಳಲು ಜನ ಹಿಂದೇಟು ಹಾಕುತ್ತಿದ್ದಾರೆ. ದೇವಾಲಯಗಳನ್ನು ಭಕ್ತರಿಗಾಗಿ ತೆರವುಗೊಳಿಸುವುದಕ್ಕೂ ಮುನ್ನ ಎಲ್ಲವನ್ನೂ ಶುಭ್ರಗೊಳಿಸಿ ಲಾಕ್‍ಡೌನ್ ಮಾರ್ಗಸೂಚಿಯಂತೆ ಸ್ಯಾನಿಟೈಜ್ ಮಾಡಲಾಗಿತ್ತು.

ಬರುವ ಭಕ್ತರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಪ್ರವೇಶದ್ವಾರದಲ್ಲಿ ಎಲ್ಲರಿಗೂ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿತ್ತು. ಈ ಎಲ್ಲ ನಿಯಮಗಳನ್ನು ಮಾಡಿದರೂ ಕೂಡ ದೇವಾಲಯಗಳಿಗೆ ಬರುವ ಭಕ್ತರ ಸಂಖ್ಯೆ ಕಡಿಮೆಯಾಗುತ್ತಿದೆ.

ಮೈಸೂರಿನ ಚಾಮುಂಡೇಶ್ವರಿ ದೇವಾಲಯ, ಧರ್ಮಸ್ಥಳದ ಮಂಜುನಾಥನ ಸನ್ನಿಧಿ, ಯಡಿಯೂರು ಸಿದ್ದಲಿಂಗೇಶ್ವರ, ನಂಜನಗೂಡಿನ ನಂಜುಂಡೇಶ್ವರ, ಮಲೈ ಮಹದೇಶ್ವರ ಬೆಟ್ಟ, ಬಾದಾಮಿ, ಬನಶಂಕರಿ ದೇವಾಲಯ, ಕೋಲಾರದ ಚಿಕ್ಕ ತಿರುಪತಿ ಹೀಗೆ ನೂರಾರು ದೇವಾಲಯಗಳು ತೆರೆದುಕೊಂಡರೂ ನಿರೀಕ್ಷಿತ ಪ್ರಮಾಣದಲ್ಲಿ ಭಕ್ತರು ಭಗವಂತನ ದರ್ಶನಕ್ಕೆ ಬರುತ್ತಿಲ್ಲ ಎಂದು ಅಲ್ಲಿನ ಟ್ರಸ್ಟ್‍ನವರು, ಆಡಳಿತ ಮಂಡಳಿಯವರು, ಅರ್ಚಕರು ಹೇಳುತ್ತಿದ್ದಾರೆ.

ಕೊರೊನಾ ಎಂಬ ಮಹಾಮಾರಿ ಯಾವಾಗ ತೊಲಗುತ್ತದೆಯೋ, ಆ ಭೀತಿ ಜನರಿಂದ ಯಾವಾಗ ದೂರವಾಗುತ್ತದೆಯೋ ಎಂದು ಭಗವಂತನೂ ಕೂಡ ಕಾಯುತ್ತಿದ್ದಾನೇನೋ ಎಂದೆನಿಸುತ್ತಿದೆ.

ದೇವಾಲಯಗಳಲ್ಲಿ ವಿಶೇಷ ಪೂಜೆ- ಪುನಸ್ಕಾರಗಳನ್ನು ನಡೆಸುವಂತಿಲ್ಲ, ತೀರ್ಥ-ಪ್ರಸಾದವನ್ನು ವಿತರಿಸುವಂತಿಲ್ಲ. ಕೇವಲ ದರ್ಶನ ಭಾಗ್ಯ ಮಾತ್ರ ಭಕ್ತರಿಗೆ ದೊರೆಯುತ್ತಿದೆ. ಅದು ಸಾಮಾಜಿಕ ಅಂತರ ಕಾಪಾಡಿಕೊಂಡು ಭಗವಂತನ ದರ್ಶನ ಮಾಡಬೇಕು.

ಈ ಎಲ್ಲ ಕಟ್ಟುಪಾಡುಗಳನ್ನು ಮಾಡಿಕೊಂಡು ದೇವಸ್ಥಾನಗಳಿಗೆ ಹೋಗಿ ದೇವರ ದರ್ಶನ ಏಕೆ ಮಾಡಬೇಕು, ಇಂತಹ ಸಂದರ್ಭದಲ್ಲಿ ಅಕಸ್ಮಾತ್ ಏನಾದರೂ ಸೋಂಕು ತಗುಲಿದರೆ ಏನು ಮಾಡಬೇಕು ಎಂಬ ಭಯ ಜನರಲ್ಲಿ ಕಾಡುತ್ತಿದೆ. ಹೀಗಾಗಿ ಬಹುತೇಕರು ದೇವಸ್ಥಾನಗಳಿಗೆ ತೆರಳದೆ ಮನೆಯಲ್ಲೇ ಕುಳಿತು ಕಾಪಾಡಪ್ಪ ಎಂದು ಭಗವಂತನನ್ನು ಪ್ರಾರ್ಥಿಸುತ್ತಿದ್ದಾರೆ.

ಈ ರೋಗವನ್ನು ತೊಲಗಿಸಿ ಎಂದು ಇದ್ದಲ್ಲಿಯೇ ಭಗವಂತನನ್ನು ಪೂಜಿಸುತ್ತಿರುವುದು ಕಂಡುಬರುತ್ತಿದೆ. ಅನಿವಾರ್ಯವಾಗಿದ್ದವರು, ಮತ್ತೆ ಕೆಲವರು ದೇವಾಲಯಗಳಿಗೆ ತೆರಳುತ್ತಿದ್ದಾರೆ. ಮಾಸ್ಕ್ ಹಾಕಿಕೊಂಡು, ಸ್ಯಾನಿಟೈಜರ್ ಬಳಸಿ ಮಕ್ಕಳು, ವೃದ್ಧರನ್ನು ಮನೆಯಲ್ಲೇ ಬಿಟ್ಟು ದೇವಸ್ಥಾನಗಳಿಗೆ ತೆರಳುತ್ತಿರುವುದು ಕಂಡುಬರುತ್ತಿದೆ. ಆದರೂ ದೇವಾಲಯಗಳಿಗೆ ತೆರಳುತ್ತಿರುವವರ ಸಂಖ್ಯೆ ಮೊದಲಿನಷ್ಟಿಲ್ಲ. ಭಕ್ತರ ಸಂಖ್ಯೆ ವಿರಳವಾಗಿದೆ.

ದೇವಾಲಯಗಳು ಓಪನ್ ಆಗಿ ಇನ್ನೂ ಆರು ದಿನಗಳು ಮಾತ್ರ ಆಗಿರುವುದು ಕ್ರಮೇಣ ಭಕ್ತರು ಬರುತ್ತಾರೆ ಎಂದು ದೇವಾಲಯಗಳ ಆಡಳಿತ ಮಂಡಳಿಯವರು ಹೇಳುತ್ತಾರೆ. ಆದರೆ, ರಾಜ್ಯದಲ್ಲಿ ಸುಮಾರು 36 ಸಾವಿರಕ್ಕೂ ಹೆಚ್ಚು ಮುಜರಾಯಿ ದೇವಸ್ಥಾನಗಳಿವೆ.

ಅಷ್ಟೇ ಪ್ರಮಾಣದಲ್ಲಿ ಖಾಸಗಿ ದೇವಾಲಯಗಳಿವೆ. ಮುಜರಾಯಿ ದೇವಾಲಯಗಳಲ್ಲಿ ನೂರಕ್ಕೂ ಹೆಚ್ಚು ಎ ವರ್ಗದ ದೇವಾಲಯಗಳಿವೆ. ಬಿ ವರ್ಗದ ದೇವಾಲಯಗಳೂ ಅಷ್ಟೇ ಪ್ರಮಾಣದಲ್ಲಿವೆ. ಈ ದೇವಾಲಯಗಳಿಗೆ ಪ್ರತಿದಿನ ಸಾವಿರಾರು ಜನ ಬರುತ್ತಿದ್ದರು.

ಕೊರೊನಾದಿಂದ ದೇವಾಲಯಗಳನ್ನು ಬಂದ್ ಮಾಡಲಾಗಿತ್ತು. ಎಲ್ಲ ದೇವಾಲಯಗಳನ್ನೂ ತೆರವುಗೊಳಿಸಿದ್ದರೂ ಕೂಡ ಕೊರೊನಾ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಹೆಚ್ಚು ಪ್ರಮಾಣದಲ್ಲಿ ದೇವಸ್ಥಾನಗಳತ್ತ ಭಕ್ತರು ಮುಖ ಮಾಡುತ್ತಿಲ್ಲ. ಬೆಂಗಳೂರಿನಲ್ಲಿರುವ ಪ್ರತಿಷ್ಠಿತ ದೇವಾಲಯಗಳಿಗೆ ಹೋಗುತ್ತಿರುವವರ ಸಂಖ್ಯೆ ಕೂಡ ಅಷ್ಟಕ್ಕಷ್ಟೇ ಆಗಿದೆ.

ಪ್ರತಿದಿನ ಅದರಲ್ಲೂ ವೀಕೆಂಡ್ ಶನಿವಾರ, ಭಾನುವಾರ ಮತ್ತು ವಿಶೇಷ ದಿನಗಳಲ್ಲಿ ಹೆಚ್ಚಾಗಿ ಜನ ದೇವಾಲಯಗಳಿಗೆ ತೆರಳುತ್ತಿದ್ದರು. ಆದರೆ, ಈಗ ಇನ್ನೂ ದೇವಸ್ಥಾನಗಳಿಗೆ ಭಕ್ತರು ಹೋಗುತ್ತಿಲ್ಲ. ಬಹುತೇಕ ದೇವಾಲಯಗಳು ಭಕ್ತರಿಲ್ಲದೆ ಬಿಕೋ ಎನ್ನುತ್ತಿರುವುದು ಕಂಡುಬರುತ್ತಿದೆ.

Facebook Comments