ಸೋಮವಾರದಿಂದ ದೇವರ ದರ್ಶನ, ದೇವಸ್ಥಾನಗಳಲ್ಲಿ ಭರ್ಜರಿ ತಯಾರಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.6- ಕಳೆದ 70 ದಿನಗಳಿಂದ ದೇವರ ದರ್ಶನ ಭಾಗ್ಯಕ್ಕೆ ಹಾತೊರೆಯುತ್ತಿದ್ದ ಭಕ್ತರಿಗೆ ರಾಜ್ಯದ ದೇವಾಲಯಗಳು ಸೋಮವಾರದಿಂದ ದರ್ಶನ ಭಾಗ್ಯ ನೀಡಲು ಸಜ್ಜಾಗಿವೆ. ಕೊರೊನಾ ಮಹಾಮಾರಿ ಹಿನ್ನೆಲೆಯಲ್ಲಿ ಲಾಕ್‍ಡೌನ್‍ನಿಂದ ಬಂದ್ ಆಗಿದ್ದ ರಾಜ್ಯದ ಪ್ರತಿಷ್ಠಿತ ದೇವಾಲಯಗಳು ಜೂ.8ರಿಂದ ತೆರೆಯಲಿದ್ದು, ಇದಕ್ಕಾಗಿ ಎಲ್ಲಾ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗುತ್ತಿದೆ.

ಧರ್ಮಸ್ಥಳ, ಮೈಸೂರು, ನಂಜನಗೂಡು, ಕುಕ್ಕೆ ಸುಬ್ರಹ್ಮಣ್ಯ, ಶ್ರೀರಂಗಪಟ್ಟಣ, ಮಲೆ ಮಹದೇಶ್ವರ, ಮಂತ್ರಾಲಯ, ಹೊರನಾಡು, ಕಳಸ, ಶೃಂಗೇರಿ ಸೇರಿದಂತೆ ಎಲ್ಲೆಡೆ ಇರುವ ದೇವಾಲಯಗಳನ್ನು ತೆರೆಯಲು ಇಂದಿನಿಂದಲೇ ಭರದ ಸಿದ್ಧತೆಗಳನ್ನು ಆರಂಭಿಸಲಾಗುತ್ತಿದ್ದು, ಎಲ್ಲ ಧಾರ್ಮಿಕ ಕೇಂದ್ರಗಳನ್ನು ಶುಚಿಗೊಳಿಸಲಾಗುತ್ತಿದೆ.

ಮುಜರಾಯಿ ಇಲಾಖೆಯ ದೇವಸ್ಥಾನಗಳು, ಖಾಸಗಿ ದೇವಾಲಯಗಳು, ಮಂದಿರ, ಮಸೀದಿ, ಚರ್ಚ್‍ಗಳು ಎಲ್ಲವುಗಳನ್ನೂ ಪ್ರಾರ್ಥನೆ, ಪೂಜೆಗೆ ಅಣಿಗೊಳಿಸಲಾಗುತ್ತಿದೆ.

ಸಾಮಾಜಿಕ ಅಂತರ ಕಾಯ್ದುಕೊಂಡು ಸರ್ಕಾರ, ಆರೋಗ್ಯ ಇಲಾಖೆಯ ಮಾರ್ಗಸೂಚಿಯನ್ವಯ ದೇವಾಲಯದಲ್ಲಿ ದರ್ಶನ ಮತ್ತಿತರ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಬೇಕೆಂಬ ಹಿನ್ನೆಲೆಯಲ್ಲಿ ಅದಕ್ಕೆ ಪೂರಕವಾಗುವಂತೆ ಎಲ್ಲ ಕ್ರಮಗಳನ್ನೂ ದೇವಾಲಯಗಳಲ್ಲಿ ಮಾಡಿಕೊಳ್ಳಲಾಗುತ್ತಿದೆ.

ಪ್ರತಿಷ್ಠಿತ ಕುಕ್ಕೆ ಸುಬ್ರಹ್ಮಣ್ಯ ದೇವಾಲಯವನ್ನು ಇಂದಿನಿಂದಲೇ ಅಲ್ಲಿನ ಆಡಳಿತ ಸಿಬ್ಬಂದಿ ಸಂಪೂರ್ಣವಾಗಿ ಶುಚಿಗೊಳಿಸುತ್ತಿದ್ದಾರೆ. ಸೋಮವಾರದಿಂದ ಭಕ್ತರಿಗೆ ದರ್ಶನ, ಪೂಜೆಗೆ ಅವಕಾಶ ಕಲ್ಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ.

ಕಳೆದ ಎರಡೂವರೆ ತಿಂಗಳಿನಿಂದ ಯಾವ ಭಕ್ತರೂ ದೇವಾಲಯದ ಕಡೆ ಬಂದಿಲ್ಲ. ಸೋಮವಾರದಿಂದ ಬರಲು ಪ್ರಾರಂಭಿಸಿದರೆ ಯಾವ ರೀತಿ ಕ್ರಮ ಕೈಗೊಳ್ಳಬೇಕು, ಕೊರೊನಾ ನಿಯಂತ್ರಣಕ್ಕೆ ಯಾವ್ಯಾವ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂಬ ಹಿನ್ನೆಲೆಯಲ್ಲಿ ಆಡಳಿತ ಮಂಡಳಿಯವರು ಚರ್ಚೆ ನಡೆಸಿ ವಿವಿಧ ಕ್ರಮ ತೆಗೆದುಕೊಂಡಿದ್ದಾರೆ.

ದೇವಸ್ಥಾನ, ಸೇವಾ ಕೌಂಟರ್‍ಗಳು ಸೇರಿದಂತೆ ಎಲ್ಲ ಕಡೆ ಸ್ಯಾನಿಟೈಜ್ ಮಾಡಲಾಗುತ್ತಿದೆ. ಅತ್ತ ಧರ್ಮಸ್ಥಳದಲ್ಲೂ ಕೂಡ ಬರುವ ಭಕ್ತರಿಗೆ ತಂಗಲು, ಊಟ, ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ.

ಸರ್ಕಾರ ಪ್ರಸಾದವನ್ನು ವಿತರಿಸಬಾರದು ಎಂದು ಷರತ್ತು ವಿಧಿಸಿದೆ. ಆದರೆ, ಧರ್ಮಸ್ಥಳದಲ್ಲಿ ಬರುವ ಭಕ್ತರಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಯಾವ ರೀತಿಯೂ ಧಕ್ಕೆ ಬರದಂತೆ ಅತ್ಯಂತ ಶುಚಿಯಾಗಿ ಈ ವ್ಯವಸ್ಥೆ ಮಾಡಲಾಗುತ್ತಿದೆ. ಭಕ್ತರು ಅಂತರ ಕಾಯ್ದುಕೊಂಡು ದರ್ಶನ ಪಡೆಯಲು ಮಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

ಅತ್ತ ಮಂತ್ರಾಲಯದಲ್ಲಿ ಜೂ.8ರಿಂದ ದರ್ಶನದ ವ್ಯವಸ್ಥೆ ಇನ್ನೂ ಆರಂಭಿಸಿಲ್ಲ. ನಂಜನಗೂಡು, ಚಾಮುಂಡೇಶ್ವರಿ ಬೆಟ್ಟ, ಮಲೆ ಮಹದೇಶ್ವರ, ಶ್ರೀರಂಗಪಟ್ಟಣ ಸೇರಿದಂತೆ ವಿವಿಧ ದೇವಾಲಯಗಳನ್ನು ಕೂಡ ಶುಚಿಗೊಳಿಸಲು ಕೆಲಸವನ್ನು ಮಾಡಲಾಗುತ್ತಿದೆ.

ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ಸುಮಾರು 36 ಸಾವಿರ ದೇವಸ್ಥಾನಗಳಿದ್ದು, ಅದರಲ್ಲಿ ಎ ಗ್ರೇಡ್‍ನ ನೂರಕ್ಕೂ ಹೆಚ್ಚು ದೇವಸ್ಥಾನಗಳಿಗೆ ಹೆಚ್ಚು ಭಕ್ತರು ಆಗಮಿಸುತ್ತಾರೆ. ಈ ದೇವಸ್ಥಾನಗಳನ್ನು ಸೋಮವಾರದಿಂದ ಪ್ರಾರಂಭಿಸಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಎಲ್ಲ ರೀತಿಯ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.  ಬಿ ಗ್ರೇಡ್ ದೇವಸ್ಥಾನಗಳಲ್ಲೂ ಕೂಡ ಎಲ್ಲ ರೀತಿಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ.

ಅದೇ ರೀತಿ ಮಸೀದಿ, ಚರ್ಚ್‍ಗಳಲ್ಲೂ ಕೂಡ ಕ್ಲೀನಿಂಗ್ ವ್ಯವಸ್ಥೆ ನಡೆಯುತ್ತಿದೆ. ಜೂ.8ರಿಂದ ಮಸೀದಿಗಳಲ್ಲಿ ನಮಾಜ್‍ಗೆ ಅವಕಾಶ ನೀಡಲಾಗಿದೆ. ಬೆಂಗಳೂರಿನ ಕೆಆರ್ ಮಾರುಕಟ್ಟೆ ವೃತ್ತದ ಬಳಿ ಇರುವ ಮಸೀದಿಯನ್ನು ಇಂದಿನಿಂದಲೇ ಶುಭ್ರಗೊಳಿಸಲಾಗುತ್ತಿದೆ.

ಇಲ್ಲಿ ಪ್ರತಿದಿನ 10 ಸಾವಿರಕ್ಕೂ ಹೆಚ್ಚು ಮುಸ್ಲಿಂ ಬಾಂಧವರು ನಮಾಜ್‍ಗೆ ಆಗಮಿಸುತ್ತಾರೆ. ಮಸೀದಿಯ ಒಳಗಡೆ ಕೈ-ಕಾಲು ತೊಳೆಯುವಂತಿಲ್ಲ ಎಂಬ ಮಾರ್ಗಸೂಚಿ ಹಿನ್ನೆಲೆಯಲ್ಲಿ ಮಸೀದಿಯ ಮುಂಭಾಗದಲ್ಲಿ ಆ್ಯಂಟಿ ಇನ್‍ಫೆಕ್ಷನ್ ಟನಲ್ ಅಳವಡಿಸಿದ್ದು, ಅಲ್ಲಿ ಸ್ಯಾನಿಟೈಸರ್ ಸ್ಪ್ರೇ ಮಾಡಲಾಗುತ್ತದೆ.

ಇದೇ ರೀತಿ ಶಿವಾಜಿನಗರ, ವಸಂತನಗರ ಸೇರಿದಂತೆ ಬಹುತೇಕ ಎಲ್ಲ ದೊಡ್ಡ ದೊಡ್ಡ ಮಸೀದಿಗಳಲ್ಲೂ ಅಳವಡಿಸಲಾಗಿದೆ. ಮಧ್ಯಾಹ್ನದ ನಮಾಜ್‍ಗೆ ಅವಕಾಶ ನೀಡಲಾಗಿದ್ದು, ಚರ್ಚ್‍ಗಳಲ್ಲೂ ಪ್ರಾರ್ಥನೆಗೆ ಅವಕಾಶ ಕಲ್ಪಿಸಲಾಗಿದೆ.

ಚರ್ಚ್‍ಗಳೂ ಕೂಡ ಮುಂದಿನ ವಾರದಿಂದ ಪ್ರಾರ್ಥನೆಗೆ ತೆರೆಯಲ್ಪಡಲಿವೆ. ಲಾಕ್‍ಡೌನ್ ಸಡಿಲಗೊಂಡಿದೆಯಾದರೂ ಕೊರೊನಾ ತನ್ನ ಕಬಂಧ ಬಾಹುವಿನ ಹಿಡಿತವನ್ನು ಸಡಿಲಗೊಳಿಸಿಲ್ಲ. ಜನ ಎಚ್ಚರಿಕೆಯಿಂದ ಇರಬೇಕು. ಇಲ್ಲದಿದ್ದರೆ ಕೊರೊನಾ ಹಿಡಿತದಲ್ಲಿ ನಲುಗಬೇಕು.

Facebook Comments