ಟೆಂಪೋ-ಸುಮೋ ನಡುವೆ ಭೀಕರ ಅಪಘಾತ, 8 ಮಂದಿ ಸ್ಥಳದಲ್ಲೇ ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

ನಾಗಮಂಗಲ, ನ.22-ಮುಂದೆ ಹೋಗುತ್ತಿದ್ದ ವಾಹನವನ್ನು ಹಿಂದಿಕ್ಕುವ ಭರದಲ್ಲಿ ಮುನ್ನುಗ್ಗಿದ ಗೂಡ್ಸ್ ಟೆಂಪೋ ವಾಹನವೊಂದು ಟಾಟಾ ಸುಮೋಗೆ ಡಿಕ್ಕಿ ಹೊಡೆದ ಪರಿಣಾಮ ಎಂಟು ಮಂದಿ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟು ಒಂಭತ್ತು ಮಂದಿ ಗಂಭೀರ ಗಾಯಗಡಿರುವ ಭೀಕರ ಘಟನೆ ಬೆಳ್ಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ಸಂಭವಿಸಿದೆ.

ಭೀಕರ ಅಪಘಾತದಲ್ಲಿ ಮೃತಪಟ್ಟವರನ್ನು ನಾಗಮಂಗಲ ಪಟ್ಟಣದ ಬಾಕರ್ ಶರೀಫ್(50), ತಾಹೀರ್(30), ನೌಶಾದ್(45), ಹಸೀನ್‍ತಾಜ್ (50), ಮೆಹಬೂಬ್ ಜಾನ್(50), ಮಕ್ಸೂದ್ (25), ಶಾಹೀದಾ (30) ಮತ್ತು ಅಕ್ಬರ್ ಅಲಿ (40) ಎಂದು ಗುರುತಿಸಲಾಗಿದೆ. ಅಲ್ ಫಲಾಹ್ ಎಂಬುವರು ಅಲ್ಪಸಂಖ್ಯಾತರ ಪತ್ತಿನ ಸಹಕಾರ ಸಂಘದ ಸದಸ್ಯರಾಗಿದ್ದು, ಅವರ ಅಧಿಕಾರಾವಧಿ ಮುಗಿದಿದ್ದರಿಂದ ಏರ್ಪಡಿಸಿದ್ದ ಔತಣಕೂಟಕ್ಕೆ ಇವರೆಲ್ಲ ತೆರಳುತ್ತಿದ್ದರು ಎನ್ನಲಾಗಿದೆ.

ನಾಗಮಂಗಲದಿಂದ ಬೆಳ್ಳೂರು ಕಡೆಗೆ ರಾತ್ರಿ ಟಾಟಾ ಸುಮೋ ಸಂಚರಿಸುತ್ತಿತ್ತು. ಇತ್ತ ಬೆಳ್ಳೂರಿನಿಂದ ನಾಗಮಂಗಲದ ಕಡೆಗೆ ಟೆಂಪೋ ಗೂಡ್ಸ್ ವಾಹನ ಹೋಗುತ್ತಿತ್ತು. ನಾಗಮಂಗಲ ತಾಲ್ಲೂಕಿನ ಚಾಮರಾಜನಗರ ಜೀವರ್ಗಿ ರಾಷ್ಟ್ರೀಯ ಹೆದ್ದಾರಿಯ ರಾಮದೇವನಹಳ್ಳಿ ಸಮೀಪ ಮುಂದೆ ಹೋಗುತ್ತಿದ್ದ ವಾಹನವನ್ನು ಹಿಂದಿಕ್ಕುವ ಭರದಲ್ಲಿ ಟೆಂಪೋ ಗೂಡ್ಸ್ ವಾಹನ ಮುನ್ನುಗ್ಗಿದಾಗ ಚಾಲಕನ ನಿಯಂತ್ರಣ ತಪ್ಪಿ ಎದುರಿನಿಂದ ಬರುತ್ತಿದ್ದ ಟಾಟಾ ಸುಮೋಗೆ ಅಪ್ಪಳಿಸಿದೆ.

ಪರಿಣಾಮವಾಗಿ ಆರು ಮಂದಿ ಸ್ಥಳದಲ್ಲೇ ಮೃತಪಟ್ಟರೆ, ಇನ್ನಿಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಒಂಭತ್ತು ಮಂದಿ ಗಂಭೀರ ಗಾಯಗೊಂಡಿದ್ದಾರೆ. ಸುದ್ದಿ ತಿಳಿದ ಬೆಳ್ಳೂರು ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಸ್ಥಳೀಯರ ನೆರವಿನಿಂದ ಗಾಯಾಳುಗಳನ್ನು ವಾಹನದಿಂದ ಹೊರತಂದು ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಯಿತು. ಎರಡೂ ವಾಹನಗಳು ನಜ್ಜುಗುಜ್ಜಾಗಿದ್ದು ಮೃತದೇಹಗಳನ್ನು ಹೊರತೆಗೆಯುವಲ್ಲಿ ಪೊಲೀಸರು ಹರಸಾಹಸಪಡುವಂತಾಯಿತು.

ಜಿಲ್ಲಾ ಎಸ್‍ಪಿ ಪರಶುರಾಮ್, ಡಿವೈಎಸ್‍ಪಿ ವಿಶ್ವನಾಥ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ನಂತರ ಆಸ್ಪತ್ರೆಗೆ ತೆರಳಿ ಗಾಯಾಳುಗಳ ಆರೋಗ್ಯದ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದರು.ಘಟನೆ ಸಂಬಂಧ ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂಚಾರಕ್ಕೆ ಅಡ್ಡಿ: ಭೀಕರ ರಸ್ತೆ ಅಪಘಾತದಿಂದಾಗಿ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಕೆಲ ಗಂಟೆಗಳ ಕಾಲ ಅಡ್ಡಿಯುಂಟಾಯಿತು. ಜಖಂಗೊಂಡ ಎರಡೂ ವಾಹನಗಳನ್ನು ತೆರವುಗೊಳಿಸಿದ ಸಂಚಾರ ಪೊಲೀಸರು ನಂತರ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

Facebook Comments