ಪಾಕ್‍ನಲ್ಲಿ ಈಗಲೂ ಆಕ್ಟಿವ್ ಆಗಿವೆ 24 ಟೆರ್ರರ್ ಟ್ರೈನಿಂಗ್ ಕ್ಯಾಂಪ್‍ಗಳು..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ನ.17-ಭಾರೀ ವಿಧ್ವಂಸಕ ಕೃತ್ಯಗಳು ಮತ್ತು ರಕ್ತಪಾತಗಳನ್ನು ನಡೆಸಿರುವ ಕುಖ್ಯಾತ ಭಯೋತ್ಪಾದನೆ ಸಂಘಟನೆಗಳು ಮತ್ತು ಕುಪ್ರಸಿದ್ದ ಉಗ್ರಗಾಮಿಗಳಿಗೆ ಸುರಕ್ಷಿತ ಆಶ್ರಯ ನೀಡಿ ಪೋಷಿಸುತ್ತಿರುವ ಪಾಕಿಸ್ತಾನಕ್ಕೆ ವಿಶ್ವಸಂಸ್ಥೆ ಸೇರಿದಂತೆ ಅಂತಾರಾಷ್ಟ್ರೀಯ ಸಂಘಟನೆಗಳು ಛೀಮಾರಿ ಹಾಕಿದ್ದರೂ ಆ ದೇಶದ ಜಗಮೊಂಡತನ ಮುಂದುವರಿದಿದೆ.

ಇದಕ್ಕೆ ಸಾಕ್ಷಿಯಾಗಿ ಪಾಕಿಸ್ತಾನದಲ್ಲಿ ಲಷ್ಕರ್-ಎ-ತೈಬಾ (ಎಲ್‍ಇಟಿ), ಜೈಷ್-ಎ-ಮಹಮದ್ (ಜೆಇಎಂ) ಮತ್ತು ಹಿಜ್‍ಬುಲ್ ಮುಜಾಹಿದ್ಧೀನ್ (ಎಚ್‍ಎಂ) ಉಗ್ರಗಾಮಿ ಸಂಘಟನೆಗಳೂ ಸೇರಿದಂತೆ 24 ಟೆರ್ರರ್ ಟ್ರೈನಿಂಗ್ ಕ್ಯಾಂಪ್‍ಗಳು (ಭಯೋತ್ಪಾದಕರ ತರಬೇತಿ ಶಿಬಿರಗಳು) ಈಗಲೂ ಸಕ್ರಿಯವಾಗಿವೆ ಎಂದು ಗುಪ್ತಚರ ಮೂಲಗಳು ದೃಢಪಡಿಸಿವೆ.

ಇದೇ ಫ್ರಾನ್ಸ್ ಪ್ರವಾಸದಲ್ಲಿದ್ದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್, ಪಾಕಿಸ್ತಾನವು ಭಯೋತ್ಪಾದನೆ ಕೈಗಾರಿಕೆಗಳನ್ನು ಅಭಿವೃದ್ದಿಗೊಳಿಸುತ್ತಿದೆ ಎಂದು ನೀಡಿರುವ ಹೇಳಿಕೆಯೂ ಸಹ ಪಾಕಿಸ್ತಾನದ ಮೊಂಡುತನದ ಧೋರಣೆ ಪುರಾವೆಯಾಗಿದೆ. ಫ್ರಾನ್ಸ್‍ನ ಜನಪ್ರಿಯ ದಿನಪತ್ರಿಕೆ ಲಾ ಮೊಂಡೋಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಪಾಕಿಸ್ತಾನದ ಭಯೋತ್ಪಾದನೆ ಕರ್ಮಕಾಂಡವನ್ನು ಜೈಶಂಕರ್ ಬಯಲು ಮಾಡಿದ್ದಾರೆ.

ಎಲ್‍ಇಟಿ ಮಾನವ ಬಾಂಬರ್‍ಗಳು ಕಳೆದ ಅಕ್ಟೋಬರ್‍ನಲ್ಲಿ ಕಾಶ್ಮೀರಕ್ಕೆ ನುಸುಳಿಸಿದ್ಧಾರೆ ಹಾಗೂ ಜೆಇಎಂ ಭಯೋತ್ಪಾದಕರು ರಾವಲ್ಪಿಂಡಿಯಲ್ಲಿ ಕೇಂದ್ರ ಕಚೇರಿಯಲ್ಲಿ ತನ್ನ ನಾಯಕರನ್ನು ಭೇಟಿ ಮಾಡಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಸಚಿವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಭಾರತ ವಿರೋಧ ಭಯೋತ್ಪಾದನೆ ಬಣಗಳನ್ನು ನಿರ್ಮೂಲನೆ ಮಾಡಿದ ನಂತರವಷ್ಟೇ ಪಾಕಿಸ್ತಾನದೊಂದಿಗೆ ಯಾವುದೇ ವಿಷಯದಲ್ಲಿ ಚರ್ಚೆ ಸಾಧ್ಯ. ಇದು ಭಾರತದ ಪೂರ್ವ ಷರತ್ತೂ ಕೂಡ ಆಗಿದೆ ಎಂದು ವಿದೇಶಾಂಗ ಸಚಿವರು ಸ್ಪಷ್ಟಪಡಿಸಿದ್ದಾರೆ.

# 24 ಶಿಬಿರಗಳು :
ಪಾಕಿಸ್ತಾನದ ವಿವಿಧೆಡೆ ಈಗಲೂ 24 ಟೆರ್ರರಿಸ್ಟ್ ಟ್ರೈನಿಂಗ್ ಕ್ಯಾಂಪ್‍ಗಳು ಸಕ್ರಿಯವಾಗಿವೆ. ಇವುಗಳಲ್ಲಿ ಎಲ್‍ಇಟಿ, ಜೆಇಎಂ ಮತ್ತು ಎಚ್‍ಎಂಗೆ ಸೇರಿತ ತರಬೇತಿ ಶಿಬಿರಗಳೂ ಇವೆ. ಅಲ್ಲಿರುವ ಕ್ಯಾಂಪ್‍ಗಳ ಸ್ಥಳಗಳ ಬಗ್ಗೆ ಗೂಗಲ್ ಮ್ಯಾಪ್‍ನೊಂದಿಗೆ ಭಾರತ ಈಗಾಗಲೇ ಪಾಕಿಸ್ತಾನಕ್ಕೆ ವಿವರ ಮಾಹಿತಿ ಸಲ್ಲಿಸಿದೆ.

ಪ್ರಧಾನಿ ಇಮ್ರಾನ್ ಖಾನ್ ಸರ್ಕಾರವು ಭಯೋತ್ಪಾದಕರ ವಿರುದ್ಧ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಸಾರ್ವಜನಿಕರ ಮುಂದೆ ತೋರ್ಪಡಿಸಿಕೊಳ್ಳುತ್ತಿದೆ. ಆದರೆ ಅಲ್ಲಿ ಈಗಲೂ ಉಗ್ರಗಾಮಿಗಳ 24 ತರಬೇತಿ ಶಿಬಿರಗಳು ಸಕ್ರಿಯವಾಗಿವೆ.

ಕಾಶ್ಮೀರದ ಪುಲ್ವಾಮದಲ್ಲಿ 40ಕ್ಕೂ ಹೆಚ್ಚು ಸಿಆರ್‍ಪಿಎಫ್ ಯೋಧರು ಬಲಿಯಾದ ಭಯೋತ್ಪಾದಕರ ದಾಳಿಯ ನಂತರ ಪಾಕ್‍ನಲ್ಲಿ ಉಗ್ರಗಾಮಿಗಳ ಹೊಸ ಶಿಬಿರಗಳು ತಲೆ ಎತ್ತಿವೆ. ಆದರೆ ಇವುಗಳನ್ನು ಮಟ್ಟ ಹಾಕಲು ಪಾಕಿಸ್ತಾನ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಭಾರತ ಆರೋಪಿಸಿದೆ.

ಪಾಕಿಸ್ತಾನ ಆಕ್ರಮಿತ ಕಾಶ್ಮೀರ(ಪಿಒಕೆ), ಮನ್‍ಶೇರಾ, ಪೇಶಾವರ್, ರಾವಲ್ಪಿಂಡಿ, ಭವಲ್‍ಪರ್ ಮತ್ತು ಲಾಹೋರ್‍ಗಳಲ್ಲಿ ಈ ತರಬೇತಿ ಶಿಬಿರಗಳಿವೆ. ಇವುಗಳಿಗೆ ಅಬ್ದುಲ್ಲಾ ಬಿನ್ ಮಶೂದ್ (ಎಲ್‍ಇಟಿ), ಬಾಲಕೋಟ್ (ಜೆಇಎಂ), ಬರಾಲಿ/ಫಾಗೋಶ್ 1 ಮತ್ತು 2(ಎಲ್‍ಇಟಿ), ಬರ್ನಾಲಾ (ಎಚ್‍ಎಂ), ಭವಲ್‍ಪುರ್ (ಜೆಇಎಂ), ಬಟಾರ್ಸಿ ಕ್ಯಾಂಪ್ 1 ಮತ್ತು 2 (ಎಲ್‍ಇಟಿ ಮತ್ತು ಜೆಇಎಂ), ಚೆಲಾಬಂದಿ (ಎಲ್‍ಇಟಿ/ಜೆಇಎಂ/ಎಚ್‍ಎಂ) ಮತ್ತು ದೌರಾ-ಇ-ಅಜೀಮತ್ (ಎಚ್‍ಎ) ಎಂದು ಹೆಸರಿಡಲಾಗಿದೆ.

ಭದ್ರತಾ ಮೂಲಗಳ ಪ್ರಕಾರ, ಜೆಇಎಂ ಕಾರ್ಯನಿರ್ವಹಣಾ ಕಮ್ಯಾಂಡರ್ ಮುಫ್ತಿ ಅಬ್ದುಲ್ಲಾ ರೌಫ್ ಅಗ್ಸರ್ ಮತ್ತು ಆತನ ಸಹೋದರ ಮೌಲಾನ ಅಮ್ಮರ್, ರಾವಲ್ಪಿಂಡಿಯಲ್ಲಿ ತಮ್ಮ ನಾಯಕರನ್ನು ನ.10ರಂದು ಭೇಟಿ ಮಾಡಿ ಹಣಕಾಸು ನೆರವು ಮತ್ತು ಟೆರ್ರರ್ ಕ್ಯಾಂಪ್ ಮೇಲೆ ವಿಧಿಸಲಾಗಿರುವ ಕೆಲವು ನಿರ್ಬಂಧಗಳನ್ನು ತೆರೆವುಗೊಳಿಸಬೇಕೆಂದು ಕೋರಿದ್ದಾರೆ.

ಎಲ್‍ಇಟಿ ಮಾನವ ಬಾಂಬರ್‍ಗಳಾದ ಒಸಮಾಮ ಮತ್ತು ಅಬ್ದುಲ್ಲಾ ಅವರು ಕಾಶ್ಮೀರ ಕೇಂದ್ರಾಡಳಿತ ಪ್ರದೇಶಕ್ಕೆ ಈಗಾಗಲೇ ನುಸುಳಿಸಿದ್ದಾರೆ ಎಂಬ ಖಚಿತ ಮಾಹಿತಿ ಲಭ್ಯವಾಗಿದ್ದು ಅವರಿಗಾಗಿ ಯೋಧರು ತೀವ್ರ ಶೋಧ ನಡೆಸುತ್ತಿದ್ದಾರೆ. ಈ ವರ್ಷ ಪೊಲೀಸರು ಮತ್ತು ಯೋಧರು ನಡೆಸಿದ ಕಾರ್ಯಾಚರಣೆಗಳಲ್ಲಿ 70 ಪಾಕಿಸ್ತಾನಿಯರೂ ಸೇರಿದಂತೆ 150ಕ್ಕೂ ಹೆಚ್ಚು ಭಯೋತ್ಪಾದಕರು ಹತರಾಗಿದ್ದಾರೆ.

Facebook Comments

Sri Raghav

Admin