ಭಯೋತ್ಪಾದನೆಗೆ ಕುಮ್ಮಕ್ಕು : ಪಾಕ್‍ಗೆ ಭಾರತ, ಅಮೆರಿಕ ಮತ್ತೆ ಎಚ್ಚರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್, ಡಿ.20- ಭಯೋತ್ಪಾದನೆಗೆ ಕುಮ್ಮಕ್ಕು ಮುಂದುವರಸುತ್ತಾ ಕುಖ್ಯಾತ ಉಗ್ರಗಾಮಿಗಳೂ ಸೇರಿದಂತೆ ಭಯೋತ್ಪಾದಕರಿಗೆ ಸುರಕ್ಷಿತ ಆಶ್ರಯ ನೀಡುತ್ತಿರುವ ಪಾಕಿಸ್ತಾನಕ್ಕೆ ಭಾರತ ಮತ್ತು ಅಮೆರಿಕ ಮತ್ತೊಮ್ಮೆ ಗಂಭೀರ ಎಚ್ಚರಿಕೆ ನೀಡಿದೆ. ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಪಾಕ್ ನೆಲದಲ್ಲಿ ಭಯೋತ್ಪಾದಕರ ಸುರಕ್ಷಿತ ನೆಲೆಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದೆಂದು ಉಭಯ ದೇಶಗಳು ಇಸ್ಲಾಮಾಬಾದ್‍ಗೆ ತಾಕೀತು ಮಾಡಿವೆ.

ವಾಷಿಂಗ್ಟನ್‍ನಲ್ಲಿ ಭಾರತೀಯ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜಯಶಂಕರ್, ಪಾಕಿಸ್ತಾನದ ವಿಷಯದಲ್ಲಿ ಅಮೆರಿಕದ ನಿಲುವು ಅತ್ಯಂತ ಸ್ಪಷ್ಟವಾಗಿದೆ. ಭಯೋತ್ಪಾದನೆ ಮತ್ತು ಉಗ್ರಗಾಮಿಗಳ ವಿರುದ್ಧ ಯಾವುದೇ ಸಂಧಾನವಿಲ್ಲದೆ ಬೇಷರತ್ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರ್ಕಾರದ ಆಗ್ರಹವಾಗಿದೆ ಎಂದರು.

ಅಮೆರಿಕದ ವಿದೇಶಾಂಗ ಸಚಿವ ಮೈಕ್ ಪಂಪಿಯೋ ಮತ್ತು ರಕ್ಷಣಾ ಸಚಿವ ಮಾರ್ಕ್‍ಎಸ್‍ಪರ್ ಅವರೊಂದಿಗೆ ತಾವು ಮತ್ತು ರಕ್ಷಣಾ ಮಂತ್ರಿ ರಾಜ್‍ನಾಥ್‍ಸಿಂಗ್ ನಡೆಸಿದ ಎರಡನೇ ಸುತ್ತಿನ 2+2 ಸಭೆ ಅತ್ಯಂತ ಯಶಸ್ವಿಯಾಗಿದೆ. ಉಭಯ ದೇಶಗಳ ಸಂಬಂಧ ಬಲವರ್ಧನೆಯ ವ್ಯಾಖ್ಯಾನ ಮತ್ತಷ್ಟು ವಿಸ್ತಾರ ಮತ್ತು ಸದೃಢವಾಗಿದೆ ಎಂದು ಜಯಶಂಕರ್ ಹೇಳಿದರು.

ಈ ಸಭೆಯಲ್ಲಿ ಪಾಕಿಸ್ತಾನ, ಆಫ್ಘಾನಿಸ್ತಾನ, ಇರಾನ್ ಮತ್ತು ಆಗ್ನೇಯ ಏಷ್ಯಾ ದೇಶಗಳಲ್ಲಿ ಪ್ರಸ್ತುತ ಉದ್ಭವಿಸಿರುವ ಸಮಸ್ಯೆಗಳು ಮತ್ತು ಅದಕ್ಕೆ ಕಂಡುಕೊಳ್ಳಬಹುದಾದ ಮಾರ್ಗೋಪಾಯಗಳ ಕುರಿತು ಚರ್ಚಿಸಲಾಯಿತು ಎಂದು ವಿದೇಶಾಂಗ ವ್ಯವಹಾರಗಳ ಸಚಿವ ತಿಳಿಸಿದರು.

Facebook Comments