ದಕ್ಷಿಣ ಭಾರತದಲ್ಲಿ ಭಾರಿ ವಿಧ್ವಂಸಕ ಕೃತ್ಯಕ್ಕೆ ಸ್ಕೆಚ್ ರೂಪಿಸಿದ್ದ ಪಾಕ್ ಏಜೆಂಟ್‍ಗೆ ತಲಾಶ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.13- ದಕ್ಷಿಣ ಭಾರತದ ರಾಜ್ಯಗಳಲ್ಲಿ ಭಯೋತ್ಪಾದನಾ ಸಂಘಟನೆಯನ್ನು ವಿಸ್ತರಿಸಲು ಮತ್ತು ವಿಧ್ವಂಸಕ ಕೃತ್ಯಗಳನ್ನು ನಡೆಸಿ ಶಾಂತಿ ಕದಡಲು ಸಂಚು ರೂಪಿಸಿದ್ದ ಪಾಕ್ ಏಜೆಂಟನ ಬಂಧನಕ್ಕೆ ಪೊಲೀಸರು ತೀವ್ರ ಶೋಧ ಆರಂಭಿಸಿದ್ದಾರೆ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ), ತಮಿಳುನಾಡಿನ ಕ್ಯೂಬ್ರಾಂಚ್, ಬೆಂಗಳೂರಿನ ಸಿಸಿಬಿ ಹಾಗೂ ದೆಹಲಿ ಪೊಲೀಸರು ಜಂಟಿಯಾಗಿ ನಡೆಸುತ್ತಿರುವ ಕಾರ್ಯಾಚರಣೆಯಲ್ಲಿ ಈವರೆಗೂ 8ಮಂದಿ ಬಂಧನಕ್ಕೊಳಗಾಗಿದ್ದಾರೆ.

ದೆಹಲಿಯಲ್ಲಿ ಖ್ವಾಜಾಮೊಹಿದ್ದೀನ್(52), ಅಬ್ದುಲ್ ಸಮದ್ (28), ಸೈಯ್ಯದ್ ಆಲಿನವಾಜ್ (32) ಬಂಧನದ ನಂತರ ಕಾರ್ಯಾಚರಣೆ ಚುರುಕುಗೊಂಡಿದ್ದು, ಬೆಂಗಳೂರಿನ ಸೋಲದೇವನಹಳ್ಳಿ, ಸದ್ದುಗುಂಟೆಪಾಳ್ಯ ಹಾಗೂ ವಿವೇಕನಗರದಲ್ಲಿ ಮೊಹಮ್ಮದ್ ಹನೀಫ್‍ಖಾನ್ (29), ಇಮ್ರಾನ್‍ಖಾನ್ (32), ಇಸ್ಮಾನ್ ಘನಿ ಮೆಹಬೂಬ್‍ಜೈದ್ (24) ಅವರನ್ನು ಬಂಧಿಸಲಾಗಿದೆ. ಮುಂದುವರೆದ ಕಾರ್ಯಾಚರಣೆಯಲ್ಲಿ ನಿನ್ನೆ ಗುಂಡ್ಲುಪೇಟೆಯಲ್ಲಿ ಮತ್ತಿಬ್ಬರನ್ನು ಬಂಧಿಸಲಾಗಿದೆ.

ಆಲ್-ಉಮಾ ಎಂಬ ನಿಷೇಧಿತ ಸಂಘಟನೆಯ 12 ಮಂದಿ ಸದಸ್ಯರು ಪಾಕ್ ಐಎಸ್‍ಐ ಏಜೆಂಟ್ ನೆರವಿನಲ್ಲಿ ದಕ್ಷಿಣ ಭಾರತದ ರಾಜ್ಯಗಳಲ್ಲಿ ಭಯೋತ್ಪಾದನಾ ಸಂಘಟನೆ ವಿಸ್ತರಿಸಲು ಷಡ್ಯಂತ್ರ ರೂಪಿಸಿದ್ದರು. ತಮಿಳುನಾಡು ಮೂಲದವರಾದ ಬಂಧಿತ ಆರೋಪಿಗಳು ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿ ಹಲವಾರು ಸಭೆಗಳನ್ನು ನಡೆಸಿದ್ದರು. ಕಳೆದ ಆರು ತಿಂಗಳಿನಿಂದ ಈ ಆರೋಪಿಗಳು ಬೆಂಗಳೂರಿಗೆ ಬಂದು ಹೋಗುತ್ತಿದ್ದರು. ನಗರದ ಹೊರವಲಯಗಳಾದ ಸೋಲದೇವನಹಳ್ಳಿ, ಸದ್ದುಗುಂಟೆಪಾಳ್ಯದ ಪೇಯಿಂಗೆಸ್ಟ್‍ಗಳಲ್ಲಿ ತಂಗುತ್ತಿದ್ದರು.

ದೆಹಲಿಯಲ್ಲಿ ಆರೋಪಿಗಳನ್ನು ಬಂಧಿಸಿದ ನಂತರ ಈ ಜಾಲದ ಬಗ್ಗೆ ಮಾಹಿತಿ ಬಹಿರಂಗಗೊಂಡಿದೆ. ಇಸ್ಲಾಮಿಕ್ ಸ್ಟೇಟ್ಸ್ ಜತೆ ಸಂಪರ್ಕದಲ್ಲಿರುವ ಪಾಕಿಸ್ತಾನದ ಏಜೆಂಟ್ ಒಬ್ಬ ತಮಿಳು ಮುಸ್ಲಿಂ ಲೀಗ್ ಸಂಘಟನೆಯ ಕಾರ್ಯಕರ್ತರಿಗೆ ಮಾರ್ಗದರ್ಶನ ಮಾಡುತ್ತಿದ್ದ ಎಂದು ಹೇಳಲಾಗಿದೆ.

ಆರೋಪಿಗಳು ಕರ್ನಾಟಕ, ದೆಹಲಿ, ಉತ್ತರ ಪ್ರದೇಶ, ಮಹಾರಾಷ್ಟ್ರ ಸೇರಿದಂತೆ ವಿವಿಧ ಕಡೆಗಳಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದರು. ಇತ್ತೀಚೆಗೆ ತಮಿಳುನಾಡು, ಕೇರಳ ಗಡಿ ಭಾಗದಲ್ಲಿನ ಚೆಕ್‍ಪೋಸ್ಟ್‍ನಲ್ಲಿ ಸಬ್‍ಇನ್ಸ್‍ಪೆಕ್ಟರ್ ವಿಲ್ಸನ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಆ ಪ್ರಕರಣದಲ್ಲಿ ಬಂಧಿತ ಇಬ್ಬರು ಆರೋಪಿಗಳು ಈಗಾಗಲೇ ತಮಿಳುನಾಡಿನಲ್ಲಿ ಹಿಂದೂ ಸಂಘಟನೆಯ ಪ್ರಮುಖ ಸುರೇಶ್‍ಕುಮಾರ್ ಅವರ ಹತ್ಯೆ ಪ್ರಕರಣ ಮತ್ತು ಬಿಜೆಪಿ ಪ್ರಮುಖ ನಾಯಕರ ಹತ್ಯೆ ಯತ್ನ ಪ್ರಕರಣದಲ್ಲಿ ಭಾಗಿಯಾಗಿದ್ದರು ಎಂಬ ಮಾಹಿತಿ ಇದೆ.

ವಿಲ್ಸನ್ ದೇಹದಲ್ಲಿ ಸಿಕ್ಕ ಗುಂಡಿಗೂ, ಈಗಾಗಲೇ ಬಂಧಿತ ಆರೋಪಿಗಳ ಬಳಿ ಇದ್ದ ಗುಂಡಿಗೂ ಸಾಮ್ಯತೆ ಇದೆ. ಹೀಗಾಗಿ ವಿಲ್ಸನ್ ಅವರನ್ನು ಪೂರ್ವಭಾವಿ ತರಬೇತಿಗಾಗಿ ಹತ್ಯೆ ಮಾಡಿರುವ ಶಂಕೆಯೂ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿ ಭಾರೀ ವಿಧ್ವಂಸಕ ಕೃತ್ಯ ನಡೆಸಲು ಆರೋಪಿಗಳು ಸಂಚು ರೂಪಿಸಿದ್ದರು. ಬಂಧಿತರ ಸಂಪರ್ಕದಲ್ಲಿರುವ ಇನ್ನೂ ಬಹಳಷ್ಟು ಮಂದಿಯನ್ನು ಹುಡುಕಿ ಹೊರ ತೆಗೆಯುವ ಪ್ರಯತ್ನವನ್ನು ಪೊಲೀಸರು ಮಾಡುತ್ತಿದ್ದಾರೆ.

ಈ ಕಾರಣಕ್ಕಾಗಿಯೇ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ. ಒಂದು ತಂಡ ಗುಂಡ್ಲುಪೇಟೆ ಮತ್ತು ಮಡಿಕೇರಿಯಲ್ಲಿ, ಮತ್ತೊಂದು ತಂಡ ಬೆಂಗಳೂರಿನ ಗಲ್ಲಿ ಗಲ್ಲಿಗಳಲ್ಲಿ, ಮೂರನೇ ತಂಡ ಕೋಲಾರದ ಸುತ್ತಮುತ್ತಲ ಪ್ರದೇಶಗಳಲ್ಲಿ ತೀವ್ರ ಶೋಧ ನಡೆಸುತ್ತಿದೆ. ರಾಷ್ಟ್ರೀಯ ತನಿಖಾ ಸಂಸ್ಥೆಯ ನೆರವಿನಲ್ಲಿ ಶೋಧ ಮುಂದುವರೆದಿದೆ.

Facebook Comments