ಕಾಶ್ಮೀರ ಕಣಿವೆಯಲ್ಲಿ ಉಗ್ರರ ಅಡಗುದಾಣ ಪತ್ತೆ, ಶಸ್ತ್ರಾಸ್ತ್ರ, ಸ್ಪೋಟಕ ವಶ..!

ಈ ಸುದ್ದಿಯನ್ನು ಶೇರ್ ಮಾಡಿ

ಶ್ರೀನಗರ, ಮೇ 16-ಲಾಕ್‍ಡೌನ್ ಸಂದರ್ಭದಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗಲು ಸಜ್ಜಾಗಿದ್ದ ಉಗ್ರಗಾಮಿಗಳ ಮತ್ತೊಂದು ಯತ್ನವನ್ನು ಭದ್ರತಾ ಪಡೆಗಳು ವಿಫಲಗೊಳಿಸಿವೆ.

ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದಕರ ಅಡಗುದಾಣವೊಂದನ್ನು ಪತ್ತೆ ಮಾಡಿರುವ ಯೋದರು, ಪಾಕಿಸ್ತಾನ ಬೆಂಬಲಿತ ಉಗ್ರಗಾಮಿಯೊಬ್ಬನನ್ನು ಬಂಧಿಸಿ, ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಬದ್ಗಂ ಜಿಲ್ಲೆಯ ಬುಧಾನೆ ತಹಶೀಲ್‍ನ ಅರಿಜಲ್ ಖಾನ್‍ಸಾಹೇಬ್ ಪ್ರದೇಶದಲ್ಲಿ ಭಯೋತ್ಪಾದಕರ ರಹಸ್ಯ ಕಾರಸ್ಥಾನವನ್ನು ಸೇನಾ ಪಡೆ ಭೇದಿಸಿದೆ. ಈ ಸಂಬಂಧ ಪಾಕಿಸ್ತಾನದ ನಿಷೇಧಿತ ಉಗ್ರಗಾಮಿ ಸಂಘಟನೆಯಾದ ಲಷ್ಕರ್-ಎ-ತೈಬಾ(ಎಲ್‍ಇಟಿ)ದ ಉಗ್ರಗಾಮಿಯನ್ನು ಬಂಧಿಸಲಾಗಿದೆ.

ಅಡಗುತಾಣದಿಂದ ರೈಫಲ್‍ಗಳು, ಬುಲೆಟ್‍ಗಳಿರುವ ಮ್ಯಾಗಝೈನ್‍ಗಳು, ಸ್ಫೋಟಕಗಳು ಮತ್ತಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂದಿತನನ್ನು ಜಹೂರ್ ವಾನಿ ಎಂದು ಗುರುತಿಸಲಾಗಿದ್ದು, ಈತ ಎಲ್‍ಇಟಿ ಉಗ್ರಗಾಮಿ ಬಣದ ಒಜಿಡಬ್ಲ್ಯು(ಅಂಡರ್‍ಗ್ರೌಂಡ್ ವರ್ಕರ್ ಅಥವಾ ಭೂಗತ ಕಾರ್ಯಕರ್ತ).

ಬದ್ಗಂ ಮತ್ತು ಬರಾಮುಲ್ಲಾ ಪ್ರದೇಶಗಳಲ್ಲಿ ಸಕ್ರಿಯವಾಗಿರುವ ಕುಖ್ಯಾತ ಉಗ್ರಗಾಮಿ ಯೂಸೂಫ್ ಕಾಂಟ್ರೂ ನೇತೃತ್ವದ ಎಲ್‍ಇಟಿ ಉಗ್ರರಿಗೆ ಈತ ಶಸ್ತ್ರಾಸ್ತ್ರಗಳು, ಹಣಕಾಸು, ದಾಳಿ ಸಂಚು ಮತ್ತು ಸಾರಿಗೆ ಮತ್ತಿತರ ನೆರವು ನೀಡುತ್ತಿದ್ದನು ಎಂಬುದು ಸಹ ತನಿಖೆಯಿಂದ ತಿಳಿದು ಬಂದಿದೆ.

ಈತನನ್ನು ವಿಚಾರಣೆಗೆ ಒಳಪಡಿಸಿದಾಗ ಬದ್ಗಂ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಸಮಯ ಸಾಧಿಸಿ ವಿಧ್ವಂಸಕ ಕೃತ್ಯಗಳನ್ನು ಎಸಗಲು ಲಕ್ಷರ್ ಉಗ್ರರು ಸಜ್ಜಾಗಿದ್ದರು ಎಂಬ ಮಾಹಿತಿ ಲಭಿಸಿದ್ದು, ಉಳಿದ ಉಗ್ರರಿಗಾಗಿ ಶೋಧ ಮುಂದುವರಿದಿದ್ದು ಮತ್ತಷ್ಟು ಆತಂಕವಾದಿಗಳು ಬಲೆಗೆ ಬೀಳುವ ಸಾಧ್ಯತೆ ಇದೆ.

Facebook Comments

Sri Raghav

Admin