ಕದ್ರಿ ದೇಗುಲ, ಉಡುಪಿ ಮಠ ಸ್ಫೋಟಕ್ಕೆ ಉಗ್ರರ ಸಂಚು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.21- ಮಂಗಳೂರಿನ ಬಜ್ಪೆ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಸಜೀವ ಬಾಂಬ್ ಪತ್ತೆ ಪ್ರಕರಣದ ತನಿಖೆ ಚುರುಕುಗೊಂಡಿದ್ದು ಶಂಕಿತ ಉಗ್ರರು ಸುಪ್ರಸಿದ್ದ ಕದ್ರಿ ದೇವಸ್ಥಾನ ಹಾಗೂ ಪೇಜಾವರ ಮಠ ಸ್ಪೋಟಿಸಲು ಸಂಚು ರೂಪಿಸಿದ್ದಾರೆಂಬ ಶಂಕೆ ವ್ಯಕ್ತವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತ್ಯಂತ ಸುಪ್ರಸಿದ್ದ ಧಾರ್ಮಿಕ ಕೇಂದ್ರ ಎನಿಸಿದ ಕದ್ರಿ ದೇವಸ್ಥಾನ ಹಾಗೂ ಪೇಜಾವರ ಮಠವನ್ನು ಸ್ಫೋಟಿಸಲು ಕಳೆದ ಹಲವು ದಿನಗಳಿಂದ ವ್ಯವಸ್ಥಿತ ಯೋಜನೆಯನ್ನು ರೂಪಿಸಲಾಗಿತ್ತು ಎಂದು ತಿಳಿದುಬಂದಿದೆ.

ಆದರೆ ಇತ್ತೀಚೆಗೆ ಮಂಗಳೂರಿನಲ್ಲಿ ಸಿಎಎ ವಿರೋಧಿಸಿ ವೇಳೆ ನಡೆದ ಗೋಲಿಬಾರ್ ಪ್ರಕರಣದಲ್ಲಿ ಪೊಲೀಸರು ಎಚ್ಚೆತ್ತುಕೊಂಡು ಹೆಚ್ಚಿನ ಭದ್ರತೆ ಒದಗಿಸಿದ ಪರಿಣಾಮ ಉಗ್ರರ ಯೋಜನೆ ವಿಫಲಗೊಂಡಿತ್ತು. ಕದ್ರಿ ದೇವಸ್ಥಾನ ಮತ್ತು ಪೇಜಾವರ ಮಠವನ್ನು ಸ್ಫೋಟಿಸಿದರೆ ಗಮನವನ್ನು ಬೇರೆಡೆ ಸೆಳೆಯಬಹುದು. ನಂತರ ತಮ್ಮ ಉದ್ದೇಶಿತ ಯೋಜನೆಯನ್ನು ಕಾರ್ಯಗತಗೊಳಿಸಬಹುದೆಂಬುದು ಅವರ ಲೆಕ್ಕಾಚಾರವಾಗಿತ್ತು.

ಶಂಕಿತ ಉಗ್ರರ ಚಲನವಲನಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದ ಪೊಲೀಸರು ಇಂಚಿಂಚೂ ಮಾಹಿತಿ ಕಲೆ ಹಾಕಿದ್ದರಿಂದ ಉಂಟಾಗಬಹುದಾದ ಭಾರೀ ಅನಾಹುತವನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮೂಲಗಳ ಪ್ರಕಾರ ಸಿಎಎ ಕಾಯ್ದೆ ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆಯನ್ನು ಪೊಲೀಸರು ಹತ್ತಿಕ್ಕಿದ್ದಕ್ಕೆ ಪ್ರತೀಕಾರವಾಗಿ ಈ ಧಾರ್ಮಿಕ ಕೇಂದ್ರಗಳನ್ನು ಗುರಿಯಾಗಿಟ್ಟುಕೊಳ್ಳಲಾಗಿತ್ತು.

ಹೇಳಿಕೇಳಿ ದಕ್ಷಿಣ ಕನ್ನಡ ಜಿಲ್ಲೆ ಅತ್ಯಂತ ಸೂಕ್ಷ್ಮ ಪ್ರದೇಶವಾಗಿರುವುದರಿಂದ ಕಾನೂನು ಸುವ್ಯವಸ್ಥೆ ಮೇಲೆ ತೀವ್ರ ನಿಗಾವಹಿಸುವಂತೆ ಕೇಂದ್ರ ಗುಪ್ತಚರ ವಿಭಾಗವು ರಾಜ್ಯ ಸರ್ಕಾರಕ್ಕೆ ಸೂಚನೆ ಕೊಟ್ಟಿತ್ತು. ಯಾವಾಗ ಜಿಲ್ಲೆಯಲ್ಲಿ ಗೋಲಿಬಾರ್ ನಡೆಯಿತೋ ಆ ವೇಳೆ ಉಗ್ರರು ದುಷ್ಕøತ್ಯ ನಡೆಸಬಹುದೆಂಬ ಶಂಕೆ ವ್ಯಕ್ತವಾಗಿತ್ತು. ಹೀಗಾಗಿಯೇ ಜಿಲ್ಲೆಗೆ ಬರುವ ಶಂಕಿತರು ಹಾಗೂ ವಾಹನಗಳ ಮೇಲೆ ಹದ್ದಿನ ಕಣ್ಣಿಡಲಾಗಿತ್ತು.

ಕೆಲ ದಿನಗಳ ಹಿಂದೆ ಕದ್ರಿ ಮತ್ತು ಪೇಜಾವರ ಮಠದ ಸುತ್ತಮುತ್ತ ಶಂಕಿತರು ಅನುಮಾನಸ್ಪದವಾಗಿ ತಿರುಗಾಟ ನಡೆಸಿದ್ದರು. ಇದರ ಸುಳಿವು ಅರಿತ ಪೊಲೀಸರು ಎರಡು ಕಡೆ ಒಂದು ಇರುವೆಯೂ ನುಸುಳದಂತೆ ಬಿಗಿಭದ್ರತೆಯನ್ನು ಕೈಗೊಂಡಿದ್ದರು.

ಹೀಗಾಗಿ ಉಗ್ರರ ಲೆಕ್ಕಾಚಾರಗಳು ಕೈಕೊಟ್ಟಿದ್ದರಿಂದ ಅಂತಿಮವಾಗಿ ಅವರ ಕಣ್ಣು ವಿಮಾನ ನಿಲ್ದಾಣದ ಮೇಲೆ ಬಿತ್ತು. ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣವು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿರುವುದರಿಂದ ತಮ್ಮ ಯೋಜಿತ ಗುರಿ ಯಶಸ್ವಿಯಾದರೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಸುದ್ದಿಯಾಗುತ್ತದೆ ಎಂಬ ಲೆಕ್ಕಾಚಾರದಿಂದಲೇ ಇದನ್ನು ರೂಪಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.

 

Facebook Comments