ಉಗ್ರರ ಸ್ಲೀಪರ್ ಸೆಲ್ ಆಗುತ್ತಿದೆಯಾ ಕರ್ನಾಟಕ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.14- ಅಂತಾರಾಷ್ಟ್ರೀಯ ಭಯೋತ್ಪಾದಕರ ಸ್ಲೀಪರ್ ಸೆಲ್ ಆಗಿ ಪರಿವರ್ತನೆಯಾಗುತ್ತಿದೆಯೇ ಕರ್ನಾಟಕ..! ಕಳೆದ ಒಂದು ವರ್ಷದಿಂದೀಚೆಗಿನ ಹಲವಾರು ಪ್ರಕರಣಗಳನ್ನು ಗಮನಿಸಿದರೆ ಈ ಮಾತು ಸತ್ಯ ಎನಿಸುತ್ತಿದೆ.  ಇತ್ತೀಚೆಗೆ ತಮಿಳುನಾಡಿನ ಕ್ಯೂ ಬ್ರಾಂಚ್ ಪೊಲೀಸರು ನಗರಕ್ಕೆ ಆಗಮಿಸಿ ಸಿಸಿಬಿ ಪೊಲೀಸರ ಸಹಾಯದೊಂದಿಗೆ ಸೋಲದೇವನಹಳ್ಳಿ, ಸದ್ದುಗುಂಟೆಪಾಳ್ಯ, ವಿವೇಕ್‍ನಗರದಲ್ಲಿ ತಲೆಮರೆಸಿಕೊಂಡಿದ್ದ ಮೂವರು ಶಂಕಿತ ಉಗ್ರರನ್ನು ಬಂಧಿಸಿ ಕರೆದೊಯ್ದಿದ್ದರು.

ಇದಾದ ನಂತರ ಆಂತರಿಕ ಭದ್ರತಾ ವಿಭಾಗ ಹಾಗೂ ಸಿಸಿಬಿ ಪೊಲೀಸರು ಗುಂಡ್ಲುಪೇಟೆಯ ಗಡಿಭಾಗದಲ್ಲಿ ತಲೆಮರೆಸಿಕೊಂಡಿದ್ದ ಇಬ್ಬರು ಹಾಗೂ ನಿನ್ನೆ ಕೋಲಾರದಲ್ಲಿ ಇಬ್ಬರು ಶಂಕಿತರನ್ನು ಬಂಧಿಸಿದ್ದಾರೆ. ಇದರ ಬೆನ್ನಲ್ಲೆ ಶ್ರೀಲಂಕಾ ಸ್ಫೋಟದ ರೂವಾರಿಗಳೆನ್ನಲಾದ ಅಂತಾರಾಷ್ಟ್ರೀಯ ಉಗ್ರರು ಮುಖ್ಯಮಂತ್ರಿ ಯಡಿಯೂರಪ್ಪ ಅವರ ತವರು ಜಿಲ್ಲೆ ಶಿವಮೊಗ್ಗದಲ್ಲಿ ಬೀಡು ಬಿಟ್ಟಿದ್ದಾರೆ ಎಂಬ ಗುಮಾನಿ ಕಾಡುತ್ತಿದ್ದು, ಅವರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಒಂದು ವರ್ಷದ ಹಿಂದೆ ರಾಮನಗರದ ಟಿಪ್ಪು ನಗರದಲ್ಲಿ ಬಟ್ಟೆ ವ್ಯಾಪಾರಿ ನೆಪದಲ್ಲಿ ನೆಲೆಸಿದ್ದ ಉಗ್ರನೊಬ್ಬನನ್ನು ಬಂಧಿಸಿ ಆತನಿಂದ ಬಾಂಬ್ ವಶಪಡಿಸಿಕೊಳ್ಳಲಾಗಿತ್ತು.
ಬಂಧಿತ ಉಗ್ರ ನೀಡಿದ ಮಾಹಿತಿ ಮೇರೆಗೆ ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಹೆಸರಘಟ್ಟ ಸಮೀಪ ನೆಲೆಸಿದ್ದ ಮತ್ತೊಬ್ಬ ಉಗ್ರನನ್ನು ಬಂಧಿಸಿ ಆತನಿಂದ ಬಾಂಬ್ ತಯಾರಿಕಾ ವಸ್ತುಗಳನ್ನು ಸೀಜ್ ಮಾಡಲಾಗಿತ್ತು.

ದೊಡ್ಡಬಳ್ಳಾಪುರದಲ್ಲಿ ಒಬ್ಬ ಉಗ್ರನನ್ನು ಬಂಧಿಸಲಾಗಿತ್ತು. ಇದರ ಜತೆಗೆ ಬೇರೆ ರಾಜ್ಯಗಳಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸುವ ಹಲವಾರು ಕಟ್ಟಾ ಉಗ್ರರು ತಲೆಮರೆಸಿಕೊಳ್ಳಲು ಕರ್ನಾಟಕವೇ ಸೂಕ್ತ ಎಂಬ ನಿರ್ಧಾರಕ್ಕೆ ಬಂದು ರಾಜ್ಯದ ಹಲವಾರು ಪ್ರದೇಶಗಳಲ್ಲಿ ನೆಲೆ ಕಂಡುಕೊಂಡಿದ್ದಾರೆ ಎಂಬ ಮಾಹಿತಿ ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿದೆ. ಶಾಂತಿಯ ತವರೂರೆಂಬ ಖ್ಯಾತಿ ಪಡೆದಿರುವ ರಾಜ್ಯದಲ್ಲಿ ಭಯೋತ್ಪಾದಕರ ಹೆಜ್ಜೆ ಗುರುತುಗಳು ಕಾಣಿಸಿಕೊಳ್ಳುತ್ತಿರುವುದನ್ನು ಗಮನಿಸಿದರೆ ಭವಿಷ್ಯದಲ್ಲಿ ಕರ್ನಾಟಕ ಅಶಾಂತಿಯ ತೋಟವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

ರಾಜ್ಯಾದ್ಯಂತ ಭಯೋತ್ಪಾದಕರ ಅಡಗು ತಾಣಗಳು ಪತ್ತೆಯಾಗುತ್ತಿರು ವುದನ್ನು ಗಮನಿಸಿದರೆ ಕರ್ನಾಟಕ ಅಂತಾರಾಷ್ಟ್ರೀಯ ಭಯೋತ್ಪಾದಕರ ಸ್ಲೀಪರ್ ಸೆಲ್ ಆಗಿ ಪರಿವರ್ತನೆಯಾಗಿದೆ ಎಂಬ ಮಾತುಗಳಿಗೆ ಪುಷ್ಟಿ ನೀಡುವಂತಿದೆ.  ಪೊಲೀಸರ ನಿರ್ಲಕ್ಷ್ಯವೇ ಕಾರಣ: ಒಂದು ಕಾಲದಲ್ಲಿ ಕರ್ನಾಟಕ ಪೊಲೀಸ್ ಎಂದರೆ ಇಡೀ ದೇಶದಲ್ಲೇ ಒಂದು ಗೌರವವಿತ್ತು. ಆದರೆ, ಇತ್ತೀಚೆಗೆ ಇಡೀ ಪೊಲೀಸ್ ಇಲಾಖೆಯ ದಿವ್ಯ ನಿರ್ಲಕ್ಷ್ಯವೇ ಇಂದು ಶಾಂತಿಯ ತವರೂರು ಕರ್ನಾಟಕ ಭಯೋತ್ಪಾದಕರ ಅಡಗುತಾಣವಾಗಿ ಪರಿವರ್ತನೆಯಾಗಲು ಕಾರಣ ಎಂಬ ಆರೋಪಗಳು ಕೇಳಿಬರುತ್ತಿವೆ.

ಅದರಲ್ಲೂ ಬೆಂಗಳೂರು ಪೊಲೀಸರು ಸರಗಳ್ಳರನ್ನು ಹಿಡಿಯುವುದೇ ನಮ್ಮ ಕಾಯಕ ಎಂಬ ಭ್ರಮೆಯಲ್ಲಿದ್ದಾರೆ. ವಿಶ್ವವಿಖ್ಯಾತ ನಗರಕ್ಕೆ ಆಗಮಿಸುವ ಆಗಂತುಕರು, ಅನಾಮಿಕರ ಮೇಲೆ ಹದ್ದಿನ ಕಣ್ಣಿಡುವಲ್ಲಿ ವಿಫಲರಾಗಿರುವುದನ್ನು ಇತ್ತೀಚಿನ ಪ್ರಕರಣಗಳು ಬಹಿರಂಗಗೊಳಿಸಿವೆ. ಇನ್ನು ಆಯಾ ಜಿಲ್ಲಾ ಪೊಲೀಸರಿಗೆ ಭಯೋತ್ಪಾದಕರನ್ನು ನಿಗ್ರಹ ಮಾಡುವ ಗಂಧ-ಗಾಳಿಯೂ ಗೊತ್ತಿಲ್ಲ. ರಾಷ್ಟ್ರೀಯ ತನಿಖಾ ಸಂಸ್ಥೆ ಇಲ್ಲವೆ ಬೇರೆ ರಾಜ್ಯದ ಪೊಲೀಸರು ಉಗ್ರರ ಬೆನ್ನತ್ತಿ ರಾಜ್ಯಕ್ಕೆ ಆಗಮಿಸಿದಾಗಲೇ ನಮ್ಮಲ್ಲೂ ಉಗ್ರರಿದ್ದಾರೆ ಎಂಬ ಮಾಹಿತಿ ನಮ್ಮ ಪೊಲೀಸರಿಗೆ ತಿಳಿದುಬರುವುದು ಎನ್ನುವುದು ವಿಪರ್ಯಾಸವೇ ಸರಿ.

ರಾಜ್ಯದ ಹಲವಾರು ಪ್ರದೇಶಗಳಲ್ಲಿ ತಲೆಮರೆಸಿಕೊಂಡಿರುವ ಉಗ್ರರು ಭಾರೀ ವಿಧ್ವಂಸಕ ಕೃತ್ಯ ನಡೆಸುವ ಮುನ್ನ ನಮ್ಮ ಪೊಲೀಸರು ಎಚ್ಚೆತ್ತುಕೊಳ್ಳಬೇಕಿದೆ.  ನಗರದಲ್ಲಿ ಸ್ಥಾಪಿಸಲಾಗಿರುವ ಭಯೋತ್ಪಾದಕ ನಿಗ್ರಹ ಪಡೆಯನ್ನು ಬಲವರ್ಧನೆಗೊಳಿಸುವುದರ ಜತೆಗೆ ದಕ್ಷ ಅಧಿಕಾರಿಗಳನ್ನು ನಿಯೋಜಿಸುವ ಮೂಲಕ ಉಗ್ರ ಚಟುವಟಿಕೆಗಳನ್ನು ಹತ್ತಿಕ್ಕುವ ಪ್ರಾಮಾಣಿಕ ಪ್ರಯತ್ನ ನಡೆಸಬೇಕಾಗಿದೆ.

ಹೊರರಾಜ್ಯ ಇಲ್ಲವೆ ವಿದೇಶಗಳಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಿ ರಾಜ್ಯದಲ್ಲಿ ತಲೆಮರೆಸಿಕೊಳ್ಳಲು ಮುಂದಾಗಿರುವ ರಕ್ತ ಪಿಪಾಸುಗಳಿಗೆ ಇಲ್ಲಿ ಉಳಿಗಾಲವಿಲ್ಲ ಎಂಬ ಎಚ್ಚರಿಕೆಯ ಸಂದೇಶವನ್ನು ನಮ್ಮ ಪೊಲೀಸ್ ಇಲಾಖೆ ರವಾನಿಸಬೇಕಾಗಿದೆ.

ಈ ನಿಟ್ಟಿನಲ್ಲಿ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಸರ್ಕಾರದೊಂದಿಗೆ ಚರ್ಚಿಸಿ ಉಗ್ರ ನಿಗ್ರಹ ಕಾರ್ಯಾಚರಣೆಗೆ ಮುಂದಾಗುವ ಮೂಲಕ ಕರ್ನಾಟಕ ಶಾಂತಿಯ ತವರೂರು ಎಂಬ ಖ್ಯಾತಿಯನ್ನು ಉಳಿಸಿಕೊಳ್ಳುವತ್ತ ಗಮನ ಹರಿಸಬೇಕಿದೆ.

Facebook Comments