3 ಲಷ್ಕರ್ ಉಗ್ರರ ಸೆರೆ : 100 ಕೋಟಿ ರೂ ಮೌಲ್ಯದ ಡ್ರಗ್ಸ್ ವಶ

ಈ ಸುದ್ದಿಯನ್ನು ಶೇರ್ ಮಾಡಿ

ಶ್ರೀನಗರ/ನವದೆಹಲಿ, ಜೂ.12-ಪಾಕಿಸ್ತಾನದ ಮಾದಕ ವಸ್ತು ಕಳ್ಳಸಾಗಣೆ ಭಯೋತ್ಪಾದನೆ ಜಾಲವನ್ನು ಬೇಧಿಸಿರುವ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಕುಖ್ಯಾತ ಡ್ರಗ್ಸ್ ಸ್ಮಗ್ಲರ್ ಸೇರಿದಂತೆ ಮೂವರು ಲಷ್ಕರ್-ಎ-ತೈಬಾ (ಎಲ್‍ಇಟಿ) ಉಗ್ರಗಾಮಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 100 ಕೋಟಿ ರೂ. ಮೌಲ್ಯ ಹೆರಾಯಿನ್ ಮಾದಕ ವಸ್ತು ಮತ್ತು 1.34 ಕೋಟಿ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ.

ಜಮ್ಮು ಮತ್ತು ಕಾಶ್ಮೀರದ ಹಂದ್ವಾರ ಪೊಲೀಸರು ನಡೆಸಿದ ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಪ್ರಾಯೋಜಿತ ಬೃಹತ್ ಮಾದಕ ವಸ್ತು ಕಳ್ಳಸಾಗಣೆ ಜಾಲವನ್ನು ಭೇದಿಸಲಾಗಿದೆ ಎಂದು ಹಂದ್ವಾರ ವಿಭಾಗದ ಪೊಲಿಸ್ ವರಿಷ್ಠಾಧಿಕಾರಿ ಜಿ.ವಿ.ಸಂದೀಪ್ ಚಕ್ರವರ್ತಿ ಹೇಳಿದ್ದಾರೆ.

ಬಂಧಿತ ಉಗ್ರರಲ್ಲಿ ಇಫ್ತಿಕರ್ ಇಂದ್ರಬಿ ಕುಪ್ರಸಿದ್ಧ ಮಾದಕ ವಸ್ತು ಕಳ್ಳಸಾಗಣೆದಾರನಾಗಿದ್ದು, ಈತನ ವಿರುದ್ಧ ಹಲವಾರು ಎಫ್‍ಐಆರ್ ದಾಖಲಾಗಿದೆ. ಈತನ ಅಳಿಯ ಮೊಮಿನ್ ಪೀರ್ ಮತ್ತು ಇಕ್ಬಾಲ್-ಉಲ್-ಇಸ್ಲಾಮ್ ಎಂಬ ಇನ್ನಿಬ್ಬರು ಉಗ್ರರನ್ನು ಸಹ ಸೆರೆ ಹಿಡಿಯಲಾಗಿದೆ ಎಂದು ಚಕ್ರವರ್ತಿ ವಿವರಿಸಿದ್ದಾರೆ.

ಬಂದಿತ ಮೂವರು ಲಷ್ಕರ್ ಉಗ್ರಗಾಮಿಗಳು ಪಾಕಿಸ್ತಾನ ಭಯೋತ್ಪಾದನೆ ಮತ್ತು ಡ್ರಗ್ಸ್ ಸ್ಮಗ್ಲಿಂಗ್ ಜಾಲದೊಂದಿಗೆ ಸಂಪರ್ಕ ಹೊಂದಿರುವುದು ಬೆಳಕಿಗೆ ಬಂದಿದೆ. ಈ ಜಾಲದ ಮತ್ತಷ್ಟು ಸದಸ್ಯರನ್ನು ಬಂಧಿಸುವುದಾಗಿ ಅವರು ಹೇಳಿದ್ದಾರೆ. ಬಂಧಿತ ಎಲ್‍ಇಟಿ ಉಗ್ರರಿಂದ 21 ಕೆಜಿ ತೂಕದ ಉತ್ತಮ ಗುಣಮಟ್ಟದ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಮೌಲ್ಯ 100 ಕೋಟಿ ರೂ.ಗಳು ಎಂದು ಎಸ್ಪಿ ತಿಳಿಸಿದ್ದಾರೆ.

ಇದಲ್ಲದೇ ಇವರ ಬಳಿ ಇದ್ದ 1.34 ಕೋಟಿ ರೂ.ಗಳ ಭಾರತೀಯ ಕರೆನ್ಸಿ ನೋಟುಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಮಾದಕ ವಸ್ತು ಕಳ್ಳಸಾಗಣೆ ಮತ್ತು ಭಯೋತ್ಪಾದನೆಯ ವ್ಯವಸ್ಥಿತ ಜಾಲದಲ್ಲಿ ಇನ್ನಷ್ಟು ಮಂದಿ ಸಕ್ರಿಯವಾಗಿದ್ದು ಅವರನ್ನು ಶೀಘ್ರದಲ್ಲೇ ಬಂಧಿಸುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ಈ ಮೂವರು ಮಾದಕ ವಸ್ತು ಕಳ್ಳಸಾಗಣೆ ಜೊತೆಗೆ ಭಯೋತ್ಪಾದನೆ ಚಟುವಟಿಕೆಗಳಲ್ಲೂ ಸಕ್ರಿಯವಾಗಿದ್ದರು. ಜ ಮ್ಮು ಮತ್ತು ಕಾಶ್ಮೀರದಲ್ಲಿ ಲಷ್ಕರ್-ಎ-ತೈಬಾ ಉಗ್ರರಿಗೆ ಹಣಕಾಸು ನೆರವು ನೀಡಲು ಡ್ರಗ್ಸ್ ಕಳ್ಳಸಾಗಣೆಯ ವ್ಯವಸ್ಥಿತ ದಂಧೆಯಲ್ಲಿ ತೊಡಗಿದ್ದರು. ಇದೊಂದು ಅತಿ ದೊಡ್ಡ ವ್ಯವಸ್ಥಿತ ಹವಾಲ ರಾಕೆಟ್ ಆಗಿದ್ದು ಹಣಕಾಸು ವಹಿವಾಟು ಇಲ್ಲದೇ ಪರೋಕ್ಷವಾಗಿ ಹಣ ಪೂರೈಸುವ ವ್ಯವಸ್ಥೆಯಾಗಿತ್ತು ಎಂದು ಅವರು ವಿವರಿಸಿದ್ದಾರೆ.

Facebook Comments