ಪುಲ್ವಾಮಾದಲ್ಲಿ ಸೇನೆಯಿಂದ ಮತ್ತೆ ಮೂವರು ಭಯೋತ್ಪಾದಕರ ಎನ್‍ಕೌಂಟರ್

ಈ ಸುದ್ದಿಯನ್ನು ಶೇರ್ ಮಾಡಿ

ಶ್ರೀನಗರ, ಜೂ.3- ಪಾಕಿಸ್ತಾನಿ ಪ್ರೇರಿತ ಭಯೋತ್ಪಾದಕರ ಉಪಟಳ ಹೆಚ್ಚಾಗಿರುವ ಕಣಿವೆ ಪ್ರಾಂತ್ಯ ಕಾಶ್ಮೀರದ ಪುಲ್ವಾಮಾದಲ್ಲಿ ಸತತ ಎರಡನೆ ದಿನವಾದ ಇಂದು ನಡೆದ ಗುಂಡಿನ ಚಕಮಕಿಯಲ್ಲಿ ಭದ್ರತಾ ಪಡೆಗಳು ಮೂವರು ಆತಂಕವಾದಿಗಳನ್ನು ಹೊಡೆದುರುಳಿಸಿದ್ದಾರೆ. ಹತರಾದ ಉಗ್ರಗಾಮಿಗಳಿಂದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಕಂಗನ್ ಪ್ರದೇಶದಲ್ಲಿ ಉಗ್ರರ ಗುಂಪು ಅವಿತಿಟ್ಟುಕೊಂಡಿದ್ದಾರೆಂಬ ಖಚಿತ ಸುಳಿವಿನ ಮೇರೆಗೆ ಯೋಧರು ನಿನ್ನೆ ಮಧ್ಯರಾತ್ರಿಯಿಂದ ಆ ಸ್ಥಳವನ್ನು ಸುತ್ತುವರೆದು ಶೋಧ ನಡೆಸುತ್ತಿದ್ದಾಗ ಉಗ್ರಗಾಮಿಗಳು ಯೋಧರ ಮೇಲೆ ಗುಂಡು ಹಾರಿಸಿದರು.

ಯೋಧರು ಪ್ರತಿದಾಳಿ ನಡೆಸಿದಾಗ ಎನ್‍ಕೌಂಟರ್ ನಡೆಯಿತು. ಈ ಕಾರ್ಯಾಚರಣೆಯಲ್ಲಿ ಮೂವರು ಉಗ್ರರು ಹತರಾದರು ಎಂದು ಉನ್ನತ ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.ಹತರಾದ ಉಗ್ರರ ಬಳಿ ಇದ್ದ ಎಕೆ-47, ಎಕೆ-56 ರೈಫಲ್‍ಗಳು, ಪಿಸ್ತೂಲ್‍ಗಳು, ಹ್ಯಾಂಡ್ ಡ್ರೈನರ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.

ನಿನ್ನೆಯೂ ಕೂಡ ಪುಲ್ವಾಮಾದಲ್ಲಿ ನಡೆದ ಎನ್‍ಕೌಂಟರ್‍ನಲ್ಲಿ ಇಬ್ಬರು ಉಗ್ರರನ್ನು ಯೋಧರು ಹೊಡೆದುರುಳಿಸಿದ್ದರು. ಕೊರೊನಾ ವೈರಸ್ ನಿಗ್ರಹಕ್ಕಾಗಿ ಕಣಿವೆ ಪ್ರಾಂತ್ಯ ಜಮ್ಮು-ಕಾಶ್ಮೀರದಲ್ಲಿ ಲಾಕ್‍ಡೌನ್ ಜಾರಿಗೆ ಬಂದಾಗಿನಿಂದಲೂ ವಿವಿಧ ಪ್ರದೇಶಗಳಲ್ಲಿ ಉಗ್ರಗಾಮಿಗಳ ಉಪಟಳ ತೀವ್ರಗೊಂಡಿದ್ದು, ಭಯೋತ್ಪಾದಕರನ್ನು ಸದೆಬಡಿಯುವ ಕಾರ್ಯಾಚರಣೆಯನ್ನು ಯೋಧರು ಮತ್ತಷ್ಟು ಬಿರುಸುಗೊಳಿಸಿದ್ದಾರೆ.

Facebook Comments