‘ಯುದ್ಧ ಮುಗಿದಿದೆ, ನಿಮ್ಮ ಕರ್ಮ ನಿಮಗಾಗಿ ಕಾದಿದೆ’ : ಮೋದಿಗೆ ರಾಹುಲ್ ತಿರುಗೇಟು
ನವದೆಹಲಿ,ಮೇ 5- ಮಾಜಿ ಪ್ರಧಾನಿ ರಾಜೀವ್ ಗಾಂಧಿ ಭ್ರಷ್ಟಾಚಾರಿಯಾಗಿ ಜೀವನ ಅಂತ್ಯಗೊಳಿಸಿದರು ಎಂಬ ನರೇಂದ್ರ ಮೋದಿ ಹೇಳಿಕೆಗೆ ಕಠಿಣವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಯುದ್ಧ ಮುಗಿದಿದ್ದು, ನಿಮ್ಮ ಕರ್ಮ ಕಾದಿದೆ. ಅದನ್ನು ನೀವು ಅನುಭವಿಸಿ ಎಂದು ತಿರುಗೇಟು ನೀಡಿದ್ದಾರೆ.
ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯಾದಗಿನಿಂದ ಮೋದಿ ಮತ್ತು ರಾಹುಲ್ ನಡುವೆ ವಾಕ್ಸಮರ ಮುಂದುವರೆದಿದ್ದು ಇದೀಗ ಅದು ತಾರಕಕ್ಕೇರಿದೆ. ನಮ್ಮ ತಂದೆಯವರ ಬಗ್ಗೆ ನೀವು ಲಘುವಾಗಿ ಮಾತನಾಡಿದ್ದೀರಿ.
ನಿಮ್ಮ ಸ್ಥಾನಕ್ಕೆ ಅದು ಶೋಭೆ ತರುವಂತಹ ಹೇಳಿಕೆ ಅಲ್ಲ,ಈಗ ಲೋಕಸಭಾ ಚುನಾವಣೆಯ ಯುದ್ಧ ಮುಗಿದಿದೆ. ನೀವು ಅನುಭವಿಸಬೇಕಾದ ಮುಂದಿನ ಕರ್ಮ ಕಾದಿದೆ. ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನೀವು ಅದನ್ನು ಅನುಭವಿಸಲೇಬೇಕು ಎಂದು ರಾಹುಲ್ ಟ್ವಿಟರ್ನಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಪ್ರಧಾನಿ ವಿರುದ್ಧ ಮೊನಚು ವಾಗ್ದಾಳಿ ನಡೆಸಿರುವ ರಾಹುಲ್ ತಮ್ಮ ಹೇಳಿಕೆ ಕೊನೆಯಲ್ಲಿ “ ಪ್ರೀತಿ ಮತ್ತು ಆತ್ಮೀಯ ಆಲಿಂಗದೊಂದಿಗೆ” ಎಂಬ ವಾಕ್ಯವನ್ನು ಸೇರಿಸಿದ್ದಾರೆ.
ಮಾಜಿಪ್ರಧಾನಿ ರಾಜೀವ್ ಗಾಂಧಿ ಅವರು ತಮ್ಮ ಆಡಳಿತದಲ್ಲಿ ಭ್ರಷ್ಟಾಚಾರದಿಂದಲೇ ಮಿಂದಿದ್ದರು, ಹಗರಣಗಳು ಮತ್ತು ಭ್ರಷ್ಟಾಚಾರಗಳ ಕಳಂಕಗಳೊಂದಿಗೆ ಅವರ ಜೀವನ ಪರ್ಯಾವಸನವಾಯಿತು ಎಂದು ಮೋದಿ ನಿನ್ನೆ ತೀವ್ರ ವಾಗ್ದಾಳಿ ನಡೆಸಿದರು. ಇದಕ್ಕೆ ರಾಹುಲ್ ಇಂದು ತೀಕ್ಷ್ಣ ಪ್ರತ್ಯುತ್ತರದ ಪ್ರತಿದಾಳಿ ನಡೆಸಿದ್ದಾರೆ. ಇದರೊಂದಿಗೆ ಇವರಿಬ್ಬರ ನಡುವಿನ ವಾಕ್ಸಮರ ಮತ್ತಷ್ಟು ತಾರಕಕ್ಕೇರಿದೆ.