ಛತ್ತೀಸ್‍ಗಢದಲ್ಲಿ ಮತದಾನದ ವೇಳೆ ನಕ್ಸಲರಿಂದ ಬಾಂಬ್ ಸ್ಫೋಟ..!

ಈ ಸುದ್ದಿಯನ್ನು ಶೇರ್ ಮಾಡಿ

Blast--01

ರಾಯ್‍ಪುರ್, ನ.12-ತೀವ್ರ ಕುತೂಹಲ ಕೆರಳಿಸಿರುವ ಪಂಚ ರಾಜ್ಯಗಳ ಚುನಾವಣೆಯ ಮೊದಲ ಹಂತಕ್ಕೆ ಇಂದು ಛತ್ತೀಸ್‍ಗಢದಲ್ಲಿ ಅಭೂತಪೂರ್ವ ಬಿಗಿಭದ್ರತೆಯೊಂದಿಗೆ ಮತದಾನ ನಡೆದಿದೆ. ಚುನಾವಣೆ ಬಹಿಷ್ಕರಿಸುವಂತೆ ಎಚ್ಚರಿಕೆ ನೀಡಿ ನಿನ್ನೆಯಷ್ಟೇ ಹಿಂಸಾಚಾರ ನಡೆಸಿದ್ದ ನಕ್ಸಲರು ಇಂದು ಸಹ ಕೆಲವೆಡೆ ದುಷ್ಕøತ್ಯಗಳನ್ನು ಮುಂದುವರಿಸಿದ್ದು. ಮಾವೋವಾದಿಗಳ ಆತಂಕದ ನಡುವೆ ಮತದಾರರು ಮತಗಳನ್ನು ಚಲಾಯಿಸುತ್ತಿದ್ದ ದೃಶ್ಯ ಕಂಡುಬಂದಿತು.

ನಕ್ಸಲರ ದಾಳಿ ಬೆದರಿಕೆ ಆತಂಕದ ನಡುವೆ ವ್ಯಾಪಕ ಬಂದೋಬಸ್ತ್‍ನೊಂದಿಗೆ ಚುನಾವಣೆ ಆರಂಭಗೊಂಡ ಕೆಲವೇ ನಿಮಿಷಗಳಲ್ಲಿ ನಕ್ಸಲರು ದಂತೇವಾಡದಲ್ಲಿ ಬಾಂಬ್ ಸ್ಫೋಟಿಸಿ ಭಯಭೀತಿಯ ವಾತಾವರಣ ಸೃಷ್ಟಿಸಿದ್ದಾರೆ. ರಾಜ್ಯದ ಕೆಲವೆಡೆ ಮಾವೋವಾದಿಗಳ ದುಷ್ಕøತ್ಯಗಳು ನಡೆದಿರುವ ಬಗ್ಗೆ ವರದಿಯಾಗಿದೆ. ಚುನಾವಣೆಗೆ ಮುನ್ನಾ ದಿನವಾದ ನಿನ್ನೆ ಕಂಕೇರ್ ಅರಣ್ಯ ಪ್ರದೇಶದಲ್ಲಿ ನಕ್ಸಲರು ಬಾಂಬ್ ಸ್ಫೋಟಿಸಿ ಸೇನಾಧಿಕಾರಿಯನ್ನು ಕೊಂದು ಕೆಲವು ಯೋಧರನ್ನು ಗಾಯಗೊಂಡಿ ಆತಂಕದ ವಾತಾವರಣ ಸೃಷ್ಟಿಸಿದ್ದರು. ಅಲ್ಲದೇ ಒಟ್ಟು ಒಂಭತ್ತು ಕಡೆ ಬಾಂಬ್‍ಗಳನ್ನು ಸ್ಪೋಟಿಸಿದ್ದರು.

ದಂತೇವಾಡದ ಕಾಟಿಕಲ್ಯಾಣ್ ಬ್ಲಾಕ್‍ನಲ್ಲಿರುವ ತುಮಾಕ್ಲಲ್ ಕ್ಯಾಂಪ್ ಬಳಿ ನಕ್ಸಲರು ಎರಡು ಕಿ.ಮೀ. ದೂರದಲ್ಲಿ ಸುಧಾರಿತ ಸ್ಫೋಟಕ(ಐಇಡಿ) ಸ್ಫೋಟಿಸಿದ್ದಾರೆ. ಈ ಕುಕೃತ್ಯದಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಪ್ರಾಥಮಿಕ ವರದಿಗಳು ಹೇಳಿವೆ. ಛತ್ತೀಸ್‍ಗಢ ವಿಧಾನಸಭೆ ಚುನಾವಣೆಯ ಮೊದಲ ಹಂತದಲ್ಲಿ ನಕ್ಸಲ್ ಪೀಡಿತ ಎಂಟು ಜಿಲ್ಲೆಗಳು 18 ವಿಧಾನಸಭಾ ಕ್ಷೇತ್ರಗಳಲ್ಲಿ ಭದ್ರತೆಗಾಗಿ 1.25 ಲಕ್ಷ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮೊದಲ ಹಂತದಲ್ಲಿ ಮುಖ್ಯಮಂತ್ರಿ ರಮಣ್‍ಸಿಂಗ್ ಸೇರಿದಂತೆ ಒಟ್ಟು 190 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮೊದಲ ಹಂತದಲ್ಲಿ 31.80 ಲಕ್ಷ ಮತದಾರರು ತಮ್ಮ ಹಕ್ಕುಗಳನ್ನು ಚಲಾಯಿಸುತ್ತಿದ್ದಾರೆ. ಸುಗಮ ಮತದಾನಕ್ಕಾಗಿ 4,336 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಛತ್ತೀಸ್‍ಗಢದಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ನ.20ರಂದು ಎರಡನೇ ಹಂತಕ್ಕೆ ಮತದಾನವಾಗಲಿದ್ದು, ಡಿಸೆಂಬರ್ 11ರಂದು ಫಲಿತಾಂಶ ಪ್ರಕಟವಾಗಲಿದೆ. ಛತ್ತೀಸ್‍ಗಢದ ಎಂಟು ಜಿಲ್ಲೆಗಳಲ್ಲಿ ಇಂದು ಮತದಾನ ನಡೆಯಲಿದ್ದು, 18 ವಿಧಾನಸಭಾ ಕ್ಷೇತ್ರಗಳನ್ನು ಅತಿ ಸೂಕ್ಷ್ಮ ಎಂದು ಗುರುತಿಸಲಾಗಿದೆ. ಪ್ರಥಮ ಹಂತದ ಚುನಾವಣೆಗಾಗಿ ಕೇಂದ್ರೀಯ ಅರೆ ಸೇನಾ ಪಡೆ ಸೇರಿದಂತೆ 1.25 ಲಕ್ಷಕ್ಕೂ ಅಧಿಕ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ರಾಜ್ಯದ ವಿಶೇಷ ಪೊಲೀಸ್ ಮಹಾ ನಿರೀಕ್ಷಕ (ನಕ್ಸಲ್ ನಿಗ್ರಹ ಕಾರ್ಯಾಚರಣೆ) ಡಿ.ಎಂ.ಅವಸ್ಥಿ ತಿಳಿಸಿದ್ಧಾರೆ.

ಸಿಆರ್‍ಪಿಎಫ್, ಬಿಎಸ್‍ಎಫ್, ಐಟಿಬಿಪಿಯಂಥ ಅರೆ ಸೇನಾ ಘಟಕಗಳೂ ಸೇರಿದಂತೆ ಒಟ್ಟು 650 ತುಕಡಿಗಳು ಹಾಗೂ 65,000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ವ್ಯಾಪಕ ಭದ್ರತೆಗಾಗಿ ನಿಯೋಜಿಸಲಾಗಿದೆ. ಅಲ್ಲದೇ ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ಪರಿಣಿತಿ ಪಡೆದಿರುವ ವಿಶೇಷ ಕಮ್ಯಾಂಡೋಗಳೂ ಕೂಡ ಮತಕೇಂದ್ರಗಳ ಬಳಿ ಬಂದೋಬಸ್ತ್ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಅವರು ವಿವರಿಸಿದ್ದಾರೆ.

ಡ್ರೋನ್‍ಗಳನ್ನು ಸಹ ನಿಯೋಜಿಸಿ ನಕ್ಸಲೀಯರ ಚಲನವಲನಗಳ ಮೇಲೆ ಹದ್ದಿನ ಕಣ್ಣಿನ ನಿಗಾ ಇಡಲಾಗಿದೆ. ಚುನಾವಣೆ ಬಹಿಷ್ಕರಿಸುವಂತೆ ಕರೆ ನೀಡಿರುವ ನಕ್ಸಲ್ ಸಂಘಟನೆಗಳು, ಮತಗಟ್ಟೆಗಳ ಮೇಲೆ ದಾಳಿ ನಡೆಸುವುದಾಗಿ ಗಂಭೀರ ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ಮತದಾನ ನಡೆಯುವ ಎಂಟು ಜಿಲ್ಲೆಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಿದ್ದು, ಅಭೂತಪೂರ್ವ ಬಂದೋಬಸ್ತ್ ಮಾಡಲಾಗಿದ್ದರೂ, ಕೆಲವೆಡೆ ಸ್ಫೋಟಗಳು ನಡೆದಿವೆ.

ಕಳೆದ 15 ದಿನಗಳಲ್ಲಿ ಚುನಾವಣೆ ಪ್ರಕ್ರಿಯೆಗೆ ಭಂಗ ಉಂಟು ಮಾಡಲು ಮಾವೋವಾದಿಗಳು ಅನೇಕ ದಾಳಿಗಳನ್ನು ನಡೆಸಿ, 13 ಜನರನ್ನು ಬಲಿತೆಗೆದುಕೊಂಡಿದ್ದಾರೆ. ಮಾವೋವಾದಿಗಳ ಪ್ರಾಬಲ್ಯವಿರುವ ಬಸ್ತಾರ್ ಪ್ರಾಂತ್ಯ ಮತ್ತು ರಾಜ್‍ನಂದಗಾಂವ್ ಜಿಲ್ಲೆಗಳಲ್ಲಿ ಭದ್ರತಾ ಪಡೆಗಳು 300ಕ್ಕೂ ಹೆಚ್ಚು ಸುಧಾರಿತ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದಾರೆ. ಶಾಂತಿಯುತ ಮತದಾನಕ್ಕೆ ಭಂಗ ತರುವ ನಕ್ಸಲರ ಯತ್ನಗಳನ್ನು ಹಿಮ್ಮೆಟ್ಟಿಸಲು ಅಗತ್ಯವಾದ ಸಕಲ ಕ್ರಮಗಳನ್ನು ಕೈಗೊಂಡಿರುವುದಾಗಿ ಉನ್ನತ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.  ಛತ್ತೀಸ್‍ಗಢ ವಿಧಾನಸಭೆಯಲ್ಲಿ ಒಟ್ಟು 90 ಸ್ಥಾನಗಳಿವೆ. ಕಳೆದ 15 ವರ್ಷಗಳಿಂದ ಅಧಿಕಾರದಲ್ಲಿರುವ ಬಿಜೆಪಿ ಸತತ ನಾಲ್ಕನೇ ಬಾರಿ ಗದ್ದುಗೆ ಹಿಡಿಯುವ ತವಕದಲ್ಲಿದೆ. ಬಿಜೆಪಿ ಗೆಲುವಿನ ಓಟಕ್ಕೆ ಕಡಿವಾಣ ಹಾಕಲು ಕಾಂಗ್ರೆಸ್ ಶತಪ್ರಯತ್ನ ನಡೆಸುತ್ತಿದೆ.

# ಕಣದಲ್ಲಿ ಘಟಾನುಘಟಿಗಳು :

ಮುಖ್ಯಮಂತ್ರಿ ರಮಣ ಸಿಂಗ್ ರಾಜ್‍ನಂದಗಾಂವ್ ವಿಧಾನಸಭಾ ಕ್ಷೇತ್ರದಿಂದ ಸತತ ಮೂರನೇ ಬಾರಿ ವಿಜಯಿಯಾಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಸೊಸೆ ಕರುಣಾ ಶುಕ್ಲಾ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದು, ರಮಣ್ ಸಿಂಗ್‍ಗೆ ತೀವ್ರ ಪೈಪೊೀಟಿ ನೀಡುವ ನಿರೀಕ್ಷೆ ಇದೆ. ಕಾಂಗ್ರೆಸ್ ಬಂಡಾಯ ನಾಯಕ ಅಜಿತ್ ಜೋಗಿ ಬಿಎಸ್‍ಪಿ ಜೊತೆ ಮೈತ್ರಿ ಮಾಡಿಕೊಂಡು ಚುನಾವಣಾ ಕಣಕ್ಕೆ ಇಳಿದಿದ್ದು, ಜಾತ್ಯತೀತ ಮತ ವಿಭಜನೆಯಾಗುವ ಸಾಧ್ಯತೆ ಕಂಡು ಬರುತ್ತಿದೆ. ಈ ನಡುವೆ ಚುನಾವಣೆಗೆ ಕೆಲವು ಗಂಟೆಗಳ ಮುನ್ನ ಛತ್ತೀಸ್‍ಗಢ ಪ್ರದೇಶ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಘನರಾಮ್ ಸಾಹು ಪಕ್ಷಕ್ಕೆ ರಾಜೀನಾಮೆ ನೀಡಿದ್ಧಾರೆ. ಇದು ಕಾಂಗ್ರೆಸ್‍ಗೆ ಹಿನ್ನಡೆಯಾಗಿದೆ.

Facebook Comments