50:50 ನೀತಿಗೆ ಚಿತ್ರರಂಗ ಆಕ್ರೋಶ : ಸಿಎಂ ಬಳಿಗೆ ನಿಯೋಗ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.3-ಕೋವಿಡ್ ಲಾಕ್‍ಡೌನ್‍ನಿಂದಾಗಿ ಚಿತ್ರರಂಗ ಈಗಿನ್ನೂ ಚೇತರಿಸಿಕೊಳ್ಳುತ್ತಿದ್ದು ಈ ನಡುವೆ ಮತ್ತೆ ಚಿತ್ರಮಂದಿರಗಳಲ್ಲಿ 50- 50 ಸೂತ್ರ ಅಳವಡಿಸಲು ಹೊರಟಿರುವುದು ಚಿತ್ರರಂಗಕ್ಕೆ ಭಾರೀ ಪೆಟ್ಟು ಬೀಳಲಿದೆ ಎಂದು ಕರ್ನಾಟಕ ಚಲನಚಿತ್ರವಾಣಿಜ್ಯಮಂಡಳಿಯ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ ಚಿತ್ರಮಂದಿರಗಳಲ್ಲಿ 50: 50 ಸೂತ್ರ ಅಳವಡಿಸಲು ಸರ್ಕಾರ ತೀರ್ಮಾನಿಸಿರುವ ಕ್ರಮ ಸರಿಯಲ್ಲ ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮತ್ತೊಮ್ಮೆ ಮನವಿ ಸಲ್ಲಿಸಲು ನಡೆದ ಸಭೆಯಲ್ಲಿ ವಾಣಿಜ್ಯಮಂಡಳಿ ಸದಸ್ಯರು ತೀರ್ಮಾನ ಕೈಗೊಂಡಿದ್ದಾರೆ.

ಕೋವಿಡ್ ಲಾಕ್‍ಡೌನ್ ನಂತರ ಈಗ ಸ್ಟಾರ್ ನಟರುಗಳ ಚಿತ್ರಗಳು ಬಿಡುಗಡೆಯಾಗುತ್ತಿವೆ, ಇತ್ತೀಚೆಗಷ್ಟೇ ಧ್ರುವಸರ್ಜಾ ಅಭಿನಯದ ಪೊಗರು, ಚಾಲೆಂಜಿಂಗ್‍ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಚಿತ್ರಗಳು ಯಶಸ್ಸಿನ ಹಾದಿಯಲ್ಲಿದೆ, ಇದರ ನಡುವೆ ಪವರ್‍ಸ್ಟಾರ್ ಪುನೀತ್‍ರಾಜ್‍ಕುಮಾರ್ ಅಭಿನಯದ ಯುವರತ್ನ ಚಿತ್ರಕ್ಕೂ ಪ್ರೇಕ್ಷಕರಿಂದ ಉತ್ತಮ ಅಭಿಪ್ರಾಯಗಳು ವ್ಯಕ್ತವಾಗಿದೆ.

ಯುವರತ್ನದಂತಹ ಸದಭಿರುಚಿ ಚಿತ್ರವನ್ನು ನೋಡಲು ಪ್ರೇಕ್ಷಕರು ಹೊರಟಿರುವಾಗಲೇ ಸರ್ಕಾರವು 50- 50ರ ಸೂತ್ರ ಅಳವಡಿಸುತ್ತಿರು ವುದು ಸರಿಯಲ್ಲ, ಈಗಾಗಲೇ ಬುಕ್‍ಮೈ ಶೋ ಸೇರಿದಂತೆ ಹಲವು ವೆಬ್‍ಸೈಟ್‍ಗಳ ಮೂಲಕ ಕೆಲವು ದಿನಗಳ ಶೋಗಳು ಬುಕ್ ಆಗಿದ್ದು ಈಗ ಏಕಾಏಕಿ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಸಂಖ್ಯೆ ಅರ್ಧದಷ್ಟು ಇಳಿಸಲು ಹೊರಟಿರುವುದರಿಂದ ವಿತರಕ, ಪ್ರದರ್ಶಕ ಹಾಗೂ ನಿರ್ಮಾಪಕರ ವಲಯಕ್ಕೂ ತೊಂದರೆಯಾಗಲಿದೆ. ಹಾಗಾಗಿ ಇದರಿಂದ ವಿನಾಯಿತಿ ನೀಡಬೇಕೆಂದು ಸರ್ಕಾರವನ್ನು ವಿನಂತಿಸುತ್ತೇವೆ ಎಂದು ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಜೈರಾಜ್ ಹೇಳಿದ್ದಾರೆ.

ನಾವು ಚಿತ್ರಮಂದಿರಗಳಲ್ಲಿ ಕೋವಿಡ್ ನಿಯಮಗಳನ್ನು ಚಾಚೂತಪ್ಪದೆ ಪಾಲಿಸುತ್ತೇವೆ, ಪ್ರತಿ ಶೋ ನಂತರವೂ ಚಿತ್ರಮಂದಿರವನ್ನು ಸ್ಯಾನಿಟೈಸ್ ಮಾಡುತ್ತೇವೆ, ಪ್ರೇಕ್ಷಕರು ಕೂಡ ಮಾಸ್ಕ್ ಧರಿಸಿಯೇ ಸಿನಿಮಾ ವೀಕ್ಷಿಸುತ್ತಾರೆ, ಚಿತ್ರಮಂದಿರಗಳ ಒಳಗೆ ಹೋಗುವ ಮುನ್ನ ಎಲ್ಲರ ಟೆಂಪರೇಚರ್ ಅನ್ನು ಕೂಡ ತಪಾಸಣೆ ಮಾಡುತ್ತೇವೆ. 50- 50ರ ಸೂತ್ರವನ್ನು ಹಿಂಪಡೆಯಬೇಕೆಂದು ಸರ್ಕಾರವನ್ನು ಒತ್ತಾಯಿಸುವುದಾಗಿಯೂ ಚಲನಚಿತ್ರ ವಾಣಿಜ್ಯಮಂಡಳಿಯ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ನಮಗೆ ಎದುರಾಗಿರುವ ಸಂಕಷ್ಟಗಳನ್ನು ಪರಿಹರಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮುಂದಾಗಬೇಕು ಇದು ಅನಿವಾರ್ಯ ಕೂಡ. ಚಿತ್ರಮಂದಿರಗಳಿಗೆ ಮಿತಿ ಹೇರಿದರೆ ಅದು ಪರೋಕ್ಷವಾಗಿ ಚಿತ್ರರಂಗದ ಮೇಲೆ ಭಾರೀ ಪೆಟ್ಟು ಬೀಳುತ್ತದೆ ಎಂದು ಹೇಳಿದ್ದಾರೆ. ಇದರ ಬಗ್ಗೆ ನಿಯೋಗ ಸದ್ಯದಲ್ಲೇ ಸಿಎಂ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ.

ಇಂದು ನಡೆದ ಸಭೆಯಲ್ಲಿ ಚಲನಚಿತ್ರ ವಾಣಿಜ್ಯಮಂಡಳಿಯ ಮಾಜಿ ಅಧ್ಯಕ್ಷ ಎಸ್.ಎ. ಚಿನ್ನೇಗೌಡ, ನಿರ್ಮಾಪಕ ಎನ್.ಎಂ.ಸುರೇಶ್ ಮತ್ತಿತರರು ಪಾಲ್ಗೊಂಡಿದ್ದರು. ಅಪ್ಪು ಅಭಿಮಾನಿಗಳ ಮುತ್ತಿಗೆ:ಏಕಾಏಕಿ ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೊಳಿಸಿದೆ, ನಿನ್ನೆಯಷ್ಟೇ ನಮ್ಮ ಪುನೀತ್‍ರಾಜ್‍ಕುಮಾರ್ ಅವರ ಯುವರತ್ನ ಚಿತ್ರ ಬಿಡುಗಡೆಯಾಗಿದೆ, ಎಲ್ಲೆಡೆ ಅದಕ್ಕೆ ಉತ್ತಮ ಪ್ರತಿಕ್ರಿಯೆಗಳು ಬರುತ್ತಿರುವಾಗಲೇ ಸರ್ಕಾರ ಏಕಾಏಕಿ 50- 50 ನಿಯಮ ತಂದು ಅಭಿಮಾನಿಗಳನ್ನು ನಿರಾಸೆಗೊಳಿಸಿದೆ.

ಸರ್ಕಾರ ಕೂಡಲೇ ಇದರ ಬಗ್ಗೆ ಗಮನಹರಿಸಬೇಕು ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಅಪ್ಪು ಬ್ರಿಗೇಡ್‍ನ ಕಾರ್ಯಕರ್ತರು ಹೇಳಿದ್ದು, ಇಂದು ಸಾಂಕೇತಿಕವಾಗಿ ಕರ್ನಾಟಕ ವಾಣಿಜ್ಯಮಂಡಳಿ ಮುಂದೆ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Facebook Comments