ಸಂಬಂಧಿಕರ ಮನೆಯಲ್ಲೇ ಕಳ್ಳತನ ಮಾಡಿದ್ದ ಸಿವಿಲ್ ಕಂಟ್ರ್ಯಾಕ್ಟರ್ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.12- ಹೆಲ್ಮೆಟ್ ಹಾಕಿಕೊಂಡು ಬಂದು ಸಂಬಂಕರ ಮನೆಯಲ್ಲೇ ಕಳ್ಳತನ ಮಾಡಿ ಪರಾರಿಯಾಗಿದ್ದ ಸಿವಿಲ್ ಕಂಟ್ರ್ಯಾಕ್ಟರ್ ಒಬ್ಬರನ್ನು ವಿಜಯನಗರ ಠಾಣೆ ಪೊಲೀಸರು ಬಂಧಿಸಿ 10 ಲಕ್ಷ ರೂ. ಬೆಲೆಬಾಳುವ 260 ಗ್ರಾಂ ತೂಕದ ಚಿನ್ನಾಭರಣ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಶ್ರೀನಿವಾಸ್ ಬಂಧಿತ ಸಿವಿಲ್ ಕಂಟ್ರ್ಯಾಕ್ಟರ್. ಸೆ.30ರಂದು ಸಂಜೆ 4.15ರ ಸಮಯದಲ್ಲಿ ಪಿರ್ಯಾದುದಾರರ ಪತ್ನಿ ಮನೆಗೆ ಬೀಗ ಹಾಕಿಕೊಂಡು ಬೀಗದ ಕೀಯನ್ನು ಹೂ ಕುಂಡದಲ್ಲಿ ಹಾಕಿ ಯೋಗ ತರಗತಿಗೆ ಹೋಗಿದ್ದರು.

ಇದೇ ಸಮಯ ಕಾದಿದ್ದ ಶ್ರೀನಿವಾಸ್ ಇವರ ಮನೆ ಬಳಿಗೆ ಹೆಲ್ಮೆಟ್ ಹಾಕಿಕೊಂಡು ಬಂದು ಹೂ ಕುಂಡದಲ್ಲಿದ್ದ ಕೀಯನ್ನು ತೆಗೆದುಕೊಂಡು ಬೀಗ ತೆಗೆದು ಒಳಗೆ ಹೋಗಿ ಆಭರಣ ಕಳ್ಳತನ ಮಾಡಿಕೊಂಡು ಮತ್ತೆ ಮನೆಗೆ ಬೀಗ ಹಾಕಿ ಕೀಯನ್ನು ಹೂ ಕುಂಡದಲ್ಲಿಟ್ಟು ಹೆಲ್ಮೆಟ್ ಹಾಕಿಕೊಂಡೇ ಹೊರಗೆ ಹೋಗಿ ಆಟೋದಲ್ಲಿ ಪರಾರಿಯಾಗಿದ್ದನು.

ತರಗತಿ ಮುಗಿಸಿಕೊಂಡು ಸಂಜೆ 5.15ರ ಸುಮಾರಿಗೆ ಮಹಿಳೆ ಮನೆಗೆ ಬಂದು ನೋಡುವಷ್ಟರಲ್ಲಿ ಕೀ ಬಳಸಿ ಮನೆಯಲ್ಲಿದ್ದ ಆಭರಣ ಕಳುವು ಮಾಡಿಕೊಂಡು ಹೋಗಿರುವುದು ಅವರ ಗಮನಕ್ಕೆ ಬಂದಿದೆ.

ತಕ್ಷಣ ಅವರ ಪತಿ ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇನ್ಸ್‍ಪೆಕ್ಟರ್ ಸತೀಶ್‍ಕುಮಾರ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡು ಕೃತ್ಯ ನಡೆದ ಸ್ಥಳದಲ್ಲಿ ದೊರೆತ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ಮಾಹಿತಿ ಸಂಗ್ರಹಿಸಿ ಆರೋಪಿಯನ್ನು ಬಂಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿಚಾರಣೆ ವೇಳೆ ಆರೋಪಿ ನೀಡಿದ ಹೇಳಿಕೆ ಮೇರೆಗೆ 10 ಲಕ್ಷ ರೂ. ಬೆಲೆಬಾಳುವ 260ಗ್ರಾಂ ತೂಕದ ಚಿನ್ನದ ಒಡವೆಗಳನ್ನು ವಶಪಡಿಸಿಕೊಳ್ಳಲಾಗಿದೆ.

Facebook Comments