ಸ್ನೇಹಿತೆ ಮನೆಯಲ್ಲಿ ಕಳ್ಳತನ ಮಾಡಿದ್ದ ವ್ಯಕ್ತಿ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಏ.16- ಸ್ನೇಹಿತೆ ಮನೆಯಲ್ಲೇ ಕಳ್ಳತನ ಮಾಡಿದ್ದ ವ್ಯಕ್ತಿಯನ್ನು ಉತ್ತರವಿಭಾಗದ ಬಾಗಲಗುಂಟೆ ಠಾಣೆ ಪೊಲೀಸರು ಬಂಧಿಸಿ 18 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಕಾರು ಮತ್ತು ಬೈಕ್‍ನ್ನು ವಶಪಡಿಸಿಕೊಂಡಿದ್ದಾರೆ. ಮಂಡ್ಯ ಮೂಲದ ಸಿದ್ದಪ್ಪ ಅಲಿಯಾಸ್ ಸಂಜಯ್(38) ಬಂಧಿತ ಆರೋಪಿ. ಈತ ಚಿಕ್ಕಬಾಣಾವರದಲ್ಲಿ ವಾಸಿಸುತ್ತಿದ್ದನು. ಬಾಗಲಗುಂಟೆಯ ವಿಜಯಲಕ್ಷ್ಮಿ ಬಡಾವಣೆಯ ನಿವಾಸಿ ಉಷಾ ಎಂಬುವರ ಮನೆಗೆ ಕಳೆದ ಆ.18ರಂದು ಸಂಜೆ 5 ಗಂಟೆ ಸುಮಾರಿನಲ್ಲಿ ಸಂಜಯ್ ಹೋಗಿದ್ದನು.

ಆ ಸಂದರ್ಭದಲ್ಲಿ ಉಷಾ ಅವರು ಅಂಗಡಿಗೆ ಹೋಗಿಬರುವಷ್ಟರಲ್ಲಿ ಸಂಜಯ್ ಮನೆಯಲ್ಲಿ ಇರಲಿಲ್ಲ. ಈ ಬಗ್ಗೆ ಮನೆಯಲ್ಲಿದ್ದ ಮಗ ಧನುಷ್‍ನನ್ನು ವಿಚಾರಿಸಿದಾಗ ಸಂಜಯ್ ಹೋದರೆಂದು ತಿಳಿಸಿದ್ದಾನೆ. ಸಂಜಯ್ ಸಂಜೆ 7 ಗಂಟೆ ಸುಮಾರಿನಲ್ಲಿ ಮಂಚದ ಮೇಲಿದ್ದ ಬ್ಯಾಗಿಗೆ ಬಟ್ಟೆಯನ್ನು ಇಡಲು ಹೋದಾಗ ಬ್ಯಾಗಿನಲ್ಲಿಟ್ಟಿದ್ದ ಚಿನ್ನದ ಒಡವೆಗಳು ಇರಲಿಲ್ಲ.
ತಕ್ಷಣ ಸಂಜಯ್ ಅವರ ಮೇಲೆ ಅನುಮಾನ ವ್ಯಕ್ತಪಡಿಸಿ ಬಾಗಲಗುಂಟೆ ಪೊಲೀಸ್ ಠಾಣೆಗೆ ಉಷಾ ಅವರು ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದರು. ಏ.4ರಂದು ಸಂಜೆ 7 ಗಂಟೆಯಲ್ಲಿ ಬಾಗಲಗುಂಟೆ ವ್ಯಾಪ್ತಿಯ ಮಂಜುನಾಥನಗರ, ವಿಡಿಯಾ ಬಸ್ ಹತ್ತಿರ ಆರೋಪಿ ಸಂಜಯ್ ಇರುವುದಾಗಿ ಸಿಬ್ಬಂದಿಗೆ ಮಾಹಿತಿ ಬಂದಿದೆ. ತಕ್ಷಣ ಪೊಲೀಸರು ಸ್ಥಳಕ್ಕೆ ಹೋಗಿ ಆರೋಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆ ಗೊಳಪಡಿಸಿದಾಗ ಸ್ನೇಹಿತೆ ಮನೆಯಲ್ಲಿ ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಈ ಸಂಬಂಧ ಆರೋಪಿಯಿಂದ 102 ಗ್ರಾಂ ತೂಕದ ಚಿನ್ನಾಭರಣ, ಕಾರು, ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ 2015ರಲ್ಲಿ ಚಿಕ್ಕಬಾಣಾವರದಲ್ಲಿ ದ್ದಾಗ ಚಂದ್ರಕಲಾ ಟೂರ್ಸ್ ಅಂಡ್ ಟ್ರಾವೆಲ್ಸ್‍ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾಗ ಉಷಾ ಅವರಿಗೆ ಪರಿಚಯವಾಗಿ ಸ್ನೇಹಿತರಾಗಿದ್ದರು. ಆಗಾಗ್ಗೆ ಮನೆಗೆ ಬಂದು ಹೋಗುತ್ತಿ ದ್ದಾಗ ಸ್ನೇಹಿತೆ ಮನೆಯಲ್ಲಿ ಕಳ್ಳತನ ಮಾಡಿರುವುದಾಗಿ ತಿಳಿಸಿದ್ದಾನೆ. ಲಾಕ್‍ಡೌನ್ ಸಮಯದಲ್ಲಿ ಕೆಲಸವಿಲ್ಲದಾಗ ಯಲಹಂಕದಲ್ಲಿರುವ ವೀರಾಂಜನೇಯಲು ಎಂಬುವರ ಇನೋವಾ ಕಾರನ್ನು ಬಾಡಿಗೆಗೆ ಪಡೆದುಕೊಂಡಿದ್ದನು.

ಎರಡುಮೂರು ತಿಂಗಳು ಬಾಡಿಗೆ ನೀಡಿ ನಂತರ ಮಾಲೀಕ ವೀರಾಂಜನೇಯಲು ಅವರಿಗೆ ಯಾವುದೇ ಬಾಡಿಗೆ ಕೊಡದೆ ಅವರ ಕಾರು ಮತ್ತು ಒಂದು ದ್ವಿಚಕ್ರ ವಾಹನವನ್ನು ಕಳವು ಮಾಡಿಕೊಂಡು ಹೋಗಿರುವುದು ತನಿಖೆಯಿಂದ ತಿಳಿದುಬಂದಿದೆ. ಆರೋಪಿಯ ಬಂಧನದಿಂದ ಬಾಗಲಗುಂಟೆ ಠಾಣೆಯ ಒಂದು ಮನೆ ಕಳವು ಮತ್ತು ಯಲಹಂಕ ಪೊಲೀಸ್ ಠಾಣೆಯ ಒಂದು ಸೇವಕರಿಂದ ಕಳವು ಪ್ರಕರಣ ಪತ್ತೆಯಾಗಿದೆ.
ಯಶವಂತಪುರ ಉಪವಿಭಾಗದ ಎಸಿಪಿ ಶ್ರೀನಿವಾಸ್ ರೆಡ್ಡಿ ಮಾರ್ಗದರ್ಶನದಲ್ಲಿ ಇನ್‍ಸ್ಪೆಕ್ಟರ್ ಸುನೀಲ್ ಅವರನ್ನೊಳಗೊಂಡ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

Facebook Comments