ದ್ವಿಚಕ್ರ ವಾಹನ ಕಳ್ಳನ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.5- ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಯುವಕನನ್ನು ಉತ್ತರ ವಿಭಾಗದ ಬಾಗಲಗುಂಟೆ ಠಾಣೆ ಪೊಲೀಸರು ಬಂಧಿಸಿ ಹತ್ತು ಬೈಕ್‍ಗಳನ್ನು ವಶಕ್ಕೆ ಪಡೆದಿದ್ದಾರೆ.
ಲಗ್ಗೆರೆಯ ಕಾವೇರಿ ನಗರದ ನಿವಾಸಿ ರೋಹಿತ್ (23) ಬಂಧಿತ ಆರೋಪಿ. ಸಂಪಂಗಿ ರಾಮಯ್ಯ ಲೇಔಟ್ ನಿವಾಸಿ ವೀರಣ್ಣ ಎಂಬುವರು ನ.15ರಂದು ರಾತ್ರಿ ತಮ್ಮ ಮನೆ ಮುಂದೆ ಬೀಗ ಹಾಕಿ ಬೈಕ್ ನಿಲ್ಲಿಸಿದ್ದರು.

ಮಾರನೇ ದಿನ ನೋಡಿದಾಗ ಬೈಕ್ ಕಳ್ಳತನವಾಗಿತ್ತು. ಈ ಬಗ್ಗೆ ಬಾಗಲಗುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಡಿ.1ರಂದು ಈ ವ್ಯಾಪ್ತಿಯಲ್ಲಿ ಪೊಲೀಸರು ಗಸ್ತಿನಲ್ಲಿದ್ದಾಗ ಶೆಟ್ಟಿ ಹಳ್ಳಿ ರೈಲ್ವೆ ಗೇಟ್ ಬಳಿ ಅನುಮಾನಾಸ್ಪದವಾಗಿ ಬೈಕ್‍ನಲ್ಲಿ ಬರುತ್ತಿದ್ದ ಯುವಕನನ್ನು ತಡೆದು ದಾಖಲೆ ತೋರಿಸುವಂತೆ ಕೇಳಿದ್ದಾರೆ. ಬೈಕ್‍ನ ಯಾವುದೇ ದಾಖಲಾತಿಗಳು ಇಲ್ಲದಿರುವುದನ್ನು ಗಮನಿಸಿದ ಪೊಲೀಸರು ಠಾಣೆಗೆ ಕರೆದೊಯ್ದು ಹೆಚ್ಚಿನ ವಿಚಾರಣೆ ಗೊಳಪಡಿಸಿದಾದ ವಾಹನ ಕಳವು ಮಾಡಿರುವುದು ತಿಳಿದುಬಂದಿದೆ.

ಆರೋಪಿಯ ಬಂಧನದಿಂದ ಬಾಗಲಗುಂಟೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ 5 ಪ್ರಕರಣಗಳು, ಬ್ಯಾಡರಹಳ್ಳಿ, ರಾಜರಾಜೇಶ್ವರಿನಗರ, ಅನ್ನಪೂರ್ಣೇಶ್ವರಿನಗರ ಸೇರಿದಂತೆ ಒಟ್ಟು 8 ದ್ವಿಚಕ್ರ ವಾಹನ ಕಳವು ಪ್ರಕರಣಗಳು ಪತ್ತೆಯಾಗಿರುತ್ತದೆ. ಉಳಿದ ಎರಡು ದ್ವಿಚಕ್ರವಾಹನ ಕಳವು ಪ್ರಕರಣಗಳ ವಾರಸುದಾರರನ್ನು ಪತ್ತೆ ಮಾಡಬೇಕಾಗಿದೆ. ಆರೋಪಿ ರೋಹಿತ್ ಈ ಹಿಂದೆ ಹೋಂಡಾ ಶೋ ರೂಂನಲ್ಲಿ ಸರ್ವಿಸ್ ಕೆಲಸ ಮಾಡಿಕೊಂಡಿದ್ದು, ಕಳೆದ ಜೂನ್‍ನಲ್ಲಿ ಪೀಣ್ಯವ್ಯಾಪ್ತಿಯಲ್ಲಿ ನಡೆದಿದ್ದ ದ್ವಿಚಕ್ರವಾಹನ ಕಳವು ಪ್ರಕರಣದಲ್ಲಿ ಬಂಧಿತನಾಗಿದ್ದನು.

ಆ ಸಂದರ್ಭದಲ್ಲಿ ಪೀಣ್ಯ ಠಾಣೆಯ ಎರಡು ಪ್ರಕರಣ ಚಂದ್ರಲೇಔಟ್, ಸೋಲದೇವನಹಳ್ಳಿ, ಗಂಗಮ್ಮನ ಗುಡಿ, ತುಮಕೂರು, ತಾವರೆಕೆರೆ, ಕುಂಬಳಗೂಡು, ಮೈಸೂರು ವಿಜಯನಗರದ ಒಟ್ಟು 13 ದ್ವೀಚಕ್ರ ವಾಹನ ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಪ್ರಕರಣವೊಂದರಲ್ಲಿ ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರಬಂದು ತನ್ನ ದುಶ್ಚಟಗಳ ವೆಚ್ಚಕ್ಕಾಗಿ ಈ ಕೃತ್ಯವೆಸಗಿರುವುದು ತನಿಖೆಯಿಂದ ತಿಳಿದುಬಂದಿದೆ. ಈ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಆತನ ಪತ್ತೆ ಕಾರ್ಯ ಪ್ರಗತಿಯಲ್ಲಿದೆ.

Facebook Comments