ವ್ಯಕ್ತಿಯೊಬ್ಬನ ಬ್ಯಾಗ್ ಕದ್ದ ಕಳ್ಳರಿಗೆ ಕಾದಿತ್ತು ಬಿಗ್ ಶಾಕ್..!

ಈ ಸುದ್ದಿಯನ್ನು ಶೇರ್ ಮಾಡಿ

ಸ್ಯಾನ್ ಜೋಸ್ (ಅಮೆರಿಕಾ), ಅ.10- ಕಾರಿನೊಳಗಿದ್ದ ಬ್ಯಾಗ್‍ನಲ್ಲಿ ಹಣ, ಆಭರಣಗಳಿವೆ ಎಂದು ಭಾವಿಸಿ ಅದನ್ನು ಕದ್ದಿದ್ದ ಕಳ್ಳರಿಗೆ ಭಾರೀ ನಿರಾಸೆ ಜತೆಗೆ ಹೌಹಾರುವಂತಹ ಪ್ರಸಂಗವೂ ಎದುರಾಯಿತು. ಆ ಬ್ಯಾಗ್‍ನಲ್ಲಿದ್ದುದು ಬೆಲೆಬಾಳುವ ವಸ್ತುಗಳಲ್ಲ. ಬದಲಿಗೆ ಹಾವುಗಳು ಮತ್ತು ಸರೀಸೃಪಗಳು..!

ಅಮೆರಿಕದ ಕ್ಯಾಲಿಫೋರ್ನಿಯಾದ ಸ್ಯಾನ್ ಜೋಸ್‍ನಲ್ಲಿ ಈ ಘಟನೆ ನಡೆದಿದೆ. ಬ್ರಿಯಾನ್ ಗುಂಡಿ ಆ ಪ್ರದೇಶದ ಸರೀಸೃಪ ಪೋಷಕ. ಇಂತಹ ತನ್ನ ಸ್ಥಳದಲ್ಲಿ ಸರ್ಪಗಳು , ಮೊಸಳೆಗಳು ಮತ್ತು ವಿವಿಧ ಜಾತಿಯ ಹಲ್ಲಿಗಳನ್ನು ಸಾಕಿ ಅವುಗಳ ಸಂತಾನೋತ್ಪತ್ತಿ ಮೂಲಕ ಹಣ ಗಳಿಸುತ್ತಾರೆ.

ಸ್ಯಾನ್ ಜೋಸ್‍ನ ಮಾರ್ಟಿನ್ ಲೂಥರ್ ಕಿಂಗ್ ಗ್ರಂಥಾಲಯದಲ್ಲಿ ಸರೀಸೃಪಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡಲು ಬ್ರಿಯಾನ್‍ರನ್ನು ಆಹ್ವಾನಿಸಲಾಗಿತ್ತು. ಅವರು ಚೀಲಗಳಲ್ಲಿ ಹಾವುಗಳು ಮತ್ತು ಇತರ ಸರೀಸೃಪಗಳನ್ನು ತುಂಬಿಕೊಂಡು ಗ್ರಂಥಾಲಯಕ್ಕೆ ತೆರಳಿ ತಮ್ಮ ಕಾರ್ ಪಾರ್ಕಿಂಗ್ ಮಾಡಿದ್ದರು.

ಹಾವುಗಳಿದ್ದ ಒಂದು ಚೀಲವನ್ನು ಕಾರಿನೊಳಗೆ ಇರಿಸಿ ಅವರು ಹೋಗಿದ್ದರು. ವಾಪಸ್ ಬಂದು ನೋಡಿದಾಗ ಅಲ್ಲಿದ್ದ ಚೀಲ ನಾಪತ್ತೆಯಾಗಿತ್ತು. ಅದನ್ನು ಹುಡುಕುತ್ತಿರುವಾಗ ಪಾರ್ಕಿಂಗ್ ಸ್ಥಳದ ಇನ್ನೊಂದು ತುದಿಯಲ್ಲಿ ಕಳ್ಳರು ಹೆದರಿ ಪರಾರಿಯಾಗುತ್ತಿರುವುದನ್ನು ನೋಡಿದರು.

ಅವರಿಗೆ ಕಳ್ಳರು ಕಾರಿನಲ್ಲಿದ್ದ ತಮ್ಮ ಬ್ಯಾಗನ್ನು ಕದ್ದಿರುವುದು ಅರಿವಿಗೆ ಬಂತು. ಈ ಬ್ಯಾಗನ್ನು ಕದ್ದಿದ್ದ ಕಳ್ಳರಿಗೆ ಅದರಲ್ಲಿ ಹಣ ಅಥವಾ ಆಭರಣಗಳ ಬದಲಿಗೆ ನಾಲ್ಕು ಹೆಬ್ಬಾವುಗಳು ಮತ್ತು ಕೆಲವು ಹಲ್ಲಿಗಳಿದ್ದುದ್ದು ಕಂಡು ಬಂದು ಹೌಹಾರಿ ಬ್ಯಾಗ್ ಅನ್ನು ಅಲ್ಲೇ ಎಸೆದು ಪರಾರಿಯಾದರು.

ನಂತರ ಎರಡು ಹಾವುಗಳನ್ನು ಹತ್ತಿರದ ಸ್ಥಳದಲ್ಲಿ ಬ್ರಿಯಾನ್ ಪತ್ತೆ ಮಾಡಿದರು. ಉರುಳಿದ ಸರೀಸೃಪಗಳ ಬಗ್ಗೆ ಮಾಹಿತಿ ಲಭಿಸಿಲ್ಲ. ಈ ಕುರಿತು ಸಾರ್ವಜನಿಕರಿಗೆ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿರುವ ಬ್ರಿಯಾನ್ ಹೆಬ್ಬಾವುಗಳನ್ನು ಕಂಡು ಬಂದಲ್ಲಿ ಅವುಗಳನ್ನು ಕೊಲ್ಲಬೇಡಿ. ನನಗೆ ತಿಳಿಸಿ ಎಂದು ಕೋರಿದ್ದಾರೆ.

Facebook Comments

Sri Raghav

Admin