“ಸಿದ್ದರಾಮಯ್ಯ ಅವರ ವಿರುದ್ಧ ಬೇಡ, ಮೊದಲು ನನ್ನ ವಿರುದ್ಧ ಗೆಲ್ಲು” : ಶ್ರೀರಾಮುಲುಗೆ ಓಪನ್ ಚಾಲೆಂಜ್

ಈ ಸುದ್ದಿಯನ್ನು ಶೇರ್ ಮಾಡಿ

ಚಿತ್ರದುರ್ಗ, ನ.22-ಮೊಳಕಾಲ್ಮೂರು ಕ್ಷೇತ್ರದ ಮಾಜಿ ಶಾಸಕ ಎಸ್. ತಿಪ್ಪೇಸ್ವಾಮಿ ಅವರು ಸಚಿವ ಬಿ.ಶ್ರೀರಾಮುಲು ಅವರಿಗೆ ಓಪನ್ ಚಾಲೆಂಜ್ ಮಾಡಿದ್ದಾರೆ.  ಶ್ರೀರಾಮುಲು ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಬೇಡ ಮೊದಲು ನನ್ನ ವಿರುದ್ಧ ಗೆಲುವು ಸಾಧಿಸಲಿ ಎಂದು ಚಾಲೆಂಜ ಮಾಡಿದ್ದು, ಸಿದ್ದು, ರಾಮುಲು ಮಾತಿನ ಸಮರಕ್ಕೆ ಹೊಸ ತಿರುವು ಸಿಕ್ಕಿದೆ.

ರಾಜಕೀಯವಾಗಿ ಮೋಸ ಮಾಡಿದ್ದಾರೆ ಎಂಬ ಕಾರಣಕ್ಕೆ ಕಳೆದ ಚುನಾವಣೆಯಲ್ಲಿ ತಿಪ್ಪೇಸ್ವಾಮಿ, ಸಚಿವ ರಾಮುಲು ವಿರುದ್ಧ ಸಿಡಿದೆದ್ದಿದ್ದ್ದರು. ಈ ಕಾರಣಕ್ಕೆ ಮೊಳಕಾಲ್ಮೂರು ಕ್ಷೇತ್ರ ರಾಜ್ಯದ ಗಮನ ಸೆಳೆದಿತ್ತು.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಶಾಸಕ ತಿಪ್ಪೇಸ್ವಾಮಿ , ಉಪಚುನಾವಣೆ ವೇಳೆ ಸಚಿವ ಬಿ.ಶ್ರೀರಾಮುಲು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸವಾಲು ಹಾಕಿದ್ದಾರೆ. ರಾಜೀನಾಮೆ ನೀಡಿ ಚುನಾವಣೆ ಸ್ಪರ್ಧಿಸುವಂತೆ ಆಹ್ವಾನ ನೀಡಿದ್ದಾರೆ. ಆದರೆ, ಸಿದ್ದರಾಮಯ್ಯ ಮೇರು ಪರ್ವತ. ಅವರ ವಿರುದ್ಧ ಬೇಡ. ರಾಜೀನಾಮೆ ಕೊಟ್ಟು ಮೊಳಕಾಲ್ಮೂರಿಗೆ ಬರುವಂತೆ ಶ್ರೀರಾಮುಲು ಅವರಿಗೆ ಸವಾಲು ಹಾಕಿದರು.

ಕಳೆದ ವಿಧಾನಸಭೆ ಚುನಾವಣೆ ವೇಳೆ ಶ್ರೀರಾಮುಲು ನನಗೆ ಟಿಕೆಟ್ ಕೊಡಿಸುವುದಾಗಿ ಹೇಳಿ ದೇವರ ಮೇಲೆ ಆಣೆ ಮಾಡಿದ್ದರು. ಕೊನೆಗೆ ಮೋಸ ಮಾಡಿದರು. ನಂತರ ಸಿಎಂ ಆಗುತ್ತೀನಿ, ಡಿಸಿಎಂ ಆಗುತ್ತೀನಿ ಅಂತ ಹೇಳಿಕೊಂಡು ಸುಳ್ಳು ಪ್ರಚಾರ ನಡೆಸಿ ಗೆದ್ದರು ಎಂದು ಆಪಾದಿಸಿದರು. ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಚಂದ್ರಣ್ಣ, ಚನ್ನಪ್ಪ ನೇರಲಗುಂಟೆ, ಚಿಕ್ಕೇಶ ಸುದ್ದಿಗೋಷ್ಠಿಯಲ್ಲಿದ್ದರು.

Facebook Comments