BIG NEWS : ಬಾಂಬ್ ಬೆದರಿಕೆ ಪತ್ರ ಬರೆದಿದ್ದ ಇಬ್ಬರು ಶಂಕಿತರು ತುಮಕೂರಿನಲ್ಲಿ ವಶಕ್ಕೆ..!

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಅ.20- ಸಂಜನಾ , ರಾಗಿಣಿ ಅವರಿಗೆ ಜಾಮೀನು ನೀಡದಿದ್ದರೆ ನ್ಯಾಯಾಧೀಶರ ಕಾರು ಸ್ಫೋಟಿಸುವುದಾಗಿ ಬೆದರಿಕೆ ಪತ್ರ ಬರೆದಿದ್ದ ಆರೋಪಿಗಳ ಬೆನ್ನು ಬಿದ್ದಿರುವ ಸಿಸಿಬಿ ಪೊಲೀಸರು ತುಮಕೂರಿನಲ್ಲಿ ಇಬ್ಬರು ಶಂಕಿತರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಹೀರೋಯಿನ್‍ಗಳಿಗೆ ಜಾಮೀನು ನೀಡಬೇಕು. ಡಿಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವವರು ಅಮಾಯಕರು. ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬಾರದು. ಇಲ್ಲದಿದ್ದರೆ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್, ಸಿಸಿಬಿ ಮುಖ್ಯಸ್ಥ ಸಂದೀಪ್‍ಪಾಟೀಲ್, ನ್ಯಾಯಾಧೀಶ ಸೀನಪ್ಪ ಅವರ ಕಾರು ಸ್ಫೋಟಿಸಿ ಹತ್ಯೆ ಮಾಡುವುದಾಗಿ ಸಿಟಿ ಸಿವಿಲ್ ಕೋರ್ಟ್‍ಗೆ ಜೀವಂತ ಡಿಟೋನೇಟರ್‍ನೊಂದಿಗೆ ಆರೋಪಿಗಳು ಪತ್ರ ರವಾನಿಸಿದ್ದರು.

ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಸಿಸಿಬಿ ಪೊಲೀಸರು ಆರೋಪಿಗಳ ಬಂಧನಕ್ಕೆ ನಾಲ್ಕು ವಿಶೇಷ ತಂಡಗಳನ್ನು ರಚಿಸಿದ್ದರು. ಪತ್ರ ರವಾನೆಯಾಗಿದ್ದ ತುಮಕೂರಿನತ್ತ ತೆರಳಿದ ಒಂದು ತಂಡ ರಾತ್ರಿ 12 ಗಂಟೆ ಸಮಯದಲ್ಲಿ ಚೇಳೂರಿನಲ್ಲಿ ಇಬ್ಬರು ಶಂಕಿತರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿತ್ತು ಸಿ ಹರಿವೇಸಂದ್ರ ಗ್ರಾಮದ ರಮೇಶ್ ಹಾಗೂ ಚನ್ನಬಸವ ಅವರನ್ನು ವಶಕ್ಕೆ ಪಡೆದಿರುವ ಪೊಲೀಸರು ರಾತ್ರಿಯಿಡೀ ತೀವ್ರ ವಿಚಾರಣೆ ನಡೆಸಿದರು.

ಅವರು ನೀಡಿದ ಮಾಹಿತಿ ಮೇರೆಗೆ ತಿಪಟೂರಿನ ಲಿಂಗದಹಳ್ಳಿ ನಿವಾಸಿ ರಾಜಶೇಖರ್ ಮತ್ತು ಹಾಗಲವಾಡಿಯ ವೇದಾಂತ್ ಎಂಬುವರನ್ನು ತಡರಾತ್ರಿ ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಲಾಯಿತು. ರಾಜಶೇಖರ, ವೇದಾಂತ್ ಮತ್ತು ರಮೇಶನ ನಡುವೆ ಆಸ್ತಿ ವಿವಾದವಿತ್ತು. ರಮೇಶನ ಕುಟುಂಬದವರು ಅವಿದ್ಯಾವಂತರಾಗಿದ್ದಾರೆ.

ಇಂತಹ ವ್ಯಕ್ತಿಗಳು ಡಿಜೆಹಳ್ಳಿ ಗಲಭೆ ಪ್ರಕರಣ ಹಾಗೂ ಸಂಜನಾ, ರಾಗಿಣಿಯವರಿಗೆ ಜಾಮೀನು ನೀಡದಿದ್ದರೆ ಸ್ಫೋಟಿಸುವುದಾಗಿ ಬೆದರಿಕೆಯೊಡ್ಡುವ ಐಡಿಯಾ ಹೊಳೆದಿದ್ದಾದರೂ ಹೇಗೆ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಒಬ್ಬರನ್ನು ಜೈಲಿಗೆ ಕಳುಹಿಸುವ ಹುನ್ನಾರದಿಂದ ರಾಜಶೇಖರ ಇಲ್ಲವೆ ವೇದಾಂತ್ ಈ ರೀತಿಯ ಕುತಂತ್ರ ರೂಪಿಸಿರುವ ಅನುಮಾನವಿದೆ.

ಅದರಲ್ಲೂ ಪತ್ರದ ಜತೆಗೆ ಜೀವಂತ ಡಿಟೋನೇಟರ್ ರವಾನಿಸಿರುವುದು ಸ್ಥಳೀಯರನ್ನಲ್ಲದೆ ಪೊಲೀಸರಲ್ಲು ಅಚ್ಚರಿ ಮೂಡಿಸಿದೆ. ಹೀಗಾಗಿ ರಾಜಶೇಖರ ಮತ್ತು ವೇದಾಂತ್‍ನನ್ನು ಸಿಸಿಬಿ ಪೊಲೀಸರು ಬೆಂಗಳೂರಿನ ಹಲಸೂರು ಗೇಟ್ ಪೊಲೀಸ್ ಠಾಣೆಗೆ ಕರೆ ತಂದಿದ್ದಾರೆ. ರಮೇಶ್ ಮತ್ತು ಚನ್ನಬಸವ ಅವರನ್ನು ಹಲಸೂರು ಗೇಟ್ ಪೊಲೀಸ್ ಠಾಣೆಗೆ ಬರುವಂತೆ ಪೊಲೀಸರು ಸೂಚಿಸಿದ್ದಾರೆ ಎನ್ನಲಾಗಿದೆ.

ಗುಬ್ಬಿ , ಚೇಳೂರು ಪೊಲೀಸರ ಸಹಕಾರದೊಂದಿಗೆ ಸಿಸಿಬಿ ಪೊಲೀಸರು ಈಗಾಗಲೇ ಹಲವಾರು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡು ವಿಚಾರಣೆಯನ್ನು ತೀವ್ರಗೊಳಿಸಿದ್ದಾರೆ.

Facebook Comments