ಜ್ಯುವೆಲರಿ ಅಂಗಡಿಯಲ್ಲಿ ಸುಲಿಗೆ ಮಾಡಿದ್ದ ಮೂವರ ಸೆರೆ, 90 ಲಕ್ಷ ಮೌಲ್ಯದ ಆಭರಣ ವಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.26- ಜ್ಯುವೆಲರಿ ಅಂಗಡಿ ಮಾಲೀಕನ ಸುಲಿಗೆ ಮಾಡಿ ಆಭರಣ ದೋಚಿದ್ದ ಮೂವರು ಆರೋಪಿಗಳನ್ನು ಉತ್ತರ ವಿಭಾಗದ ಜಾಲಹಳ್ಳಿ ಠಾಣೆ ಪೊಲೀಸರು ಬಂಸಿ 90 ಲಕ್ಷ ರೂ. ಮೌಲ್ಯದ 1 ಕೆಜಿ 757 ಗ್ರಾಂ ಚಿನ್ನಾಭರಣ ಮತ್ತು 3.5 ಲಕ್ಷ ನಗದು, ಎರಡು ಬೈಕ್, ಒಂದು ಏರ್‍ಗನ್ ವಶಪಡಿಸಿಕೊಂಡಿದ್ದಾರೆ.

ರಾಜಸ್ತಾನ ಮೂಲದ ಗೋಪಾರಾಮ್ (28), ಜಿತೇಂದರ್ ಮಾಳಿ (31), ವೀರ್‍ಮಾ ರಾವ್ (32) ಬಂತ ಆರೋಪಿಗಳು. ಜಾಲಹಳ್ಳಿ ವ್ಯಾಪ್ತಿಯ ಕೆಂಚುರಾಮಯ್ಯ ಬಿಲ್ಡಿಂಗ್, ಎಂಇಎಸ್ ರಸ್ತೆಯಲ್ಲಿರುವ ವಿನೋದ್ ಬ್ಯಾಂಕರ್ಸ್ ಅಂಡ್ ಜ್ಯುವೆಲರ್ಸ್ ಎಂಬ ಸಂಬಂಕರ ಅಂಗಡಿಯನ್ನು ರಾಹುಲ್ ಸಂಜಯ್ ಬಯ್ ಷಾ ಎಂಬುವವರು ನೋಡಿಕೊಳ್ಳುತ್ತಿದ್ದರು.

ಆ.20ರಂದು ಇಬ್ಬರು ಬಂದು ಎರಡೂವರೆ ಗ್ರಾಂ ತೂಕದ ಚಿನ್ನದ ಸರವನ್ನು ಸಿದ್ಧಪಡಿಸಲು ಒಂದು ಸಾವಿರ ರೂ. ಮುಂಗಡ ಹಣ ಕೊಟ್ಟು ಹೋಗಿದ್ದರು. ಸೆ.20ರಂದು ಬೆಳಗ್ಗೆ 9.30ರ ಸುಮಾರಿಗೆ ಅಂಗಡಿಗೆ ಬಂದ ಇವರಿಬ್ಬರು ಸಿದ್ಧಪಡಿಸಲು ಕೊಟ್ಟಿದ್ದ ಚಿನ್ನದ ಸರ ಕೊಡುವಂತೆ ಕೇಳಿದ್ದಾರೆ.

ಅವರಿಗೆ ಚಿನ್ನದ ಸರ ತೋರಿಸಿದಾಗ ಅದನ್ನು ನೋಡಿ ತಮಗೆ ಮತ್ತೊಂದು ಚಿನ್ನದ ಉಂಗುರ ಬೇಕು ಎಂದು ಕೇಳಿದ್ದಾರೆ. ಅಂಗಡಿಯಲ್ಲಿದ್ದ ರಾಹುಲ್ ಸಂಜಯ್ ಬೈಷಾ ಅವರು ಉಂಗುರ ತರಲು ಸೇಫ್ ಲಾಕರ್ ಕೊಠಡಿಗೆ ಹೋಗುತ್ತಿದ್ದಂತೆ ಇವರನ್ನು ಹಿಂಬಾಲಿಸಿಕೊಂಡು ಹೋಗಿ ಕೈಗಳಿಂದ ಹೊಡೆದು ಏರ್‍ಗನ್ ತೋರಿಸಿ ಬೆದರಿಸಿ ಸೆಲ್ಲೋಟೇಪ್‍ನಿಂದ ಕೈಗಳು ಹಾಗೂ ಬಾಯನ್ನು ಸುತ್ತಿ ಕೆಳಗೆ ತಳ್ಳಿ ಸೇಫ್ ಲಾಕರ್‍ನಲ್ಲಿಟ್ಟಿದ್ದ ಸುಮಾರು 3 ಕೆಜಿ 455 ಗ್ರಾಂ ತೂಕದ ಚಿನ್ನಾಭರಣ, 715 ಗ್ರಾಂ ತೂಕದ ಬೆಳ್ಳಿ ವಸ್ತುಗಳು ಮತ್ತು 3.96 ಲಕ್ಷ ನಗದನ್ನು ಬ್ಯಾಗ್‍ಗೆ ತುಂಬಿಕೊಂಡು ನೀಲಿ ಬಣ್ಣದ ಬೈಕ್‍ನಲ್ಲಿ ಪರಾರಿಯಾಗಿದ್ದರು.

ಈ ಬಗ್ಗೆ ಜಾಲಹಳ್ಳಿ ಠಾಣೆ ಪೊಲೀಸರು ಸುಲಿಗೆ ಮತ್ತು ಶಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು.ಈ ಪ್ರಕರಣದ ತನಿಖೆ ವೇಳೆ ಕೃತ್ಯ ನಡೆದ ಸ್ಥಳದಲ್ಲಿದ್ದ ದೊರೆತ ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆದು ಪರಿಶೀಲಿಸಿ, ಆರೋಪಿಗಳ ಫೋಟೋಗಳನ್ನು ಮಾಡಿಸಿ, ಹಳೆ ಆರೋಪಿಗಳ ಫೋಟೋಗೆ ಹೋಲಿಕೆ ಮಾಡಿದಾಗ ಎರಡು-ಮೂರು ಗ್ಯಾಂಗ್‍ಗಳ ಹಳೆ ಆರೋಪಿಗಳ ಮೇಲೆ ಅನುಮಾನ ಬಂದಿದೆ.

ಕೃತ್ಯ ನಡೆದ ಸ್ಥಳದಲ್ಲಿ ದೊರೆತ ಬೆರಳು ಮುದ್ರೆ ಪಡೆದು, ಬೆರಳು ಮುದ್ರಾ ಘಟಕಕ್ಕೆ ಕಳುಹಿಸಿ ಹಳೆಯ ಆರೋಪಿಗಳ ಬೆರಳು ಮುದ್ರೆಗೆ ಹೋಲಿಕೆ ಮಾಡಿದಾಗ ಸಿಸಿಟಿವಿ ದೃಶ್ಯಾವಳಿಯಲ್ಲಿನ ಫೋಟೊಗಳಲ್ಲಿದ್ದ ವ್ಯಕ್ತಿಗಳು ಮತ್ತು ಬೆರಳು ಮುದ್ರೆ ತಾಳೆಯಾಗಿದೆ.

ಹೆಚ್ಚಿನ ತನಿಖೆ ಕೈಗೊಂಡಾಗ 2016ನೆ ಸಾಲಿನಲ್ಲಿ ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಜ್ಯೂವೆಲರಿ ಶಾಪ್ ರಾಬರಿ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ ಗೋಪಾರಾಮ್ ಗೋಪಾಲ್ ಎಂದು ಪತ್ತೆಯಾಗಿರುತ್ತದೆ.

ಈ ಪ್ರಕರಣದಲ್ಲಿ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಆರೋಪಿ ಗೋಪಾರಾಮ್ 2004ನೆ ಸಾಲಿನಲ್ಲಿ ಬೆಂಗಳೂರಿಗೆ ಬಂದು ಯಲಹಂಕದಲ್ಲಿನ ಒಂದು ಜ್ಯೂವೆಲರಿ ಶಾಪ್‍ನಲ್ಲಿ ಕೆಲವು ವರ್ಷ ಕೆಲಸ ಮಾಡಿ, ನಂತರ 2014ರಲ್ಲಿ ಬಾಗಲೂರಿನಲ್ಲಿರುವ ರಾಜಲಕ್ಷ್ಮಿ ಜ್ಯುವೆಲ್ಲರಿ ಅಂಗಡಿಯಲ್ಲಿ ಕೆಲಸಕ್ಕೆ ಸೇರಿ ಆ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿರುವಾಗ, 2016ನೆ ಸಾಲಿನಲ್ಲಿ ಸದರಿ ಜ್ಯೂವೆಲರಿ ಅಂಗಡಿಯಲ್ಲಿ ದರೋಡೆ ಮಾಡಿ ಜಾಮೀನಿನ ಮೇಲೆ ಹೊರಬಂದು ವಾಪಸ್ ರಾಜಸ್ಥಾನಕ್ಕೆ ಹೋಗಿದ್ದನು.

ಪುನಃ 2017ನೆ ಸಾಲಿನಲ್ಲಿ ಬೆಂಗಳೂರಿಗೆ ಬಂದು ಸ್ವಿಗ್ಗಿಯಲ್ಲಿ ಫುಡ್ ಡಿಲಿವರಿ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದ ಸಮಯದಲ್ಲಿ ರಾಜಸ್ಥಾನದವರೇ ಆದ ಜಿತೇಂದರ್ ಮಾಳಿ ಜೀತು ಮತ್ತು ವೀರ್‍ಮಾ ರಾಮ್ ಮಾಂಗಿಲಾಲ್ ವೀರ್ ಅವರುಗಳ ಪರಿಚಯವಾಗಿದೆ. ಅವರುಗಳ ಸಹಾಯದಿಂದ ಈ ದರೋಡೆ ಕೃತ್ಯವೆಸಗಿರುವುದಾಗಿ ಆರೋಪಿ ಗೋಪಾ ರಾಮ್ ತಿಳಿಸಿದ್ದಾನೆ. ಈತನ ಹೇಳಿಕೆ ಆಧಾರದ ಮೇಲೆ ಇನ್ನಿಬ್ಬರನ್ನು ಬಂಸಲಾಗಿದೆ.

ಆರೋಪಿ ಗೋಪಾರಾಮ್ ಸ್ವಿಗ್ಗಿ ಡೆಲಿವರಿ ಕೊಡುವ ಸಮಯದಲ್ಲಿ ಹಾಗೂ ಈ ಜ್ಯೂವೆಲರಿ ಅಂಗಡಿಯಲ್ಲಿ ಬೆಳಗಿನ ಸಮಯದಲ್ಲಿ ಒಬ್ಬರೇ ಕೆಲಸ ಮಾಡಿಕೊಂಡಿರುವುದನ್ನು ಹಲವು ದಿನಗಳಿಂದ ಗಮನಿಸಿ, ಚಿನ್ನದ ಸರವನ್ನು ಸಿದ್ಧಪಡಿಸಿಕೊಡುವ ನೆಪದಲ್ಲಿ ಅಂಗಡಿಗೆ ಬಂದು ಅಂಗಡಿಯ ಭದ್ರತೆಯ ಬಗ್ಗೆ ಮುಂಚಿತವಾಗಿ ನೋಡಿಕೊಂಡು ಹೋಗಿ ತನ್ನ ಸ್ನೇಹಿತರೊಂದಿಗೆ ಬಂದು ಈ ಕೃತ್ಯವೆಸಗಿರುವುದು ತನಿಖೆಯಿಂದ ತಿಳಿದು ಬಂದಿದೆ.

Facebook Comments

Sri Raghav

Admin