ಟೆಕ್ಕಿಗಳಿಗೆ ವಂಚಿಸಿದ್ದ ಮೂವರ ಬಂಧನ, ದುಬಾರಿ ಬೆಲೆಯ 3 ಕಾರು ವಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.22- ಹೆಚ್ಚಿನ ಲಾಭಾಂಶ ತೋರಿಸಿ ಪ್ರತಿಷ್ಠಿತ ಸಾಫ್ಟ್‍ವೇರ್ ಕಂಪನಿಗಳ ಇಂಜಿನಿಯರ್‍ಗಳಿಗೆ ವಂಚಿಸಿದ್ದ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿ ದುಬಾರಿ ಬೆಲೆಯ ಮೂರು ಕಾರು ಮತ್ತು 8 ಕೋಟಿ ಬೆಲೆ ಬಾಳುವ ಆಸ್ತಿಗಳ ದಾಖಲಾತಿಯನ್ನು ವಶಪಡಿಸಿಕೊಂಡಿದ್ದಾರೆ.  ಕೊತ್ತನೂರಿನ ಸ್ಟೀಫನ್ ಜೋನ್ಸ್ (35), ಕಲ್ಕಕೆರೆ ರಾಘವೇಂದ್ರ(34) ಮತ್ತು ವಿದ್ಯಾರಣ್ಯಪುರದ ಮಂಜುನಾಥ್(43) ಬಂಧಿತರು.

ಆರೋಪಿ ಸ್ಟೀಫನ್ ಜೋನ್ಸ್ ತನ್ನ ಸಹಚರ ರಾಘವೇಂದ್ರನ ಜೊತೆ ಸೇರಿ ಪ್ರತಿಷ್ಠಿತ ಸಾಫ್ಟ್‍ವೇರ್ ಕಂಪನಿಗಳಲ್ಲಿ ಕೆಲಸ ಮಾಡುವ ಎಂಜಿನಿಯರ್‍ಗಳಿಗೆ ಷೇರ್ ಟ್ರೇಡಿಂಗ್ ವ್ಯವಹಾರದಲ್ಲಿ ಹಣ ತೊಡಗಿಸಿದರೆ ಹೆಚ್ಚಿನ ಲಾಭಾಂಶ ಕೊಡುವುದಾಗಿ ಆಮಿಷವೊಡ್ಡಿ ಸ್ನೇಹಿತ ಮಂಜುನಾಥ್ ಎಂಬ ಬ್ರೋಕರ್ ಕಡೆಯಿಂದ ಮನವೊಲಿಸಿದ್ದರು.

ವಿವಿಧ ಖಾಸಗಿ ಬ್ಯಾಂಕ್‍ಗಳಾದ ಐಸಿಐಸಿಐ, ಕೋಟಕ್ ಮಹೀಂದ್ರ, ಎಚ್‍ಡಿಎಫ್‍ಸಿ, ಯೆಸ್ ಬ್ಯಾಂಕ್, ಸಿಟಿ ಬ್ಯಾಂಕ್ ಮತ್ತಿತರ ಬ್ಯಾಂಕ್‍ಗಳಿಂದ ಲೋನ್ ಕೊಡಿಸಿ ಎಂಜಿನಿಯರ್‍ಗಳಿಂದ ಕೋಟ್ಯಂತರ ಹಣವನ್ನು ತಮ್ಮ ಬ್ಯಾಂಕ್ ಅಕೌಂಟ್‍ಗಳಿಗೆ ಹಾಕಿಸಿಕೊಂಡು ನಂತರ ಕಂಪನಿ ಮುಚ್ಚಿ ತಲೆಮರೆಸಿಕೊಂಡಿದ್ದರು.  ಹಣ ಕೊಟ್ಟು ಮೋಸ ಹೋಗಿದ್ದ ಸಾಫ್ಟ್‍ವೇರ್ ಇಂಜಿನಿಯರ್ ಸತೀಶ್ ಎಂಬುವರು ನೀಡಿದ ದೂರಿನನ್ವಯ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸಿಸಿಬಿ ಪೊಲೀಸರು ತನಿಖೆ ನಡೆಸಿ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.  ಬಂಧಿತರಿಂದ ಮೂರು ದುಬಾರಿ ಬೆಲೆಬಾಳುವ ಆಡಿ, ಎನ್ ಡಬ್ಲ್ಯು ಮತ್ತು ಡಸ್ಟರ್ ಕಾರುಗಳು ಮತ್ತು ಆರೋಪಿ ಸ್ಟೀಫನ್ ಜೋನ್ಸ್ ಮಾನ್ಯತಾಟೆಕ್ ಪಾರ್ಕ್‍ನಲ್ಲಿ ಖರೀದಿಸಿದ್ದ ಸುಮಾರು 8 ಕೋಟಿ ಬೆಲೆ ಬಾಳುವ ಮನೆಯ ದಾಖಲಾತಿಗಳನ್ನು ವಶಪಡಿಸಿಕೊಂಡಿದ್ದಾರೆ.

ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮಾರ್ಗದರ್ಶನದಲ್ಲಿ ಸಿಸಿಬಿ ಸಂಘಟಿತ ಅಪರಾಧ ದಳದ ಅಧಿಕಾರಿ ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

#4 ಕೆಜಿ ಗಾಂಜಾ ವಶ:ಇಬ್ಬರ ಸೆರೆ
ಬೆಂಗಳೂರು,ಜ.22- ಶಿವಾಜಿ ನಗರದ ವ್ಯಕ್ತಿಯೊಬ್ಬರಿಂದ ಗಾಂಜಾ ಖರೀದಿಸಿ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಉತ್ತರವಿಭಾಗದ ಆರ್‍ಟಿನಗರ ಠಾಣೆ ಪೊಲೀಸರು ಬಂಧಿಸಿ 4 ಕೆಜಿ ಗಾಂಜಾ ಮತ್ತು 250 ರೂ. ಹಣ ವಶಪಡಿಸಿಕೊಂಡಿದ್ದಾರೆ.  ಆರ್‍ಟಿನಗರದ ಇಮ್ರಾನ್ ಪಾಷ(26) ಮತ್ತ ಕೆಜಿಹಳ್ಳಿಯ ಸಯ್ಯದ್ ಇಫ್ರಾನ್(28) ಬಂಧಿತ ಆರೋಪಿಗಳು. ಈ ಪ್ರಕರಣದಲ್ಲಿ ಮೂರು ಜನ ಪ್ರಮುಖ ಆರೋಪಿಗಳು ತಲೆಮರೆಸಿಕೊಂಡಿದ್ದು, ಇವರ ಪತ್ತೆ ಕಾರ್ಯ ಪ್ರಗತಿಯಲ್ಲಿದೆ.

ಜ.18ರಂದು ಮಧ್ಯಾಹ್ನ 3.30ರ ಸುಮಾರಿನಲ್ಲಿ ಸಬ್‍ಇನ್‍ಸ್ಪೆಕ್ಟರ್ ಮಾರುತಿ ಅವರಿಗೆ, ಆರ್‍ಟಿನಗರ ವ್ಯಾಪ್ತಿಯ ಈರುಳ್ಳಿ ಮೈದಾನದಲ್ಲಿ ಇಬ್ಬರು ಗಾಂಜಾ ಮಾರಾಟ ಮಾಡುತ್ತಿ ದ್ದಾರೆಂಬ ಮಾಹಿತಿ ಬಂದಿದೆ. ತಕ್ಷಣ ಸ್ಥಳಕ್ಕೆ ಹೋಗಿ ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿ ಪರಿಶೀಲಿಸಿದಾಗ ಅವರ ಬಳಿ ಇದ್ದ ಬ್ಯಾಗ್‍ನಲ್ಲಿ ಗಾಂಜಾ ಇರುವುದು ಪತ್ತೆಯಾಗಿದೆ. ಆರೋಪಿಗಳಿಂದ 4 ಕೆಜಿ ಗಾಂಜಾ ಮತ್ತು ಹಣ ವಶಪಡಿಸಿಕೊಂಡಿದ್ದಾರೆ.

ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಶಿವಾಜಿನಗರದ ವ್ಯಕ್ತಿಯೊಬ್ಬರಿಂದ ಗಾಂಜಾ ಖರೀದಿಸಿಕೊಂಡು ಬಂದು ಮಾರಾಟ ಮಾಡುತ್ತಿದ್ದುದಾಗಿ ಬಾಯ್ಬಿಟ್ಟಿದ್ದಾರೆ. ಈ ಪ್ರಕರಣದಲ್ಲಿ ತಲೆಮರೆಸಿ ಕೊಂಡಿರುವ ಮೂವರ ಬಂಧನಕ್ಕಾಗಿ ಪತ್ತೆ ಕಾರ್ಯ ಪ್ರಗತಿಯಲ್ಲಿದೆ.

Facebook Comments