ಹಗಲು-ರಾತ್ರಿ ಕನ್ನ, ಕಳವು-ಸುಲಿಗೆ : ಮೂವರ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 8- ಹಗಲು ಮತ್ತು ರಾತ್ರಿ ವೇಳೆ ಮನೆಗಳ್ಳತನ ಹಾಗೂ ಸುಲಿಗೆ ಮಾಡುತ್ತಿದ್ದ ಮೂವರನ್ನು ಉತ್ತರ ವಿಭಾಗದ ನಂದಿನಿ ಲೇಔಟ್ ಠಾಣೆ ಪೊಲೀಸರು ಬಂಧಿಸಿ 4.39 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡು 9 ಪ್ರಕರಣಗಳನ್ನು ಪತ್ತೆಹಚ್ಚಿದ್ದಾರೆ. ಲಗ್ಗೆರೆಯ ಅರುಣ್‍ಕುಮಾರ್ (23), ರಮೇಶ್ (28), ಕಮಲಾನಗರದ ಚೇತನ್ (22) ಬಂಧಿತರು.

ಏ.20ರಂದು ನಂದಿನಿ ಲೇಔಟ್ ವ್ಯಾಪ್ತಿಯ 10ನೆ ಕ್ರಾಸ್, 5ನೆ ಮುಖ್ಯರಸ್ತೆ, ಚೌಡೇಶ್ವರಿ ನಗರದ ನಿವಾಸಿ ಮಹೇಶ್ ಎಂಬುವವರು ಮನೆಗೆ ಬೀಗ ಹಾಕಿಕೊಂಡು ಕುಟುಂಬ ಸಮೇತ ಮಂಡ್ಯಕ್ಕೆ ಹೋಗಿದ್ದರು.  ಈ ಸಂದರ್ಭದಲ್ಲಿ ಕಳ್ಳರು ಇವರ ಮನೆಯ ಡೋರ್‍ಲಾಕ್ ಒಡೆದು ಚಿನ್ನಾಭರಣ, ಬೆಳ್ಳಿ ವಸ್ತುಗಳು ಸೇರಿದಂತೆ ಇತರೆ ಸಾಮಾನುಗಳನ್ನು ಕಳ್ಳತನ ಮಾಡಿದ್ದರು.

ಏ.23ರಂದು ಮನೆಗೆ ಮಹೇಶ್ ಕುಟುಂಬ ಬಂದು ನೋಡಿದಾಗ ಕಳ್ಳತನ ನಡೆದಿರುವುದು ಕಂಡು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಪೊಲೀಸರು ಮೂವರು ಕಳ್ಳರನ್ನು ಬಂಧಿಸಿ 4.39 ಲಕ್ಷ ರೂ. ಬೆಲೆಯ 108 ಗ್ರಾಂ ತೂಕದ ಚಿನ್ನಾಭರಣ, ನಾಲ್ಕು ಎಲ್‍ಇಡಿ ಟಿವಿ ಮತ್ತು ಕೃತ್ಯಕ್ಕೆ ಬಳಸಿದ್ದ ಬೈಕ್ ವಶಪಡಿಸಿಕೊಂಡಿದ್ದಾರೆ.

ಆರೋಪಿಗಳ ಬಂಧನದಿಂದ ನಂದಿನಿ ಲೇಔಟ್ ಠಾಣೆಯ ನಾಲ್ಕು ಮನೆಗಳ್ಳತನ ಪ್ರಕರಣ, ಕಾಮಾಕ್ಷಿಪಾಳ್ಯದ ಒಂದು, ನಂದಿನಿ ಲೇಔಟ್‍ನ ಸುಲಿಗೆ, ಎರಡು ಮನೆಕಳವು, ಒಂದು ದ್ವಿಚಕ್ರ ವಾಹನ ಕಳವು ಪ್ರಕರಣಗಳು ಪತ್ತೆಯಾಗಿದೆ. ನಂದಿನಿ ಲೇಔಟ್ ಠಾಣೆ ಇನ್ಸ್‍ಪೆಕ್ಟರ್ ಲೋಹಿತ್ ಅವರ ಸಿಬ್ಬಂದಿ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

Facebook Comments