ರಾಜ್ಯದಲ್ಲಿ ಇನ್ನೂ 3 ದಿನ ಮಳೆ ಸಾಧ್ಯತೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.13- ಕಳೆದ ಒಂದು ವಾರದಿಂದ ಎಡೆಬಿಡದೆ ಬೀಳುತ್ತಿರುವ ಮಳೆ ಇನ್ನೂ ಮೂರು ದಿನಗಳ ಕಾಲ ಮುಂದುವರೆಯುವ ಸಾಧ್ಯತೆಗಳಿವೆ.
ಬಂಗಾಳಕೊಲ್ಲಿ ಮತ್ತು ಅರಬ್ಬಿಸಮುದ್ರ ದಲ್ಲಿ ಉಂಟಾಗಿರುವ ಮೇಲ್ಮೈಸುಳಿಗಾಳಿಯ ಪರಿಣಾಮ ದಿಂದ ರಾಜ್ಯದಲ್ಲಿ ಭಾಗಶಃ ಮೋಡಕವಿದ ವಾತಾವರಣ ವಿದ್ದು, ಸಂಜೆ ಅಥವಾ ರಾತ್ರಿ ವೇಳೆ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆಗಳಿವೆ.

ಕಳೆದೆರಡು ದಿನಗಳಿಂದಲೂ ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾಗುತ್ತಿದೆ. ಇದರಿಂದ ಹಲವು ಕಡೆಗಳಲ್ಲಿ , ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ತೊಂದರೆ ಉಂಟಾಗಿರುವುದು ವರದಿಯಾಗಿದೆ.

ನೈರುತ್ಯ ಮುಂಗಾರು ಮರಳುವಿಕೆ ಪ್ರಕ್ರಿಯೆ ಆರಂಭವಾಗಿದ್ದು, ಇನ್ನೆರಡು ದಿನಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ. ಮುಂಗಾರು ಮರಳುವಾಗ ಮತ್ತು ಈಶಾನ್ಯ ಹಿಂಗಾರು ಆರಂಭವಾಗುವ ಪರ್ವ ಕಾಲದಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾಗುವುದು ವಾಡಿಕೆ. ಅದೇ ರೀತಿ ಈಗಲೂ ಮಳೆ ಮುಂದುವರೆದಿದೆ.

ಅಕ್ಟೋಬರ್‍ನಲ್ಲಿ ವಾಡಿಕೆಗಿಂತ ಶೇ.50ರಷ್ಟು ಹೆಚ್ಚು ಮಳೆ ಈಗಾಗಲೇ ರಾಜ್ಯದಲ್ಲಿ ಬಿದ್ದಿದೆ. ಅಕ್ಟೋಬರ್ 16ರ ನಂತರ ಮಳೆ ಇಳಿಮುಖವಾಗಲಿದೆ ಎಂದು ಹವಮಾನ ತಜ್ಞ ಡಾ.ಜಿ.ಎಸ್.ಶ್ರೀನಿವಾಸ್‍ರೆಡ್ಡಿ ತಿಳಿಸಿದರು.

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಅದು ಚಂಡಮಾರುತವಾಗಿ ಪರಿವರ್ತನೆ ಯಾಗುತ್ತಿದೆ. ಆದರೂ ರಾಜ್ಯದ ಮೇಲೆ ಅದರ ನೇರ ಪರಿಣಾಮ ಉಂಟಾಗುವುದಿಲ್ಲ. ಚಂಡಮಾರುತವು ಒಡಿಶಾ ಕಡೆಗೆ ಚಲಿಸುವುದರಿಂದ ಕರ್ನಾಟಕದ ಮೇಲೆ ಹೆಚ್ಚಿನ ಪರಿಣಾಮ ಉಂಟಾಗುವುದಿಲ್ಲ. ಅ.16ರ ನಂತರ ಮತ್ತೆ ವಾತಾವರಣದಲ್ಲಿ ಬದಲಾವಣೆ ಉಂಟಾಗಿ ಹಿಂಗಾರು ಮಳೆ ಆರಂಭವಾಗಬೇಕಿದೆ ಎಂದು ಅವರು ಸ್ಪಷ್ಟಪಡಿಸಿದರು.

Facebook Comments