ರಾಯಚೂರಲ್ಲಿ ಮಳೆಯಿಂದ ಮನೆಯ ಚಾವಣಿ ಕುಸಿದು ಮೂವರು ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ರಾಯಚೂರು, ಜೂ.7-ಭಾರೀ ಮಳೆಯಿಂದ ಶಿಥಿಲಗೊಂಡಿದ್ದ ಮನೆಯ ಚಾವಣಿ ಕುಸಿದು ಐದು ತಿಂಗಳ ಹಸುಗೂಸು ಸೇರಿದಂತೆ ಮೂವರು ಸಾವನ್ನಪ್ಪಿರುವ ದಾರುಣ ಘಟನೆ ತಾಲೂಕಿನ ಕೊತ್ತದೊಡ್ಡಿ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಗೋವಿಂದಮ್ಮ (63), ಶಿವಾನಿ (3), ಮಲ್ಲಿಕಾರ್ಜುನ ಎಂಬ ಐದು ತಿಂಗಳ ಮಗು ಎಂದು ಗುರುತಿಸಲಾಗಿದೆ.

ಕಳೆದ ಎರಡು ದಿನಗಳಿಂದ ಜಿಲ್ಲಾದ್ಯಂತ ವ್ಯಾಪಕ ಮಳೆಯಾಗುತ್ತಿದ್ದು, ಹಲವೆಡೆ ಮರಗಳು, ವಿದ್ಯುತ್ ಕಂಬಗಳು ಉರುಳಿ ಬಿದ್ದಿದ್ದವು.  ಕಳೆದ ರಾತ್ರಿ ಕೊತ್ತದೊಡ್ಡಿ ಗ್ರಾಮದಲ್ಲಿ ಭಾರೀ ಮಳೆ ಸುರಿದಿದೆ. ಇಂದು ಮುಂಜಾನೆ ಮನೆಯ ಮೇಲ್ಚಾವಣಿ ಕುಸಿದು ಮನೆಯಲ್ಲಿ ಮಲಗಿದ್ದವರ ಮೇಲೆ ಬಿದ್ದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಘಟನೆಯಲ್ಲಿ ಇನ್ನಿಬ್ಬರು ಗಾಯಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಸ್ಥಳಕ್ಕೆ ತಾಲೂಕು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅವಶೇಷಗಳಿಂದ ಶವಗಳನ್ನು ಮೇಲೆತ್ತಿ ಮರಣೋತ್ತರ ಪರೀಕ್ಷೆಗೆ ತಾಲೂಕಿನ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. ಮೂವರ ದಾರುಣ ಸಾವಿನಿಂದ ಗ್ರಾಮದಲ್ಲಿ ಆಕ್ರಂಧನ ಮುಗಿಲುಮುಟ್ಟಿದೆ.

ಭಾರೀ ಮಳೆ ಹಿನ್ನೆಲೆಯಲ್ಲಿ ಹಳೆಯ ಮಾಳಿಗೆ ಮನೆಗಳು ಕುಸಿಯುತ್ತಿದ್ದು, ಅನಾಹುತಗಳು ಸಂಭವಿಸುತ್ತಿರುವ ಪರಿಣಾಮ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Facebook Comments