ಮಳೆ, ಸಿಡಿಲಿನಿಂದ ಮೃತಪಟ್ಟವರ ಕುಟುಂಬಕ್ಕೆ 4 ಲಕ್ಷದ ಜೊತೆ ಹೆಚ್ಚುವರಿ 1 ಲಕ್ಷ ಪರಿಹಾರ
ಬೆಂಗಳೂರು, ಜೂ.28- ಮಳೆ, ಸಿಡಿಲು ಹಾಗೂ ಇತರೆ ಕಾರಣಗಳಿಂದ ಮೃತಪಟ್ಟ ಕುಟುಂಬ ಸದಸ್ಯರಿಗೆ ಪ್ರಕೃತಿ ವಿಕೋಪ ನಿಧಿಯಿಂದ ನೀಡಲಾಗುವ ನಾಲ್ಕು ಲಕ್ಷದ ಪರಿಹಾರದ ಜತೆಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಒಂದು ಲಕ್ಷ ರೂ. ಹೆಚ್ಚುವರಿ ಹಣ ನೀಡಲು ಆದೇಶ ಮಾಡಲಾಗಿದೆ. ಭಾರೀ ಮಳೆ ಹಾಗೂ ಪ್ರವಾಹ, ಸಿಡಿಲು ಇತರೆ ಪ್ರಕೃತಿ ವಿಕೋಪ ಕಾರಣಗಳಿಂದ ಮೃತಪಟ್ಟಿರುವ ಕುಟುಂಬ ಸದಸ್ಯರಿಗೆ ಎನ್ಡಿಆರ್ಎಫ್ ಮಾರ್ಗಸೂಚಿಯಂತೆ ನೀಡಲಾಗುವ ನಾಲ್ಕು ಲಕ್ಷದ ಜತೆಗೆ ಒಂದು ಲಕ್ಷ ರೂ. ಹೆಚ್ಚುವರಿಯಾಗಿ ಪರಿಹಾರ ನೀಡಿ ಸರ್ಕಾರಕ್ಕೆ ವರದಿ ಸಲ್ಲಿಸಿದ ನಂತರ ಹೆಚ್ಚುವರಿ ಮೊತ್ತ ಒಂದು ಲಕ್ಷ ರೂ.ಗಳನ್ನು ಮರುಭರಣ ಮಾಡಲು ಸರ್ಕಾರ ನಿರ್ಧರಿಸುತ್ತದೆ.
ಮಳೆಯಿಂದ ಭಾಗಶಃ ಹಾನಿಯಾದ ಮನೆಗಳಿಗೆ ಪರಿಹಾರ ನೀಡುವಲ್ಲಿ ಬಹಳ ವ್ಯತ್ಯಾಸವಿರುತ್ತದೆ. ಮಳೆಹಾನಿ ಶೇ.15 ಅಥವಾ ಅದಕ್ಕಿಂತ ಹೆಚ್ಚಾಗಿದೆಯೇ ಎಂಬುದನ್ನು ಪರಿಶೀಲಿಸಿ ಮನೆ ಹಾನಿಗೆ 5200ರಿಂದ 95,100ರೂ.ವರೆಗೆ ಪರಿಹಾರವನ್ನು ಆಯಾ ಜಿಲ್ಲಾಧಿಕಾರಿಗಳು ವಿವೇಚನೆಗೆ ಒಳಪಟ್ಟು ಬಿಡುಗಡೆ ಮಾಡಬಹುದಾಗಿದೆ.
ಜಿಲ್ಲಾಧಿಕಾರಿಗಳು ಮನೆ ಹಾನಿಯ ಪ್ರಮಾಣಕ್ಕೆ ಅನುಗುಣವಾಗಿ ಶೇ.15ರಿಂದ 75ರವರೆಗಿನ ಶೇಕಡಾವಾರನ್ನು ಅವಲಂಭಿಸಿ ಪರಿಹಾರವನ್ನು ನೀಡಬಹುದಾಗಿದೆ.ಶೇ.75ಕ್ಕಿಂತ ಹೆಚ್ಚಿನ ಹಾನಿಯನ್ನು ಪೂರ್ಣ ಮಟ್ಟದ ಹಾನಿಯೊಂದು ಪರಿಗಣಿಸಿ ಪರಿಹಾರ ನೀಡಲು ನಿರ್ಧರಿಸಲಾಗಿದೆ. ಒಂದು ವೇಳೆ ಪೂರ್ಣ ಪ್ರಮಾಣದ ಮಳೆ ಹಾನಿಯಾಗಿದ್ದಲ್ಲಿ ಬಾದಿತರಿಗೆ ಸರ್ಕಾರದ ವಿವಿಧ ವಸತಿ ಯೋಜನೆಯಡಿ ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ಮೊದಲ ಆದ್ಯತೆ ನೀಡಬೇಕಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.