ಬೋನಿಗೆ ಬಿತ್ತು ಭಯ ಹುಟ್ಟಿಸಿದ್ದ ಗಂಡು ಹುಲಿ

ಈ ಸುದ್ದಿಯನ್ನು ಶೇರ್ ಮಾಡಿ

ಎಚ್.ಡಿ.ಕೋಟೆ, ಸೆ.9- ಸರಗೂರು ತಾಲ್ಲೂಕಿನ ಸುತ್ತಮುತ್ತಲ ಪ್ರದೇಶಗಳಲ್ಲಿ ಕಳೆದ ಕೆಲ ದಿನಗಳಿಂದ ಗಂಡು ಹುಲಿಯೊಂದು ಜಾನುವಾರುಗಳನ್ನು ತಿಂದು ತಾಲ್ಲೂಕಿನ ಜನತೆಯಲ್ಲಿ ಆತಂಕಕ್ಕೆ ಕಾರಣವಾಗಿದ್ದ ಮುದಿ ಹುಲಿ ಅರಣ್ಯ ಇಲಾಖೆ ಬೀಸಿದ ಬಲೆಯ ಯಶಸ್ವಿ ಕಾರ್ಯಚರಣೆಗೆ ಸೆರೆಸಿಕ್ಕಿದೆ.

ಸರಗೂರು ತಾಲ್ಲೂಕಿನ ಮೂರ್‍ಬಾಂದ್, ಕಳಸೂರು, ಹೆಗ್ಗನೂರು, ಎನ್.ಬೇಗೂರು ಪ್ರದೇಶಗಳಲ್ಲಿ ಕಳೆದ 20 ದಿನಗಳಿಂದ ನಿರಂತರವಾಗಿ ಈ ಪ್ರದೇಶದ ಜನತೆಯ ಸಾಕು ಪ್ರಾಣಿಗಳಾದ ಹಸು, ಕರು, ಎಮ್ಮೆ, ಆಡು, ಕುರಿಗಳನ್ನು ಹಗಲು ರಾತ್ರಿಗಳೆನ್ನದೆ ನಿರ್ಭಯವಾಗಿ ಜಾನುವಾರುಗಳ ಮೇಲೆ ಎರಗಿ ಬಲಿ ತೆಗೆದುಕೊಂಡಿದ್ದ ಸುಮಾರು 10 ವರ್ಷದ ಗಂಡು ಹುಲಿ ಹೆಚ್.ಡಿ.ಕೋಟೆ, ಸರಗೂರು, ಹುಣಸೂರು ಅರಣ್ಯ ಇಲಾಖೆಯ ನೂರಾರು ಮಂದಿ ಹಾಗೂ ಐದಾರು ಸಾಕಾನೆಗಳು ಮತ್ತು ಪೊಲೀಸರ ನೆರವಿನಿಂದಾಗಿ ಮಂಗಳವಾರ ಸೆರೆಸಿಕ್ಕಿದೆ.

ತಾಲ್ಲೂಕಿನ ಎನ್.ಬೇಗೂರು ಅರಣ್ಯ ವಲಯದ ಕಾಡಂಚಿನಿಂದ ಪ್ರತ್ಯಕ್ಷವಾದ ಈ ಹುಲಿ ದೇವಲಾಪುರಹುಂಡಿ ಗ್ರಾಮದ ಜಮೀನಿನ ಬಳಿ ಅರಣ್ಯ ಇಲಾಖೆಯ ವೈದ್ಯಾಧಿಕಾರಿಗಳು ಅರಿವಳಿಕೆ ಚುಚ್ಚುಮದ್ದಿನ ಪ್ರಹಾರದ ಮೂಲಕ ಹುಲಿಯನ್ನು ಪ್ರಜ್ಞಾಶೂನ್ಯಗೊಳಿಸಿ ನಂತರ ಬೋನಿಗೆ ಹಾಕುವ ಮೂಲಕ ಸತತ 20 ದಿನಗಳಿಂದ ನಡೆಯುತ್ತಿದ್ದ ಹುಲಿ ಕಾರ್ಯಾಚರಣೆಗೆ ಇತಿಶ್ರೀ ಹಾಡಲಾಯಿತು.

ಈ ವೇಳೆ ಪತ್ರಿಕೆಯೊಂದಿಗೆ ಬಂಡಿಪುರ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಕ್ಷೇತ್ರ ನಿರ್ದೇಶಕ ಟಿ.ಬಾಲಚಂದ್ರ ಮಾತನಾಡಿ, ಸೆರೆ ಸಿಕ್ಕಿರುವ ಹುಲಿ ವಯೋ ಸಹಜವಾಗಿ ಮುದಿತನ ಕಾಡುತ್ತಿದ್ದು ಬೇಟೆಯಾಡುವ ಶಕ್ತಿ ಕುಂದಿರುವ ಹಿನ್ನೆಲೆಯಲ್ಲಿ ಗ್ರಾಮಗಳಿಗೆ ಲಗ್ಗೆಯಿಟ್ಟು ದುರ್ಬಲ ಪ್ರಾಣಿಗಳ ಮೇಲೆ ದಾಳಿ ನಡೆಸಿ ತನ್ನ ಹಸಿವನ್ನು ನೀಗಿಸಿಕೊಳ್ಳುವ ಹಿನ್ನೆಲೆಯಲ್ಲಿ ಹುಲಿ ಹಳ್ಳಿಗಳತ್ತ ಮುಖ ಮಾಡಿದ್ದು ಇದರ ಹಲ್ಲುಗಳು ತೀವ್ರವಾಗಿ ಸವೆದು ಹೊಗಿದ್ದು ಬೇಟೆಯಾಡಲು ಅಶಕ್ತವಾಗಿತ್ತು ಎಂದರು.

ಸೆರೆ ಸಿಕ್ಕಿರುವ ಹುಲಿಯನ್ನು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ತಾಂತ್ರಿಕ ಸಮಿತಿಯ ಅಂತಿಮ ನಿರ್ದೇಶನ ಮೇರೆಗೆ ಬನ್ನೇರುಘಟ್ಟ ವನ್ಯಜೀವಿ ಪುನರ್ವಸತಿ ಕೇಂದ್ರದಲ್ಲಿ ಇದರ ಆರೈಕೆಯ ಚಿಂತನೆ ನಡೆಯುತ್ತಿದೆ. ಸ್ಥಳಕ್ಕೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರವಿಕುಮಾರ್, ಎ.ಸಿ.ಎಫ್ ರಂಗಸ್ವಾಮಿ, ಪಶುವೈದ್ಯಾಧಿಕಾರಿ ನಾಗರಾಜು, ವಲಯ ಅರಣ್ಯಾಧಿಕಾರಿಗಳಾದ ಮಹದೇವ್, ಶಶಿಧರ್, ಮಂಜುನಾಥ್, ಚೇತನ್, ಷಣ್ಮುಗ, ಸಿದ್ದರಾಜು, ರಾಮಾಂಜನೇಯ, ಅನಿಲ್‍ಕುಮಾರ್, ಶಿವಣ್ಣೇಗೌಡ, ನವೀನ್‍ಕುಮಾರ್, ಅಂತೋಣಿ, ರಾಜೀವ್, ಅಕ್ರಮ್ ಪಾಷ, ರಂಜಿತ್, ಹಾಗೂ ಇನ್ನಿತರ ಅರಣ್ಯ ಇಲಾಖೆ ಅಧಿಕಾರಿಗಳು ಹುಲಿ ಸೆರೆ ಕಾರ್ಯಾಚರಣೆಯ ನೇತೃತ್ವದಲ್ಲಿ ಪಾಲ್ಗೊಂಡಿದ್ದರು.

ಸೆರೆಸಿಕ್ಕ ಹುಲಿಯನ್ನು ನೋಡಲು ಮುಗಿಬಿದ್ದ ಜನತೆಯನ್ನು ನಿಯಂತ್ರಿಸಲು ಅರಣ್ಯ ಇಲಾಖೆ ಹಾಗೂ ಪೊಲೀಸರು ತೀವ್ರ ಹೈರಾಣಾದರು ಗ್ರಾಮಸ್ಥರ ನೆರವಿನೊಂದಿಗೆ ಜನಸ್ತೋಮವನ್ನು ನಿಯಂತ್ರಿಸಿದರು. ಅಂತಿಮವಾಗಿ ಹುಲಿ ಸೆರೆಸಿಕ್ಕ ಪ್ರಕರಣದಿಂದ ಸರಗೂರು ತಾಲ್ಲೂಕಿನ ಸುತ್ತಮುತ್ತಲ ಪ್ರದೇಶದ ಜನತೆ ನೆಮ್ಮದಿಯ ನಿಟ್ಟುಸಿರು ಬಿಟ್ಟಂತಾಗಿದೆ.

Facebook Comments