ದಿನಕ್ಕೊಂದು ಜಾಗದಲ್ಲಿ ಕಾಣಿಸಿಕೊಂಡು ಅರಣ್ಯ ಇಲಾಖೆಯ ನಿದ್ದೆಗೆಡಿಸಿದ ಹುಲಿ

ಈ ಸುದ್ದಿಯನ್ನು ಶೇರ್ ಮಾಡಿ

ಹುಬ್ಬಳ್ಳಿ, ಫೆ.13- ಕಲಘಟಗಿ ತಾಲೂಕಿನ ಬೆಂಡಲಗಟ್ಟಿ ಗ್ರಾಮದಲ್ಲಿ ಹುಲಿ ಕಾಣಿಸಿಕೊಂಡಿದ್ದು, ಸ್ಥಳೀಯರು ಆತಂಕಗೊಂಡಿದ್ದಾರೆ. ದಿನಕ್ಕೊಂದು ಜಾಗ ಬದಲಿಸುತ್ತಿರುವ ಹುಲಿ ಅರಣ್ಯ ಇಲಾಖೆಯ ನಿದ್ದೆಗೆಡಿಸಿದೆ.  ಬೆಂಡಲಗಟ್ಟಿ ವ್ಯಾಪ್ತಿಯಿಂದ ಫೆ.10 ರ ತಡರಾತ್ರಿ ಸಂಚರಿಸಿರಬಹುದೆನ್ನಲಾದ ಹುಲಿಯು, 11 ರಂದು ಬೆಳಗಿನ ಸಮಯದಲ್ಲಿ ತಾಲೂಕಿನ ತಬಕದಹೊನ್ನಿಹಳ್ಳಿ ಸನಿಹದ ಹುಣಸಿಕಟ್ಟಿ ಜಮೀನಿನಲ್ಲಿ ಸಂಚರಿಸಿದೆ.

ನಂತರ ಸಂಜೆ ಸಮಯದಲ್ಲಿ ಮುಂಡಗೋಡ ತಾಲೂಕಿನ ವಡಗಟ್ಟಾ ಚೆಕ್ ಪೋಸ್ಟ್ ಬಳಿ ಕೆರೆಯಲ್ಲಿ ನೀರು ಕುಡಿದಿದೆ ಎಂಬ ಮಾಹಿತಿಯನ್ನು ಕೆಲ ರೈತರು ನೀಡಿದ್ದಾರೆ.  ಫೆ.12 ರಂದು ಯಲ್ಲಾಪುರ ತಾಲೂಕಿನ ಕಿರವತ್ತಿ ಬಳಿಯ ಕೋಣನದಡ್ಡಿ ಬಳಿ ಹುಲಿಯನ್ನು ಕಂಡಿದ್ದೇವೆ ಎಂದು ಶಿಕ್ಷಕರೊಬ್ಬರು ಮಾಹಿತಿ ನೀಡಿರುವುದಾಗಿ ಕೇಳಿಬಂದಿದೆ.

ಆದರೆ ಇವುಗಳ ಖಚಿತತೆ ಕುರಿತು ಉತ್ತರಕನ್ನಡ ಜಿಲ್ಲೆಯ ಮುಂಡಗೋಡ, ಧುಂಡಸಿ ಹಾಗೂ ಯಲ್ಲಾಪುರ ವ್ಯಾಪ್ತಿಯ ಇಲಾಖಾ ಸಿಬ್ಬಂದಿಯೊಂದಿಗೆ ಮಾಹಿತಿ ವಿನಿಮಯ ನಡೆದಿದೆ.
ಅಧಿಕಾರಿಗಳು ಮತ್ತು ಸಿಬ್ಬಂದಿ ಕೂಡ ಹುಲಿಯ ಚಲನವಲನದ ಕುರಿತು ನಿಗಾವಹಿಸಿದ್ದಾರೆ. ಆದರೆ ಇದುವರೆಗೆ ಯಾವುದೇ ಮಾಹಿತಿ ಬಂದಿಲ್ಲ. ಅರಣ್ಯ ಇಲಾಖೆಗೆ ಚಳ್ಳೆ ಹಣ್ಣು ತಿನಿಸುತ್ತಿರುವ ಹುಲಿಯಿಂದ ಸಾರ್ವಜನಿಕರಲ್ಲಿ ಇನ್ನು ಆತಂಕವನ್ನು ಹೆಚ್ಚುವಂತೆ ಮಾಡಿದೆ.

Facebook Comments