71ನೇ ಗಣರಾಜ್ಯೋತ್ಸವ ಸಂಭ್ರಮ, ದೆಹಲಿಯಲ್ಲಿ ಅಭೂತಪೂರ್ವ ಭದ್ರತೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜ.26- ಉಗ್ರರ ದಾಳಿಯ ಆತಂಕದ ನಡುವೆಯೇ ದೇಶದಾದ್ಯಂತ 71ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ರಾಜಧಾನಿ ದೆಹಲಿಯಲ್ಲಿ ಬಿಗಿ ಭದ್ರತೆಯನ್ನು ನಿಯೋಜಿಸಲಾಗಿದೆ. ರಾಜಧಾನಿ ದೆಹಲಿಯ ರಾಷ್ಟ್ರಪತಿ ಭವನದ ಮುಂಭಾಗದಿಂದ ರಾಜಪಥದಿಂದ ಇಂಡಿಯಾ ಗೇಟ್‍ವರೆಗೆ ಸುಮಾರು 8 ಕಿಲೋ ಮೀಟರ್ ಗಣರಾಜ್ಯೋತ್ಸವದ ಪರೇಡ್ ಸಂದರ್ಭದಲ್ಲಿ ವ್ಯಾಪಕ ಭದ್ರತಾ ಏರ್ಪಾಡುಗಳನ್ನು ಮಾಡಲಾಗಿತ್ತು.

ದೆಹಲಿಯಲ್ಲಿ ಒಟ್ಟು 22 ಸಾವಿರ ಪೊಲೀಸರನ್ನು ನಿಯೋಜನೆಗೊಳಿಸಲಾಗಿತ್ತು. ರಾಜಪಥದ ಸುತ್ತ 10 ಸಾವಿರ ಪೊಲೀಸರ ಭದ್ರತೆ ಒದಗಿಸಲಾಗಿತ್ತು.  ವೇದಿಕೆ ಸುತ್ತ ಎನ್‍ಎಸ್‍ಜಿ, ಎಸ್‍ಜಿಪಿ, ಐಟಿಬಿಪಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿತ್ತು.

ಸುಲಭ ಸಂಚಾರಕ್ಕೆ 2 ಸಾವಿರ ಟ್ರಾಫಿಕ್ ಪೊಲೀಸರನ್ನು ನೇಮಕ ಮಾಡಲಾಗಿದ್ದು, 150 ಉನ್ನತ ತಂತ್ರಜ್ಞಾನದ ಸಿಸಿಟಿವಿಗಳನ್ನು ಅಳವಡಿಸಲಾಗಿದೆ.  ಭದ್ರತೆ ದೃಷ್ಟಿಯಿಂದ ಎತ್ತರದ ಕಟ್ಟಡಗಳಲ್ಲಿ ಶಾರ್ಪ್ ಶೂಟರ್‍ಗಳನ್ನು ನೇಮಕ ಮಾಡಿದ್ದು, ಡ್ರೋಣ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಈ ಬಾರಿ ಚಹರೆ ಗುರುತಿಸುವ ತಂತ್ರಜ್ಞಾನವನ್ನೂ ಕೂಡ ಬಳಕೆ ಮಾಡಿಕೊಳ್ಳಲಾಗಿದೆ.

ಕೇಂದ್ರಾಡಳಿತ ಪ್ರದೇಶವಾದ ಜಮ್ಮು-ಕಾಶ್ಮೀರದಲ್ಲೂ ಗಣರಾಜ್ಯೋತ್ಸವ ಪ್ರಯುಕ್ತ ಅಭೂತಪೂರ್ವ ಭದ್ರತೆ ಒದಗಿಸಲಾಗಿತ್ತು. ಪಾಕಿಸ್ತಾನ ಬೆಂಬಲಿತ ಉಗ್ರರ ದಾಳಿ ಸಾಧ್ಯತೆ ಹಿನ್ನೆಲೆಯಲ್ಲಿ ಕಣಿವೆ ಪ್ರಾಂತ್ಯದಾದ್ಯಂತ ವ್ಯಾಪಕ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ದೇಶದ ವಿವಿಧ ರಾಜ್ಯಗಳಲ್ಲೂ ಕೂಡ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ.

Facebook Comments