ತಿಹಾರ್ ಜೈಲಿನಲ್ಲಿ ಕೈದಿಗಳಿಗಾಗಿ ಕೊರೊನಾ ಲಸಿಕೆ ಕೇಂದ್ರ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮಾ.28- ಅರ್ಹ ಕೈದಿಗಳಿಗೆ ಕೊರೊನಾ ಲಸಿಕೆ ನೀಡಲು ದೆಹಲಿ ಕಾರಾಗೃಹ ಇಲಾಖೆ ತಿಹಾರ್ ಜೈಲಿನೊಳಗೆ ಕೋವಿಡ್-19 ಲಸಿಕೆ ಕೇಂದ್ರ ಸ್ಥಾಪಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೆಹಲಿಯ ಕಾರಾಗೃಹಗಳಲ್ಲಿ ಒಟ್ಟು 326 ಕೈದಿಗಳು 60 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದಾರೆ ಮತ್ತು 300ಕ್ಕೂ ಹೆಚ್ಚು ಜನರು 45-59 ವಯಸ್ಸಿನ ವಿವಿಧ ಅನಾರೋಗ್ಯ ಸಮಸ್ಯೆಯಿಂದ ಭಾದಿಸುತ್ತಿದ್ದು, ಕೇಂದ್ರ ಜೈಲು ಆಸ್ಪತ್ರೆಯಲ್ಲಿ ಜೈಲು ಸಂಖ್ಯೆ 3ರಲ್ಲಿ ಕೇಂದ್ರ ಸ್ಥಾಪಿಸಲಾಗಿದೆ ಎಂದು ಹೇಳಿದರು.

ಜೈಲು ಅಧಿಕಾರಿಗಳ ಪ್ರಕಾರ, ತಿಹಾರ್, ರೋಹಿಣಿ ಮತ್ತು ಮಂಡೋಲಿ ಜೈಲುಗಳಲ್ಲಿ ಸುಮಾರು 70 ರಿಂದ 80 ಕೈದಿಗಳಿಗೆ ಇದುವರೆಗೆ ಲಸಿಕೆ ನೀಡಲಾಗಿದೆ. ಅಗತ್ಯವಿದ್ದರೆ, ಮಂಡೋಲಿ ಜೈಲಿನಲ್ಲಿಯೂ ಲಸಿಕೆ ಕೇಂದ್ರವನ್ನು ತೆರೆಯಲಾಗುವುದು ಎಂದು ಮಹಾನಿರ್ದೇಶಕ ಸಂದೀಪ್ ಗೋಯೆಲ್ ತಿಳಿಸಿದ್ದಾರೆ. ಇದಕ್ಕೂ ಮುನ್ನ ತಿಹಾರ್ ಜೈಲಿನ ಕೈದಿಗಳನ್ನು ಲಸಿಕೆಗಾಗಿ ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.

ಜೈಲು ಕೈದಿಗಳಿಗೆ ವ್ಯಾಕ್ಸಿನೇಷನ್ ಡ್ರೈವ್ ಮಾ.18 ರಿಂದ ಪ್ರಾರಂಭವಾಯಿತು ಮತ್ತು 13 ಕೈದಿಗಳಿಗೆ ಮೊದಲ ದಿನ ಕೋವಿಡ್ -19 ಮೊದಲ ಡೋಸ್ ನೀಡಲಾಗಿದೆ. ಲಸಿಕೆ ಪಡೆಯಲು ಅರ್ಹರಾದ ಕೈದಿಗಳ ಕುಟುಂಬ ಸದಸ್ಯರಿಗೆ ವಾಟ್ಸಾಪ್ ಮೆಸೇಜಿಂಗ್ ಆ್ಯಪ್ ಮೂಲಕ ಅಗತ್ಯ ದಾಖಲೆಗಳನ್ನು ಕಳುಹಿಸಲು ತಿಳಿಸಲಾಗಿದೆ.

ನಾವು ಕೈದಿಗಳ ಕುಟುಂಬಗಳೊಂದಿಗೆ ಮಾತನಾಡಿದ್ದೇವೆ. ನೋಂದಣಿಗೆ ಅಗತ್ಯವಾದ ದಾಖಲೆಗಳನ್ನು ವಾಟ್ಸಾಪ್ ಮೂಲಕ ಕಳುಹಿಸಲು ಕೇಳಿದೆವು ಮತ್ತು ನಂತರ ಅವರಿಗೆ ಲಸಿಕೆ ಹಾಕಿದ್ದು, ಲಸಿಕೆ ಪಡೆದ ಯಾವುದೇ ಕೈದಿಗಳಲಿ ಯಾವುದೇ ತೊಂದರೆಗಳು ವರದಿಯಾಗಿಲ್ಲ ಎಂದು ಜೈಲಿನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Facebook Comments