ಕರ್ನಾಟಕಕ್ಕೆ ಸೇರ್ಪಡೆಯಾಗುತ್ತಾ ಮಂತ್ರಾಲಯ..?

ಈ ಸುದ್ದಿಯನ್ನು ಶೇರ್ ಮಾಡಿ

ಕರ್ನೂಲು, ಜ.2- ಸುಪ್ರಸಿದ್ಧ ಮಂತ್ರಾಲಯ ಕ್ಷೇತ್ರ ಒಳಗೊಂಡಿರುವ ಆಂಧ್ರ ಪ್ರದೇಶದ ಕರ್ನೂಲು ಜಿಲ್ಲೆಯ ಮಂತ್ರಾಲಯ ವಿಧಾನಸಭಾ ಕ್ಷೇತ್ರವನ್ನು ಕರ್ನಾಟಕ ರಾಜ್ಯಕ್ಕೆ ಸೇರ್ಪಡೆ ಮಾಡಬೇಕು ಎಂದು ಅಲ್ಲಿನ ಮುಖಂಡರು ಒತ್ತಾಯಿಸಿರುವ ಬೆಳವಣಿಗೆ ನಡೆದಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ತೆಲುಗುದೇಶಂ ಪಕ್ಷದಿಂದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ತಿಕ್ಕಾರೆಡ್ಡಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಆಂದ್ರ ಪ್ರದೇಶ ಸರ್ಕಾರ ಮಂತ್ರಾಲಯದ ಅಭಿವೃದ್ಧಿಯನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ ಎಂದು ಆರೋಪಿಸಿದ್ದಾರೆ.

ಮಂತ್ರಾಲಯ ಕರ್ನಾಟಕದ ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳ ಗಡಿ ಭಾಗವಾಗಿದೆ. ಇಲ್ಲಿ ಕನ್ನಡ ಮಾತನಾಡುವವರೆ ಹೆಚ್ಚಾಗಿದ್ದಾರೆ. ಭಾವನಾತ್ಮಕವಾಗಿ ಮಂತ್ರಾಲಯ ಕರ್ನಾಟಕದೊಂದಿಗೆ ಹೆಚ್ಚಿನ ನಂಟು ಹೊಂದಿದೆ. ಮಂತ್ರಾಯಕ್ಕೆ ಬರುವ ಭಕ್ತರ ಸಂಖ್ಯೆಯಲ್ಲಿ ಕರ್ನಾಟಕದವರ ಸಂಖ್ಯೆಯೇ ಹೆಚ್ಚಾಗಿದೆ, ಅರ್ಚಕರೂ ಕೂಡ ಕರ್ನಾಟಕದಿಂದಲೇ ಬಂದು ಹೋಗುತ್ತಿದ್ದಾರೆ ಎಂದು ಹೇಳಿದರು.

ನಮ್ಮ ಪೂರ್ವಿಕರು ಮತ್ತು ಸಂಬಂಧಿಕರು ಬಳ್ಳಾರಿ, ರಾಯಚೂರು ಮತ್ತು, ಗುಲ್ಬರ್ಗದಲ್ಲೇ ಹೆಚ್ಚಾಗಿದ್ದಾರೆ. ಮಂತ್ರಾಲಯಕ್ಕೆ ತುಂಗಾಭದ್ರಾ ಅಣೆಕಟ್ಟೆಯಿಂದ ನೀರು ಪೂರೈಕೆಯಾಗುತ್ತದೆ. ಈ ಹಿಂದೆ ಭಾಷಾವಾರು ಪ್ರಾಂತ್ಯ ವಿಂಗಡಣೆಯಾದಾಗ ಆಕಸ್ಮಿಕವಾಗಿ ಆಂಧ್ರ ಪ್ರದೇಶಕ್ಕೆ ಸೇರ್ಪಡೆಯಾಗಿದೆ. ಆದರೆ ಮಂತ್ರಾಲಯ ಕರ್ನಾಟಕದೊಂದಿಗೆ ಹೆಚ್ಚಿನ ನಂಟು ಹೊಂದಿದೆ. ಇಲ್ಲಿಗೆ ಬಳ್ಳಾರಿ ಮತ್ತು ಹೊಸಪೇಟೆಯಿಂದಲೆ ಎಲ್ಲಾ ರೀತಿಯ ಸೌಲಭ್ಯಗಳು ಪೂರೈಕೆಯಾಗುತ್ತಿವೆ. ದೂರದಲ್ಲಿರುವ ಆಂಧ್ರ ಪ್ರದೇಶದ ವೈಎಸ್‍ಆರ್ ಕಾಂಗ್ರೆಸ್ ಸರ್ಕಾರ ಮಂತ್ರಾಲಯದ ಅಭಿವೃದ್ಧಿಯನ್ನು ಸಂಪೂರ್ಣ ನಿರ್ಲಕ್ಷ್ಯಿಸಿದೆ ಎಂದು ಆವರು ಆರೋಪಿಸಿದರು.

ಮಂತ್ರಾಲಯದಿಂದ ಬೆಂಗಳೂರಿಗೆ 5 ಗಂಟೆಯ ಪ್ರಯಾಣದ ಅವಧಿಯಾಗಿದೆ. ಆಂಧ್ರ ಪ್ರದೇಶಕ್ಕೆ ಅಮರಾವತಿ ಹೊಸ ರಾಜಧಾನಿಯಾದರೆ ಭೌಗೋಳಿಕವಾಗಿ ಒಂದು ಸಾವಿರ ಕಿಲೋ ಮೀಟರ್ ದೂರವಾಗಲಿದೆ. ಸುಮಾರು 2 ದಿನ ಪ್ರಯಾಣ ಮಾಡಬೇಕಿದೆ. ಭೌಗೋಳಿಕವಾಗಿ ಅಮರಾವತಿಗಿಂತಲೂ ಬೆಂಗಳೂರು ಮಂತ್ರಾಲಯಕ್ಕೆ ಹತ್ತಿರ ಇದೆ. ಒಂದು ವೇಳೆ ಆಂಧ್ರ ಪ್ರದೇಶದ ಕರ್ನೂಲು ಜಿಲ್ಲೆಯನ್ನು ರಾಜಧಾನಿ ಮಾಡುವುದಾದರೆ ಮಂತ್ರಾಲಯ ಆಂಧ್ರ ಪ್ರದೇಶದಲ್ಲೆ ಉಳಿಯಲು ನಮ್ಮ ಅಭ್ಯಂತರ ಇಲ್ಲ ಎಂದರು.

ಈ ಬೇಡಿಕೆಯ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ. ಜನರ ಭಾವನೆಗಳನ್ನು ಆಧರಿಸಿ ನಾನು ಹೇಳುತ್ತಿದ್ದೇನೆ. ಈಗಾಗಲೇ ಆಂಧ್ರ ಪ್ರದೇಶ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಕೇಂದ್ರ ಸರ್ಕಾರಕ್ಕೂ ಮನವಿ ಸಲ್ಲಿಸಲಾಗುವುದು. ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಮಾಡಲಾಗುವುದು.

ನಮ್ಮ ಬೇಡಿಕೆ ಈಡೇರದಿದ್ದರೆ ಕಾನೂನು ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು. ತಿಕ್ಕಾರೆಡ್ಡಿ 2019ರ ವಿಧಾನಸಭೆ ಚುನಾವಣೆಯಲ್ಲಿ ತೆಲುಗುದೇಶಂ ಪಕ್ಷದಿಂದ ಸ್ಪರ್ಧೆ ಮಾಡಿದ್ದರು. ವೈಎಸ್‍ಆರ್ ಪಕ್ಷದ ಅಭ್ಯರ್ಥಿ ಬಲಗಣಿ ರೆಡ್ಡಿ ವಿರುದ್ಧ ಸೋಲು ಕಂಡಿದ್ದರು.

Facebook Comments