ಕೊರೋನಾ ಕೆಡುಗಾಲದಲ್ಲಿ ಚುನಾವಣಾ ಬೇಕಿತ್ತಾ..? : ನಿತೀಶ್ ಕಾಲೆಳೆದ ಪ್ರಶಾಂತ್

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜು.11- ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿರುವ ಕೊರೊನಾ ವೈರಸ್ ವಿರುದ್ಧ ಹೋರಾಡುವ ಸಮಯವಿದು. ಇಂತಹ ಸಮಯದಲ್ಲಿ ಚುನಾವಣೆ ನಡೆಸುವ ಅಗತ್ಯವಿದೆಯೇ ಎಂದು ಚುನಾವಣಾ ಚತುರ ಪ್ರಶಾಂತ್ ಕಿಶೋರ್ ಅವರು ಬಿಹಾರ ಮುಖ್ಯಮಂತ್ರಿ ನಿತೀಶ್‍ಕುಮಾರ್ ಅವರಿಗೆ ಟಾಂಗ್ ನೀಡಿದ್ದಾರೆ.

ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ಬಿಹಾರದಲ್ಲಿ ಕೊರೊನಾ ಪರಿಸ್ಥಿತಿ ಹದಗೆಟ್ಟಿದೆ. ಇಂತಹ ಸಂದರ್ಭದಲ್ಲಿ ಆತಂಕಕ್ಕೊಳಗಾಗಿರುವ ಜನರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕೇ ಹೊರತು ಚುನಾವಣಾ ಹರಿಬಿರಿ ಏಕೆ ಎಂದು ಟ್ವಿಟ್ಟರ್‍ನಲ್ಲಿ ಪ್ರಶಾಂತ್‍ಕಿಶೋರ್ ಅವರು ನಿತೀಶ್ ಅವರ ಕಾಲೆಳೆದಿದ್ದಾರೆ.

ನಿತೀಶ್‍ಜಿ ಅವರೇ ಇದು ಚುನಾವಣೆ ನಡೆಸಲು ಸಕಾಲವಲ್ಲ. ಚುನಾವಣೆಗೆ ಹರಿಬಿರಿ ನಡೆಸುವ ಬದಲು ಕೊರೊನಾ ವೈರಸ್‍ನಿಂದ ಕಂಗೆಟ್ಟಿರುವ ಜನರ ಕಣ್ಣೀರು ಒರೆಸುವ ಕಾರ್ಯ ಕೈಗೊಳ್ಳಿ ಎಂದು ಕುಟುಕಿದ್ದಾರೆ.

ಒಂದು ಕಾಲದಲ್ಲಿ ನಿತೀಶ್ ಅವರ ಆತ್ಮೀಯ ವಲಯದಲ್ಲಿ ಗುರುತಿಸಿಕೊಂಡಿದ್ದ ಪ್ರಶಾಂತ್‍ಕಿಶೋರ್ ಅವರು ಬಿಹಾರದಲ್ಲಿ ಜೆಡಿಯು ಪಕ್ಷ ಆಡಳಿತಕ್ಕೆ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ನಂತರದ ದಿನಗಳಲ್ಲಿ ಪ್ರಶಾಂತ್ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ನಡುವೆ ವೈಮನಸ್ಸು ಮೂಡಿದ ಹಿನ್ನೆಲೆಯಲ್ಲಿ ಪ್ರಸಾಂತ್‍ರನ್ನು ಜೆಡಿಯು ಪಕ್ಷದಿಂದ ಉಚ್ಛಾಟನೆ ಮಾಡಲಾಗಿತ್ತು.

ಇತ್ತೀಚೆಗೆ ಬಿಜೆಪಿ ಮತ್ತು ಜೆಡಿಯು ಪಕ್ಷಗಳ ಮಹತ್ವದ ಸಭೆ ನಡೆದಿತ್ತು. ಸಭೆ ನಂತರ ಉಭಯ ಪಕ್ಷಗಳ ಮುಖಂಡರು ಚುನಾವಣೆ ಎದುರಿಸಲು ನಾವು ಸಿದ್ಧ ಎಂದು ಘೋಷಿಸಿದ್ದ ಬೆನ್ನಲ್ಲೇ ಪ್ರಶಾಂತ್ ಅವರ ಈ ಟ್ವಿಟ್ ಬಿಹಾರದಲ್ಲಿ ಭಾರೀ ಸದ್ದು ಮಾಡಿದೆ.

Facebook Comments

Sri Raghav

Admin