ಟಿಪ್ಪರ್‌ಗೆ ಕಾರು ಡಿಕ್ಕಿ : ಒಂದೇ ಕುಟುಂಬದ ಮೂವರು ಸೇರಿ ನಾಲ್ವರ ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ

ಆನೇಕಲ್, ಆ.27- ಕಾರು ಮತ್ತು ಟಿಪ್ಪರ್ ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸೇರಿ ಮತ್ತೊಬ್ಬರು ಮೃತಪಟ್ಟಿರುವ ಘಟನೆ ಸರ್ಜಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಉತ್ತರ ಪ್ರದೇಶ ಮೂಲದ ಅಂಜನಿ ಯಾದವ್ (31), ನೇಹಾ ಅಂಜನಿ ಯಾದವ್ (28), ಮಗ ಧೃವ ಯಾದವ್ (2) ಹಾಗೂ ಸ್ನೇಹಿತರಾದ ಶುಭ್ರ ಸಂತೋಷ್ (27) ಮೃತ ದುರ್ದೈವಿಗಳು.

ಸಾಫ್ಟ್‍ವೇರ್ ಎಂಜಿನಿಯರ್ ಆಗಿದ್ದ ಅಂಜನಿ ಯಾದವ್ ಕುಟುಂಬ ಸರ್ಜಾಪುರ ರಸ್ತೆಯ ಬಿಲ್ಲಾಪುರ ಗ್ರಾಮದ ಸಮೀಪವಿರುವ ಡಿಎಸ್ ಮಾಕ್ಸ್ ಬಡಾವಣೆಯಲ್ಲಿ ವಾಸವಾಗಿದ್ದರು. ಮನೆಗೆ ಬಂದಿದ್ದ ಸ್ನೇಹಿತ ಕುಟುಂಬದ ಜತೆ ರಾತ್ರಿ ಊಟಕ್ಕೆಂದು ಹೋಂಡಾಸಿಟಿ ಕಾರಿನಲ್ಲಿ ಹೊರಗೆ ಹೋಗಿದ್ದರು. ಅಂಜನಿ ಯಾದವ್ ಅವರು ಕಾರು ಚಲಾಯಿಸುತ್ತಿದ್ದರು ಎನ್ನಲಾಗಿದೆ.

ರಾತ್ರಿ ಊಟ ಮುಗಿಸಿಕೊಂಡು ಮನೆಗೆ ಹಿಂದಿರುಗುತ್ತಿದ್ದಾಗ ಆನೇಕಲ್ ತಾಲೂಕಿನ ಅತ್ತಿಬೆಲೆ ಮತ್ತು ಸರ್ಜಾಪುರ ರಸ್ತೆಯ ಕಾನ್ಫಿಡೆಂಟ್ ಅಪಾರ್ಟ್‍ಮೆಂಟ್ ಬಳಿ ಕಾರು ನಿಯಂತ್ರಣ ತಪ್ಪಿ ಡಿವೈಡರ್‍ಗೆ ಡಿಕ್ಕಿ ಹೊಡೆದು ನಂತರ ಎದುರಿನಿಂದ ಬರುತ್ತಿದ್ದ ಟಿಪ್ಪರ್‍ಗೆ ಅಪ್ಪಳಿಸಿದ ಪರಿಣಾಮ ಸ್ಥಳದಲ್ಲೇ ನಾಲ್ವರೂ ದಾರುಣವಾಗಿ ಮೃತಪಟ್ಟಿದ್ದಾರೆ.

ಕಾರಿನ ಅತಿ ವೇಗವೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಘಟನೆಯಲ್ಲಿ ಸಂತೋಷ್ (29), ಸಂಜೀವ್ ಸಂತೋಷ್ (2) ಎಂಬುವವರು ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸುದ್ದಿ ತಿಳಿಸಿದ ಸರ್ಜಾಪುರ ಪೊಲೀಸ್ ಠಾಣೆ ಆರಕ್ಷಕ ಉಪನಿರೀಕ್ಷಕ ಮಂಜುನಾಥ್‍ರೆಡ್ಡಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಸರ್ಜಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments