ಬೈಕ್‍ಗೆ ಟಿಪ್ಪರ್ ಡಿಕ್ಕಿ ; ತಾಯಿ- ಮಗು ಸ್ಥಳದಲ್ಲೇ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.25-ಅತಿವೇಗವಾಗಿ ಬಂದ ಟಿಪ್ಪರ್ ಲಾರಿ ಮುಂದೆ ಹೋಗುತ್ತಿದ್ದ ಬುಲೆಟ್ ಬೈಕ್‍ಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದ ತಾಯಿ-ಮಗು ಮೇಲೆ ಹರಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಎಚ್‍ಎಎಲ್ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ.
ಕೆ.ಆರ್.ಪುರಂ ನಿವಾಸಿ ಶ್ರೀದೇವಿ(21) ಮತ್ತು ಒಂದು ವರ್ಷದ ಗಂಡುಮಗು ದಕ್ಷಿತ್ ಮೃತಪಟ್ಟವರು.

ಮೂಲತಃ ತಮಿಳುನಾಡಿನ ಧರ್ಮಪುರಿಯವರಾದ ಶಿವಕುಮಾರ್ ಕೆ.ಆರ್.ಪುರಂನಲ್ಲಿ ಪತ್ನಿ ಹಾಗೂ ಮಗುವಿನೊಂದಿಗೆ ವಾಸವಾಗಿದ್ದರು.
ಇಂದು ಬೆಳಗ್ಗೆ ಊರಿಗೆ ಹೋಗುವ ಸಲುವಾಗಿ ಪತ್ನಿ ಹಾಗೂ ಮಗುವನ್ನು ಕಳೆದುಕೊಂಡು ಬುಲೆಟ್ ಬೈಕ್‍ನಲ್ಲಿ ಕೆ.ಆರ್.ಪುರಂನಿಂದ ತಮಿಳುನಾಡಿಗೆ ಹೋಗುತ್ತಿದ್ದರು.

ಮಾರತ್ತಹಳ್ಳಿ ರಿಂಗ್ ರಸ್ತೆ ಬಳಿ ಚಲಿಸುತ್ತಿದ್ದಾಗ ಬೆಳಗ್ಗೆ 7.15ರ ಸುಮಾರಿನಲ್ಲಿ ಅತಿವೇಗವಾಗಿ ಬಂದ ಟಿಪ್ಪರ್ ಲಾರಿ ಇವರ ಬೈಕ್‍ಗೆ ಡಿಕ್ಕಿ ಹೊಡೆದಿದೆ.
ಪರಿಣಾಮ ಶಿವಕುಮಾರ್ ಎಡಭಾಗಕ್ಕೆ ಬಿದ್ದಿದ್ದಾರೆ. ಬಲಭಾಗಕ್ಕೆ ಬಿದ್ದ ತಾಯಿ-ಮಗು ಮೇಲೆ ಅದೇ ವಾಹನ ಹರಿದ ಪರಿಣಾಮ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ಎಚ್‍ಎಎಲ್ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ತಾಯಿ-ಮಗುವಿನ ಮೃತದೇಹಗಳನ್ನು ಬೌರಿಂಗ್ ಆಸ್ಪತ್ರೆಗೆ ರವಾನಿಸಿದ್ದಾರೆ. ಟಿಪ್ಪರ್ ಲಾರಿ ಚಾಲಕನ ಅತಿವೇಗ ಹಾಗೂ ನಿರ್ಲಕ್ಷ್ಯ ಚಾಲನೆಯಿಂದ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments