ಪಠ್ಯಪುಸ್ತಕದಿಂದ ಟಿಪ್ಪುಸುಲ್ತಾನ್ ವಿಷಯವನ್ನು ತೆಗೆದುಹಾಕಿದ ಕೆಟಿಬಿಎಸ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.28- ಕರ್ನಾಟಕ ಪಠ್ಯ ಪುಸ್ತಕ ಸೊಸೈಟಿ (ಕೆಟಿಬಿಎಸ್) ಮೈಸೂರು ಇತಿಹಾಸದ ಪ್ರಮುಖ ಭಾಗವಾದ ಹೈದರ್ ಅಲಿ ಮತ್ತು ಟಿಪ್ಪುಸುಲ್ತಾನ್ ಪಠ್ಯವನ್ನು ತೆಗೆದುಹಾಕಿದೆ.

ಕೋವಿಡ್ ಕಾರಣದಿಂದಾಗಿ ಸಮಯದ ಕೊರತೆ ನೆಪವೊಡ್ಡಿ ಮೈಸೂರಿನ ಏಳನೇ ತರಗತಿ ಸಮಾಜ ವಿಜ್ಞಾನ ಪಠ್ಯದ ಐತಿಹಾಸಿಕ ಚರಿತ್ರೆ ಭಾಗದಿಂದ ಟಿಪ್ಪುಸುಲ್ತಾನ್ ಪಠ್ಯವನ್ನು ಕಿತ್ತು ಹಾಕಲಾಗಿದೆ.

ಈ ನಡುವೆ ಮೈಸೂರು ಇತಿಹಾಸವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಲು ಈ ವಿಷಯಗಳ ಬಗ್ಗೆ ಪ್ರಸ್ತುತಿಗಳನ್ನು ತಯಾರಿಸಿ ತೋರಿಸಬಹುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುವ ಕೆಟಿಬಿಎಸ್ ಹೇಳಿದೆ.

2020-21ರ ಶೈಕ್ಷಣಿಕ ವರ್ಷದ ಕೆಲಸದ ದಿನಗಳನ್ನು ಅಂದಾಜು ಮಾಡಿ, ಭಾಗಗಳನ್ನು ಪರಿಷ್ಕರಣೆ ಅಥವಾ ಮೊಟಕು ಮಾಡಲಾಗಿದೆ. ಸೆಪ್ಟೆಂಬರ್ 1 ರಿಂದ 120 ದಿನಗಳಲ್ಲಿಅಗತ್ಯವಾದ ಪಠ್ಯದ ಭಾಗಗಳನ್ನು ಕಲಿಸಲು ಕೆಟಿಬಿಎಸ್ 6 ರಿಂದ 10 ನೇ ತರಗತಿಗಳ ಸಮಾಜ ವಿಜ್ಞಾನ ಶಿಕ್ಷಕರಿಗೆ ಒಂದು ಕೈಪಿಡಿಯನ್ನು ಬಿಡುಗಡೆ ಮಾಡಿದೆ. ಇದೇ ರೀತಿ ಬೇರೆ ಬೇರೆ ವಿಷಯಗಳ ಕೈಪಿಡಿಯೂ ಸಹ ಬಿಡುಗಡೆಯಾಗಿದೆ.

ಧರ್ಮಗಳು, ವಾಸ್ತುಶಿಲ್ಪ, ಶಿಲ್ಪಕಲೆ ಮತ್ತು ತುಳುನಾಡಿನ ಜಾನಪದ ಮೊದಲಾದ ಹೆಚ್ಚು ಪ್ರಮುಖ ವಿಷಯಗಳತ್ತ ಶಿಕ್ಷಕರು ಗಮನಹರಿಸಬೇಕಾಗಿದ್ದು ಅದಕ್ಕಾಗಿ ಟಿಪ್ಪು ಅಧ್ಯಾಯ ಮೊಟಕುಗೊಳಿಸಲಾಗಿದೆ. ಇದಲ್ಲದೆ ರಾಣಿ ಅಬ್ಬಕ್ಕ, ಕ್ರಿಸ್ತನ ಜೀವನ, ಧರ್ಮಬೋಧನೆ ಅಧ್ಯಾಯಗಳನ್ನೂ ಸಹ ಮೊಟಕು ಮಾಡಲಾಗಿದೆ.

ಪೋರ್ಚುಗೀಸರೊಂದಿಗೆ ಹೋರಾಡಿದ ಮೊದಲ ತುಳುವ ರಾಣಿ ರಾಣಿ ಅಬ್ಬಕ್ಕ ದೇವಿ ಕುರಿತ ಅಧ್ಯಾಯವನ್ನೂ ತೆಗೆದುಹಾಕಲಾಗಿದೆ. ಕಲೆ, ಸಾಹಿತ್ಯ, ಜಾನಪದ, ರಂಗಭೂಮಿ, ನೃತ್ಯ, ಕಾಡುಗಳು, ಕಾಡು ಪ್ರಾಣಿಗಳು, ರಾಷ್ಟ್ರೀಯ ಉದ್ಯಾನಗಳು, ಬೆಂಗಳೂರು ಮತ್ತು ಮೈಸೂರುಗಳ ನೈಸರ್ಗಿಕ ಮತ್ತು ಸಾಂಸ್ಕೃತಿಕ ಸಂಪನ್ಮೂಲಗಳ ಕುರಿತು ಕಲಿಸಲು ನಿಗದಿಪಡಿಸಿದ ಸಮಯವನ್ನು ಮೂಲ ವೇಳಾಪಟ್ಟಿಯ ಶೇಕಡಾ 4ಕ್ಕೆ ಮಾತ್ರ ಸೀಮಿತಗೊಳಿಸಲಾಗಿದೆ. ಕಲಬುರಗಿ, ಬೆಳಗಾವಿ ಭಾಗದ ಇದೇ ಅಂಶಗಳನ್ನು ಸಹ ಕೈಬಿಡಲಾಗಿದೆ.

ಯೇಸುಕ್ರಿಸ್ತ ಮತ್ತು ಪ್ರವಾದಿ ಮಹಮ್ಮದ್ ಅವರ ಬೋಧನೆಗಳ ಸಂಪೂರ್ಣ ಅಧ್ಯಾಯವನ್ನು ಆರನೇ ತರಗತಿಯಿಂದ ಕೈಬಿಡಲಾಗಿದೆ. ಆದರೆ ವಿದ್ಯಾರ್ಥಿಗಳು ಈ ಧಾರ್ಮಿಕ ವ್ಯಕ್ತಿಗಳು ಮತ್ತು ಅವರ ಬೋಧನೆಗಳನ್ನು ಒಂಬತ್ತನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಾರೆ.

ಬೌದ್ಧಧರ್ಮ ಮತ್ತು ಜೈನ ಧರ್ಮವನ್ನು ಕಲಿಸಲು ನಿಗದಿಪಡಿಸಿದ ಸಮಯವನ್ನು ಸಹ ಶೇ.50 ರಷ್ಟು ಕಡಿಮೆ ಮಾಡಲಾಗಿದೆ ಎಂದು ಕೆಟಿಬಿಎಸ್ ಹೇಳಿದೆ.

ಶಾತವಾಹನರು, ಕದಂಬರು, ಗಂಗರ ಸಾಹಿತ್ಯ, ವಿಜ್ಞಾನ , ಕಲೆ ಮತ್ತು ವಾಸ್ತುಶಿಲ್ಪ , ರಜಪೂತರ ಕೊಡುಗೆಗಳು ಪಠ್ಯಪುಸ್ತಕದಲ್ಲಿ ಕೈಬಿಡಲಾಗಿರುವ ಇತರೆ ಪ್ರಧಾನ ವಿಷಯಗಳಾಗಿವೆ.

Facebook Comments

Sri Raghav

Admin