ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಹಿಂದೆಂದೂ ಕಾಣದ ಬಂದ್..!

ಈ ಸುದ್ದಿಯನ್ನು ಶೇರ್ ಮಾಡಿ

ತಿರುಪತಿ/ಬೆಂಗಳೂರು, ಮಾ.21- ಭೂ ವೈಕುಂಠವೆಂದೇ ನಂಬಲಾಗಿರುವ ತಿರುಪತಿ ತಿರುಮಲದಲ್ಲಿ ಹಿಂದೆಂದೂ ಕಾಣದಂತಹ ಅಗೋಚರ ಬಂದ್ ವಾತಾವರಣ ಕಂಡು ಬಂದಿದ್ದು, ಭಕ್ತರಲ್ಲಿ ಆತಂಕ ಮನೆ ಮಾಡಿದೆ. ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೊನಾ ವೈರಸ್‍ನಿಂದ ಆರ್ಥಿಕತೆಗೆ ಹೊಡೆತ ಬಿದ್ದರೆ ಇನ್ನೊಂದೆಡೆ ಧಾರ್ಮಿಕ ಕ್ಷೇತ್ರಗಳಿಗೂ ಬಿಸಿ ತಟ್ಟಿದೆ.

ಸಂಕಟ ಬಂದಾಗ ವೆಂಕಟ ರಮಣ ಎಂಬಂತೆ ಕೋಟ್ಯಂತರ ಭಕ್ತರ ಆರಾಧ್ಯ ದೈವ ಶ್ರೀ ವೆಂಕಟೇಶ್ವರ ಸ್ವಾಮಿಯ ದಿವ್ಯ ಸಾನಿಧ್ಯ ತಿರುಮಲದಲ್ಲಿ ಸದಾ ಕಾಲ ಭಕ್ತರಿಂದ ತುಂಬಿ ತುಳುಕುತ್ತಿದ್ದ ಪ್ರದೇಶಗಳು ಇಂದು ನಿರ್ಜನವಾಗಿದ್ದು, ಬಂದ್ ವಾತಾವರಣ ಸೃಷ್ಟಿಯಾಗಿದೆ. ಕಳೆದ ಒಂದು ತಿಂಗಳಿನಿಂದ ಕ್ಷೇತ್ರಕ್ಕೆ ಬರುವವರ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿದೆ. ಬೆಟ್ಟದ ಮೇಲೆ ಶ್ರೀನಿವಾಸನ ದರ್ಶನಕ್ಕೆ ಕಳೆದ ಒಂದು ವಾರದಿಂದ ಅಲ್ಪ ಮಟ್ಟಿನಲ್ಲಿ ಭಕ್ತರು ಆಗಮಿಸುತ್ತಿದ್ದರು. ನಿನ್ನೆಯಿಂದ ಬೆರಳೆಣಿಕೆಯಷ್ಟು ಜನರು ಬರುತ್ತಿದ್ದು, ಆತಂಕ ಮನೆ ಮಾಡಿದೆ.

ತಿರುಪತಿ ತಿರುಮಲ ದೇವಸ್ಥಾನ ಟ್ರಸ್ಟ್ ಕೂಡ ಹಲವು ಮುಂಜಾಗ್ರತಾ ಕ್ರಮ ಕೈಗೊಂಡಿರುವ ಹಿನ್ನೆಲೆಯಲ್ಲಿ ಬೆಟ್ಟದ ಕೆಳಗೆ ತಿರುಪತಿಯಲ್ಲಿ ಜನರ ಓಡಾಟ ಕೂಡ ವಿರಳವಾಗಿ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು ಸ್ಥಳೀಯರು ಮನೆಯಿಂದ ಆಚೆ ಬರುತ್ತಿಲ್ಲ.

ಇನ್ನು ಕೆಲವು ದಿನಗಳ ಇದೇ ಪರಿಸ್ಥಿತಿ ಮುಂದುವರೆಯಲಿದೆ. ಭಕ್ತರು ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಟಿಟಿಡಿ ಅಧಿಕಾರಿಗಳು ಹೇಳಿದ್ದಾರೆ. ಅದೇನೇ ಇರಲಿ ಕಲಿಯುಗ ವರದ ತಿರುಪತಿ ತಿಮ್ಮಪ್ಪ ದೇಶಕ್ಕೆ ಎದುರಾಗಿರುವ ಸಂಕಷ್ಟವನ್ನು ಪರಿಹರಿಸಲಿ ಎಂದು ಪ್ರಾರ್ಥಿಸುತ್ತಿದ್ದಾರೆ.

 

Facebook Comments