ಆಸ್ಪತ್ರೆ ಸೇರಿದ ಸಿಎಂ, ಮುಖ್ಯ ಕಾರ್ಯದರ್ಶಿ ಹೆಗಲಿಗೆ ಆಡಳಿತದ ಜವಾಬ್ದಾರಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.3- ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಕೊರೊನಾ ಪಾಸಿಟಿವ್ ಕಂಡುಬಂದು ಆಸ್ಪತ್ರೆಗೆ ದಾಖಲಾಗಿರುವ ಹಿನ್ನೆಲೆಯಲ್ಲಿ ಆಡಳಿತದ ಹೊಣೆಗಾರಿಕೆಯನ್ನು ಮುಖ್ಯ ಕಾರ್ಯದರ್ಶಿ ಹೆಗಲಿಗೆ ನೀಡಲಾಗಿದೆ.

ಯಡಿಯೂರಪ್ಪನವರು ಇನ್ನು ನಾಲ್ಕೈದು ದಿನ ಆಸ್ಪತ್ರೆಯಲ್ಲೇ ಇರಲಿದ್ದು,ನಂತರ ಬಿಡುಗಡೆಯಾಗಲಿದ್ದಾರೆ. ಬಳಿಕವೂ ಅವರು ಕನಿಷ್ಟ ಒಂದು ವಾರದಿಂದ 10 ದಿನಗಳ ಕಾಲ ಹೋಂ ಕ್ವಾರಂಟೈನ್‍ಗೆ ಒಳಗಾಗಬೇಕಾಗುತ್ತದೆ.

ಸರಿಸುಮಾರು ಎರಡು ವಾರಗಳ ಕಾಲ ಆಡಳಿತದ ಜವಾಬ್ದಾರಿಯಿಂದ ಬಿಎಸ್‍ವೈ ವಿಮುಖರಾಗಲಿದ್ದು, ಅವರ ಗೈರುಹಾಜರಿಯಲ್ಲಿ ಆಡಳಿತದ ಹೊಣೆಗಾರಿಕೆಯನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಅವರಿಗೆ ನೀಡಲಾಗಿದೆ.

ಮುಖ್ಯಮಂತ್ರಿಗಳು ನಡೆಸುತ್ತಿದ್ದ ಕೋವಿಡ್ ಕಾರ್ಯಪಡೆಯ ಸಭೆ, ಸಮಾರಂಭಗಳು, ಸರ್ಕಾರದ ಪ್ರಮುಖ ತೀರ್ಮಾನಗಳು ಸೇರಿದಂತೆ ಮತ್ತಿತರ ಪ್ರಮುಖ ನಿರ್ಧಾರಗಳನ್ನು ಮುಖ್ಯ ಕಾರ್ಯದರ್ಶಿಗಳೇ ತೆಗೆದುಕೊಳ್ಳಲಿದ್ದಾರೆ.

ಮುಖ್ಯ ಕಾರ್ಯದರ್ಶಿಗಳೊಂದಿಗೆ ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಡಾ.ಅಶ್ವಥ್ ನಾರಾಯಣ, ಲಕ್ಷ್ಮಣ ಸವದಿ, ಹಿರಿಯ ಸಚಿವರಾದ ಆರ್.ಅಶೋಕ್, ಬಸವರಾಜ್ ಬೊಮ್ಮಾಯಿ, ಜೆ.ಸಿ.ಮಾಧುಸ್ವಾಮಿ ಸೇರಿದಂತೆ ಅಪರ ಮುಖ್ಯ ಕಾರ್ಯದರ್ಶಿಗಳು ಮತ್ತಿತರರಿಗೂ ಇಲಾಖಾವಾರು ಉಸ್ತುವಾರಿಯನ್ನು ನೀಡಲಾಗಿದೆ ಎಂದು ತಿಳಿದುಬಂದಿದೆ.

ಪ್ರತಿದಿನ ಕಡ್ಡಾಯವಾಗಿ ಕೋವಿಡ್ ನಿಯಂತ್ರಣ ಕುರಿತಂತೆ ಕಾರ್ಯಪಡೆ ಸಭೆ ನಡೆಸುವುದು, ತಜ್ಞ ವೈದ್ಯರಿಂದ ಕಾಲಕಾಲಕ್ಕೆ ಸಲಹೆಸೂಚನೆಗಳನ್ನು ಪಡೆಯುವುದು, ಆಡಳಿತಾತ್ಮಕ ನಿರ್ಧಾರಗಳನ್ನು ಕೈಗೊಳ್ಳುವುದು ಸೇರಿದಂತೆ ಕೆಲವು ಮಹತ್ವದ ಜವಾಬ್ದಾರಿಗಳನ್ನು ನೀಡಲಾಗಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಕಾನೂನು ಸುವ್ಯವಸ್ಥೆ ಕುರಿತಂತೆ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲಪಂಥ್, ಗುಪ್ತಚರ ವಿಭಾಗ ಮುಖ್ಯಸ್ಥ ದಯಾನಂದ್, ಕಾನೂನು ಮತ್ತು ಸುವ್ಯವಸ್ಥೆ , ವಲಯ ಐಜಿಪಿಗಳು, ಅಪರ ವಿಭಾಗದ ಮುಖ್ಯಸ್ಥರು ಸೇರಿದಂತೆ ಮತ್ತಿತರ ಜೊತೆಯೂ ಸಿಎಂ ದೂರವಾಣಿ ಮೂಲಕ ಮಾತುಕತೆ ನಡೆಸಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಬೇಕೆಂದು ಸೂಚನೆ ಕೊಟ್ಟಿದ್ದಾರೆ.

ಅದರಲ್ಲೂ ಬುಧವಾರ ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರುತ್ತಿದ್ದು, ಕೆಲವು ಕಿಡಿಗೇಡಿಗಳು ಪರಿಸ್ಥಿತಿ ದುರ್ಬಲ ಪಡೆಯುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳಲ್ಲೂ ಹೆಚ್ಚಿನ ಭದ್ರತೆ ನಿಯೋಜಿಸುವಂತೆ ಸಲಹೆ ಮಾಡಿದ್ದಾರೆ.

ಈಗಾಗಲೇ ಪ್ರವೀಣ್ ಸೂದ್ ಮತ್ತು ಕಮಲ್ ಪಂಥ್ ಅವರೊಂದಿಗೆ ಪ್ರತ್ಯೇಕವಾಗಿ ದೂರವಾಣಿ ಮೂಲಕ ಕಾನೂನು ಸುವ್ಯವಸ್ಥೆಸ ಸೇರಿದಂತೆ ಕ್ಷಣ ಕ್ಷಣಕ್ಕೂ ಮಾಹಿತಿ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.

Facebook Comments

Sri Raghav

Admin