ವಿದ್ಯಾಸಾಗರ್ ಪ್ರತಿಮ ಧ್ವಂಸಕ್ಕೆ ಟಿಎಂಸಿ ಗೂಂಡಾಗಳೇ ಕಾರಣ : ಮೋದಿ

ಈ ಸುದ್ದಿಯನ್ನು ಶೇರ್ ಮಾಡಿ

ಮೌ(ಉ.ಪ್ರ),ಮೇ16- ಕಳೆದ ಮಂಗಳವಾರ ರಾತ್ರಿ ಕೋಲ್ಕತ್ತಾದಲ್ಲಿ ನಡೆದ ಹಿಂಸಾಚಾರಕ್ಕೆ ತೃಣಮೂಲ ಕಾಂಗ್ರೆಸ್‍ನ ಗೂಂಡಾಗಳೇ ನೇರ ಕಾರಣ ಎಂದು ಪ್ರಧಾನಿ ನರೇಂದ್ರಮೋದಿ ಆರೋಪಿಸಿದ್ದಾರೆ.

ಉತ್ತರಪ್ರದೇಶದ ಮೌ ಎಂಬಲ್ಲಿ ಇಂದು ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಿದ ಅವರು, ಕೋಲ್ಕತ್ತಾ ಗಲಭೆಗೆ ಟಿಎಂಸಿಯ ವ್ಯವಸ್ಥಿತ ಪಿತೂರಿಯೇ ಮೂಲ ಕಾರಣ. ಸೋಲುವ ಭೀತಿಯಲ್ಲಿರುವ ಮಮತಾ ಬ್ಯಾನರ್ಜಿ ತಮ್ಮ ಗೂಂಡಾಗಳ ಮೂಲಕ ಈ ಕೃತ್ಯ ನಡೆಸಿದ್ದಾರೆ ಎಂದು ದೂರಿದರು.

ಟಿಎಂಸಿ ಗೂಂಡಾಗಳಿಂದ ಹಾನಿಗೊಳಗಾಗಿರುವ ಸಮಾಜ ಸುಧಾರಕ ವಿದ್ಯಾಚಂದ್ರ ಸಾಗರ್ ಪ್ರತಿಮೆಯನ್ನು ಪುನಃ ನಮ್ಮ ಪಕ್ಷ ಅದೇ ಸ್ಥಳದಲ್ಲೇ ಪಂಚಧಾತ ಪ್ರತಿಮೆ ಎತ್ತಿ ನಿಲ್ಲಿಸಲಿದೆ. ಇದು ನನ್ನ ಶಪಥವೂ ಕೂಡ. ಯಾವ ಸ್ಥಳದಲ್ಲೇ ಪ್ರತಿಮೆ ಧ್ವಂಸವಾಗಿತ್ತೋ ಅದೇ ಸ್ಥಳದಲ್ಲಿ ಪ್ರತಿಮೆ ನಿರ್ಮಾಣ ಮಾಡುತ್ತೇನೆಂದು ವಾಗ್ದಾನ ನೀಡಿದರು.

ಕೆಲ ದಿನಗಳ ಹಿಂದೆ ಮಿಡ್ನಾಪುರದಲ್ಲಿ ನಾನು ಬಹಿರಂಗ ಪ್ರಚಾರ ನಡೆಸುವ ವೇಳೆಯೂ ಟಿಎಂಸಿ ಗೂಂಡಾಗಳು ಇದೇ ದುಂಡಾವರ್ತಿ ನಡೆಸಿದ್ದರು. ಆದರೆ ಸ್ವಾಭಿಮಾನಿ ಬಂಗಾಳಿ ಜನರು ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ನಮ್ಮ ಪಕ್ಷದ ರ್ಯಾಲಿಗೆ ಬಂದರು.

ಎರಡು ದಿನಗಳ ಹಿಂದೆ ಕೋಲ್ಕತ್ತಾದಲ್ಲಿ ನಡೆದ ರೋಡ್ ಶೋ ವೇಳೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದನ್ನು ಸಹಿಸಿದವರು ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿ ಗಲಭೆ ಸೃಷ್ಟಿಸಿದ್ದಾರೆ ಎಂದು ಮೋದಿ ತರಾಟೆಗೆ ತೆಗೆದುಕೊಂಡರು.

ಈ ಬಾರಿ ಕೋಲ್ಕತ್ತಾದಲ್ಲಿ ಬಿಜೆಪಿಯ ಕಮಲ ಅರಳುವುದನ್ನು ಯಾವ ಶಕ್ತಿಗಳು ತಡೆಯಲು ಸಾಧ್ಯವಿಲ್ಲ. ಪಶ್ಚಿಮ ಬಂಗಾಳದ ಗೆಲುವು ಪ್ರಜಾಪ್ರಭುತ್ವದ ಗೆಲುವು. 23ರ ಫಲಿತಾಂಶ ಎಲ್ಲರಿಗೂ ಉತ್ತರ ನೀಡುತ್ತದೆ ಎಂದು ಸೂಚ್ಯವಾಗಿ ಮಮತಾ ಬ್ಯಾನರ್ಜಿ ಅವರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದರು.

ಬಿಜೆಪಿ ಎಂದಿಗೂ ಹಿಂಸಾಚಾರದಲ್ಲಿ ನಂಬಿಕೆ ಇಟ್ಟಿಲ್ಲ. ನಾವು ಶಾಂತಿಯಿಂದಲೇ ಚುನಾವಣೆ ನಡೆಸಬೇಕೆಂಬ ಉದ್ದೇಶವನ್ನು ಇಟ್ಟುಕೊಂಡಿದ್ದೇವೆ.  ಜಮ್ಮುಕಾಶ್ಮೀರದಲ್ಲಿ ಶಾಂತಿಯುತ ಮತದಾನ ನಡೆಯುವಾಗ ಪಶ್ಚಿಮ ಬಂಗಾಳದಲ್ಲಿ ಇದು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದರು.

ಗಲಭೆಗೆ ಪ್ರಚೋದನೆ ನೀಡಿದವರು ಯಾರು ಎಂಬುದು ಎಲ್ಲರಿಗೂ ಗೊತ್ತು.ಮುಖ ಉಳಿಸಿಕೊಳ್ಳಲು ಈಗ ಜನತೆಯನ್ನು ಎತ್ತಿ ಕಟ್ಟುತ್ತಿದ್ದಾರೆ. ಸಾಕು ನಿಮ್ಮ ನಾಟಕ ನಿಲ್ಲಿಸಿ ಎಂದು ನೇರವಾಗಿ ಮಮತಾ ಬ್ಯಾನಾರ್ಜಿ ವಿರುದ್ಧ ವಾಗ್ದಾಳಿ ಮಾಡಿದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ